ಬೆಂಗಳೂರು: ಸಿಎಂ ಬಸವರಾಜು ಬೊಮ್ಮಾಯಿ ಅವರಿಗೆ ಟಿಕೆಟ್ ಸಿಗುವುದು ಅನುಮಾನ ಎಂದು ಕೇಂದ್ರ ಮಾಜಿ ಸಚಿವ ಜಿಎಂ ಸಿದ್ದೇಶ್ವರ್ ನೀಡಿದ ಹೇಳಿಕೆ ಪ್ರಸ್ತಾಪಿಸಿ ಕಾಂಗ್ರೆಸ್ ಪಕ್ಷ ಬಿಜೆಪಿಗೆ ಲೇವಡಿ ಮಾಡಿದೆ. ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಸವರಾಜ್ ಬೊಮ್ಮಾಯಿ ಅವರಿಗೆ ನಾಯಕತ್ವ ಕೊಡುವುದಿರಲಿ, ಟಿಕೆಟ್ ಕೊಡುವುದೇ ಅನುಮಾನವಂತೆ! ಸಂಸದ ಸಿದ್ದೇಶ್ ಹೇಳಿದ್ದಕ್ಕೂ, ಅಮಿತ್ ಶಾ ಸಿಎಂ ಹೆಸರನ್ನೇ ಪ್ರಸ್ತಾಪ ಮಾಡದಿರುವುದಕ್ಕೂ ಸಂಬಂಧವಿದೆಯೇ ರಾಜ್ಯ ಬಿಜೆಪಿ? ಬೊಮ್ಮಾಯಿ ಅವರ ವೈಫಲ್ಯ, ಭ್ರಷ್ಟಾಚಾರವು ಟಿಕೆಟ್ ನಿರಾಕರಿಸುವಷ್ಟು ಅಸಹನೆ ಹುಟ್ಟಿಸಿದೆಯೇ? ಜನಾಕ್ರೋಶ ಹೈಕಮಾಂಡಿಗೆ ಅರ್ಥವಾಗಿದೆಯೇ? ಎಂದು ಕೇಳಿದೆ.
ಮೋದಿ ಮುಖ ತೋರಿಸಿದರೂ ಮತ ಬರುವುದಿಲ್ಲ. ಬೊಮ್ಮಾಯಿ ಮುಖ ತೋರಿಸಿದರೂ ಮತ ಬರುವುದಿಲ್ಲ. ಸಿಎಂ ಕ್ಯಾಂಡಿಡೇಟ್ ಎಂದು ಬಿಂಬಿಸಿಕೊಳ್ಳುತ್ತಿರುವ ಸಂತೋಷ್, ಜೋಶಿ ಮುಖ ತೋರಿದರೂ ಮತ ಬರುವುದಿಲ್ಲ. ಬಿಜೆಪಿಯಲ್ಲಿನ ಯಾವ ಮುಖಕ್ಕೂ ಜನರಲ್ಲಿ ಭರವಸೆ ಹುಟ್ಟಿಸುವ ಯೋಗ್ಯತೆ ಇಲ್ಲ ಎಂಬುದು ವಿಜಯೇಂದ್ರರ ಮಾತಿನ ಸಾರಾಂಶ ಅಲ್ಲವೇ ರಾಜ್ಯ ಬಿಜೆಪಿ? ಎಂದು ಪ್ರಶ್ನಸಿದೆ.
ಯಡಿಯೂರಪ್ಪ ಮೂಲೆಗುಂಪು ಮಾಡಲು ಶತಪ್ರಯತ್ನ :ಇನ್ನೂ ಬಸವರಾಜ್ ಬೊಮ್ಮಾಯಿ ಅವರಿಗೆ ಅಧಿಕಾರವಿಲ್ಲ, ಟಿಕೆಟ್ ಕೂಡ ಇಲ್ಲ. ಬಿಎಸ್ ಯಡಿಯೂರಪ್ಪಗೆ ಟಿಕೆಟ್ ನಿರ್ಧರಿಸುವ ಹಕ್ಕು ಮತ್ತು ಪ್ರಚಾರ ಸಮಿತಿಯ ನೇತೃತ್ವವಿಲ್ಲ. ವೇದಿಕೆಗಳಲ್ಲಿ ಜಾಗವಿಲ್ಲ. ಬಿಎಸ್ವೈ ಅವರ ರಾಜ್ಯ ಪ್ರವಾಸಕ್ಕೆ ಅವಕಾಶ ಕೊಡಲಿಲ್ಲ. ಬಿಎಸ್ವೈ ಬಿಜೆಪಿಗೆ ಅನಿವಾರ್ಯವಲ್ಲ. ಈ ಘಟನೆಗಳೇ ಈ ಹೇಳಿಕೆಗೆ ಸ್ಪೂರ್ತಿಯೇ ರಾಜ್ಯ ಬಿಜೆಪಿ? ಎಂದಿದೆ.
ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯ ನ್ಯೂನ್ಯತೆಗಳು ಒಂದೆರಡಲ್ಲ. ಸಮರ್ಪಕ ಆಂಬ್ಯುಲೆನ್ಸ್‌ಗಳಿಲ್ಲ, ಶೌಚಾಲಯಗಳಿಲ್ಲ. ಸುರಕ್ಷಾ ಕ್ರಮಗಳಿಲ್ಲ, ಸರ್ವಿಸ್ ರಸ್ತೆಗಳಿಲ್ಲ, ಕಳಪೆ ಕಾಮಗಾರಿಗೆ ಮಿತಿ ಇಲ್ಲ, ರಸ್ತೆ ಕಿತ್ತು ಬರುತ್ತಿದೆ, ಸುರಕ್ಷತೆ ಹಾಗೂ ವೈಜ್ಞಾನಿಕ ಮಾನದಂಡಗಳ ಪಾಲನೆಯಾಗಿಲ್ಲ, ಹೀಗಿರುವಾಗ ಯಾವ ಸಂತೋಷಕ್ಕೆ ಟೋಲ್ ಸುಲಿಗೆ ನಡೆಯುತ್ತಿದೆ? ಎಂದು ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ ರಾಜ್ಯ ಬಿಜೆಪಿಯನ್ನು ಕೇಳಿದೆ.