ದೊಡ್ಡಬಳ್ಳಾಪುರ:ಸಾಲದ ಸುಳಿಗೆ ಸಿಲುಕಿದವ ಸಾಲ ತೀರಿಸಲು ಒಂಟಿ ಮಹಿಳೆಯನ್ನು ಊರು ತೋರಿಸಲು ಕರೆದುಕೊಂಡು ಬಂದು ಆಕೆಯ ಜೀವ ತೆಗೆದಿದ್ದ. ಜೀವ ತೆಗೆದವನಿಗೆ ಇದೀಗ ಜೀವಾವಧಿ ಶಿಕ್ಷೆಯಾಗಿದೆ.
ದೊಡ್ಡಬಳ್ಳಾಪುರ ಪೊಲೀಸ್ ಠಾಣೆ ದೊಡ್ಡಬಳ್ಳಾಪುರ ತಾಲೂಕಿನ ಸಕ್ಕರೆಗೊಲ್ಲಹಳ್ಳಿಯ ಖಾಲಿಪಾಳ್ಳದ ನೀಲಗಿರಿ ತೋಪಿನಲ್ಲಿ 13-06-2017 ರಂದು ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಸುಮಾರು 40 ವರ್ಷದ ಮಹಿಳೆಯ ಶವ ಪತ್ತೆಯಾಗಿತ್ತು. ಈ ಬಗ್ಗೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಇದೀಗ ಕೊಲೆ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಘಟನೆ ಹಿನ್ನೆಲೆ
ಕೊಲೆಯಾದ ಮಹಿಳೆ 43 ವರ್ಷದ ಲಲಿತಮ್ಮ. ಈಕೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹಳೆಯಳನಾಡು ಗ್ರಾಮದ ನಿವಾಸಿ. ಈಕೆ ಬೆಂಗಳೂರು ಪೀಣ್ಯ ಬಳಿಯ ಹೆಗ್ಗನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ಒಂಟಿ ಜೀವನ ನಡೆಸುತ್ತಿದ್ದಳು. ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದ ಆಕೆಗೆ ಬೆಂಗಳೂರಿನ ಆಂದ್ರಹಳ್ಳಿ ಫ್ರೆಂಡ್ಸ್ ಕಾಲೋನಿ ನಿವಾಸಿ ರಂಗಣ್ಣನ ಪರಿಚಯವಾಗಿತ್ತು. ಇಬ್ಬರ ನಡುವೆ ಹಣಕಾಸಿನ ವಹಿವಾಟು ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.
ಸಾಲದ ಹಣ ತೀರಿಸೋಕೆ ಕೊಲೆ
ದುಶ್ಚಟಗಳ ದಾಸನಿಗಿದ್ದ ರಂಗಣ್ಣನಿಗೆ ಮೈ ತುಂಬಾ ಸಾಲ. ಹಣ ಕೊಟ್ಟವರ ಕಣ್ತಪ್ಪಿಸಿ ಓಡಾಡುತ್ತಿದ್ದ. ಸಾಲ ಕೊಟ್ಟವರು ಕಾಡಲು ಶುರು ಮಾಡಿದಾಗ ಅವನ ಕಣ್ಣಿಗೆ ಬಿದ್ದವಳು ಈ ಮಹಿಳೆ ಲಲಿತಮ್ಮ. ತನ್ನೂರು ತೋರಿಸುತ್ತೇನೆ ಎಂದು ನಂಬಿಸಿ ನೀಲಿಗಿರಿ ತೋಪಿಗೆ ಕರೆದುಕೊಂಡು ಬಂದು ಅವಳ ಜೀವ ತೆಗೆದು ಆಕೆಯ ಮೈ ಮೇಲಿದ್ದ ಒಡವೆ ದೋಚಿ ಪರಾರಿಯಾಗಿದ್ದ. ಪ್ರಕರಣ ಬೇಧಿಸಿದ ಪೊಲೀಸರಿಗೆ ಕೊಲೆಯಾದ 20 ದಿನದಲ್ಲೇ ಕೊಲೆ ಆರೋಪಿ ರಂಗಣ್ಣನೇ ಎಂದು ಖಚಿತವಾಗುತ್ತಿದ್ದಂತೆ ಆತನನ್ನು ಬಂಧಿಸಿದ್ದರು.
ಇನ್ನು ಪ್ರಕರಣವನ್ನು ಕೈಗೆತ್ತಿಕೊಂಡ ದೊಡ್ಡಬಳ್ಳಾಪುರದ ನಾಲ್ಕನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ನ್ಯಾಯಧೀಶರಾದ ಶುಕ್ಲಾಕ್ಷ ಪಾಲನ್ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.