ಬೆಂಗಳೂರು: ಸ್ವತಃ ವೈದ್ಯರೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ಇಂದು ವೈದ್ಯರ ದಿನಾಚರಣೆ ನಿಮಿತ್ತ ವೈದ್ಯರಲ್ಲಿ ವೈದ್ಯರಾಗಿಯೇ ಶುಭ ಕೋರಿ ಸಂಭ್ರಮಿಸಿದ ಪ್ರಸಂಗ ನಗರದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ನಡೆಯಿತು. ಬೆಳಗ್ಗೆಯೇ ಆಸ್ಪತ್ರೆಗೆ ಆಗಮಿಸಿದ ಡಿಸಿಎಂ, ವೈದ್ಯರಿಗೆ ಹೂಗುಚ್ಛ, ಸಿಹಿ ನೀಡಿ ಶುಭಾಶಯ ಕೋರಿದರು. ಜತೆಗೆ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಅವರ ಕಷ್ಟ-ಸುಖಗಳನ್ನು ಆಲಿಸಿದರು.
ನಾನೂ ವೈದ್ಯ ಎಂದು ಹೇಳಲು ಹೆಮ್ಮೆ ಇದೆ:
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಅಶ್ವತ್ಥ ನಾರಾಯಣ್ ನಾನು ವೈದ್ಯ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ. ಅದರಲ್ಲಿಯೂ ಇಷ್ಟು ಜನ ವೈದ್ಯರ ಜತೆ ನಾನೂ ವೈದ್ಯನಾಗಿ ಇರುವುದು ನನ್ನ ಸಂತೋಷವನ್ನು ಹೆಚ್ಚಿಸಿದೆ. ಕೋವಿಡ್ ಹಿನ್ನೆಲೆ ವೈದ್ಯರು ಒತ್ತಡದಲ್ಲಿದ್ದಾರೆಂಬುದು ನಿಜ. ಹಗಲಿರುಳೆನ್ನದೆ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಸೋಂಕಿಗೆ ಎದೆಯೊಡ್ಡಿ ಜನರ ಪ್ರಾಣವನ್ನು ಕಾಪಾಡುತ್ತಿದ್ದಾರೆ. "ವೈದ್ಯೋ ನಾರಾಯಣ ಹರಿ" ಎಂಬ ಮಾತು ಸುಳ್ಳಲ್ಲ ಎಂದರು.
ಆರೋಗ್ಯ ಇಲಾಖೆಗೆ 1,500 ಕೋಟಿ ರೂ.:
ವೈದ್ಯರು ಮತ್ತು ಜನರಿಗೆ ಅನುಕೂಲವಾಗುವಂತೆ ರಾಜ್ಯದ ಆರೋಗ್ಯ ಮೂಲ ಸೌಕರ್ಯಗಳನ್ನು ಆಮೂಲಾಗ್ರವಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಹೆಚ್ಚುವರಿಯಾಗಿ ಸುಮಾರು 1,500 ಕೋಟಿ ರೂ. ವೆಚ್ಚದಲ್ಲಿ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳಿಂದ ಮೊದಲುಗೊಂಡು ತಾಲೂಕು-ಜಿಲ್ಲಾಸ್ಪತ್ರೆಗಳ ಸೌಲಭ್ಯಗಳನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದೆ. ತಂತ್ರಜ್ಞಾನ ಅಭಿವೃದ್ಧಿ, ಮೂಲಸೌಕರ್ಯ, ವೈದ್ಯರು ಮತ್ತು ಸಿಬ್ಬಂದಿ ನೇಮಕ, ಮತ್ತಿತರೆ ಉದ್ದೇಶಕ್ಕಾಗಿ ಈ ಮೊತ್ತವನ್ನು ವಿನಿಯೋಗ ಮಾಡಲಾಗುತ್ತಿದೆ. ಪ್ರತೀ ತಾಲೂಕು ಆಸ್ಪತ್ರೆಯಲ್ಲಿ ಕೊನೆ ಪಕ್ಷ 25 ಐಸಿಯು ಬೆಡ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.