ಬೆಂಗಳೂರು: ಕೋವಿಡ್ ಸೋಂಕಿತ ರೋಗಿಗಳು ಮೃತಪಟ್ಟಾಗ ಆಕ್ರೋಶಗೊಳ್ಳುವ ಸಂಬಂಧಿಕರು ವೈದ್ಯರು, ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಈ ಘಟನೆಗಳನ್ನು ವಿರೋಧಿಸಿ ನಿವಾಸಿ ವೈದ್ಯರ ಸಂಘ ಪ್ರತಿಭಟನೆಗೆ ಮುಂದಾಗಿದೆ.
ವೈದ್ಯರ ಮೇಲಿನ ಹಲ್ಲೆಗೆ ಖಂಡನೆ: ನಾಳೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ
ವೈದ್ಯರು, ಆಸ್ಪತ್ರೆ ಸಿಬ್ಬಂದಿ ಮೇಲಿನ ಹಲ್ಲೆ ವಿರೋಧಿಸಿ ರಾಜ್ಯ ನಿವಾಸಿ ವೈದ್ಯರ ಸಂಘ ನಾಳೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಿದೆ.
ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಕೋವಿಡ್ ವರದಿ ಬರುವ ಮೊದಲೇ ತೀರಿಕೊಂಡಾಗ, ಆಸ್ಪತ್ರೆಯ ವೈದ್ಯರ ಮೇಲೆ ಹಲ್ಲೆ ಮಾಡಲಾಗಿದೆ. ಬೆಳಗಾವಿಯ ಬೀಮ್ಸ್ ಆಸ್ಪತ್ರೆಯಲ್ಲಿ 40ಕ್ಕೂ ಹೆಚ್ಚು ಜನ ಕಿಡಿಗೇಡಿಗಳು ವೈದ್ಯರು, ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ಆಸ್ಪತ್ರೆಗೆ ಕಲ್ಲು ತೂರಿದ್ದಾರೆ. ಜೊತೆಗೆ, ಆ್ಯಂಬುಲೆನ್ಸ್‌ಗೆ ಬೆಂಕಿ ಹಚ್ಚಿದ್ದಾರೆ.
ಇಂತಹ ಘಟನೆಗಳಿಂದ ವೈದ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ಎಂದು ಐಎಮ್ ಸಂಘಟನೆಯ ರಾಜ್ಯ ಕಾರ್ಯದರ್ಶಿ ಡಾ. ಶ್ರೀನಿವಾಸ್ ಮನವಿ ಮಾಡಿದ್ದಾರೆ. ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡುವವರಿಗೆ 7 ವರ್ಷ ಶಿಕ್ಷೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆದ್ರೆ ಆ ಕಾನೂನು ಇನ್ನೂ ಜಾರಿಗೆ ಬಂದಿಲ್ಲ. ವೈದ್ಯರಿಗೂ ಒಂದು ಸಹನೆ ಇದೆ. ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.