ಬೆಂಗಳೂರು: ಅನರ್ಹ ಶಾಸಕರ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ಪೂರ್ಣಗೊಂಡು ತೀರ್ಪು ಹೊರಬರುವವರೆಗೂ ಅವರ ಸ್ಪರ್ಧೆಗೆ ಅವಕಾಶ ನೀಡಬಾರದು ಎಂದು ಚುನಾವಣಾ ಆಯೋಗಕ್ಕೆ ವಕೀಲ ನಟರಾಜ ಶರ್ಮಾ ಮನವಿ ಸಲ್ಲಿಸಿದ್ದಾರೆ.
ಶೇಷಾದ್ರಿ ರಸ್ತೆಯಲ್ಲಿರುವ ಚುನಾವಣಾ ಆಯೋಗದ ಕಚೇರಿಗೆ ಹೈಕೋರ್ಟ್ ವಕೀಲ ನಟರಾಜ ಶರ್ಮಾ ಆಗಮಿಸಿ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರನ್ನು ಭೇಟಿಯಾಗಿ, ಅನರ್ಹ ಶಾಸಕರ ಸ್ಪರ್ಧೆಗೆ ಅವಕಾಶ ನೀಡದಂತೆ ಮನವಿ ಸಲ್ಲಿಸಿದ್ದಾರೆ.
ಚುನಾವಣಾಧಿಕಾರಿಗಳ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತನಾಗಿ ಇಂದು ಚುನಾವಣಾ ಆಯೋಗಕ್ಕೆ ಬಂದಿದ್ದೇನೆ. ಇಂದು ಚುನಾವಣೆ ಯಾವ ಕಾರಣಕ್ಕೆ ಎಂದು ಉತ್ತರ ಕೊಡಿ ಎಂದು ಕೇಳಿದ್ದೇನೆ. ಸ್ಪೀಕರ್ ರೂಲಿಂಗ್ನಿಂದ ಚುನಾವಣೆ ನಡೆಯುತ್ತಿದೆ. ಇದನ್ನು ಪ್ರಶ್ನಿಸಿರುವ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ಬಾಕಿ ಇದೆ, ಈಗ ಅವರಿಗೆ ಸ್ಪರ್ಧೆ ಮಾಡಲು ಅನುಮತಿ ಕೊಟ್ಟು ಅವರು ಚುನಾವಣೆಯಲ್ಲಿ ಗೆದ್ದ ನಂತರ ಅನರ್ಹತೆ ಪ್ರಕರಣದಲ್ಲಿ ಸೋತರೆ ಮತ್ತೆ ಅವರನ್ನು ಅನರ್ಹ ಮಾಡುವ ಅಧಿಕಾರ ಇದೆಯಾ?
ಒಂದು ವೇಳೆ ಸುಪ್ರೀಂಕೋರ್ಟ್ ಅನರ್ಹ ಮಾಡಿದರೆ ನಂತರ ಮತ್ತೆ ಚುನಾವಣೆ ಮಾಡಬೇಕಾಗಲಿದೆ. ಇದರ ಹೊರೆ ಸಾಮಾನ್ಯ ಪ್ರಜೆ ಮೇಲೆ ಬೀಳಲಿದೆ ಎನ್ನುವುದನ್ನು ಆಯೋಗದ ಗಮನಕ್ಕೆ ತಂದಿರುವುದಾಗಿ ತಿಳಿಸಿದರು.
ಸ್ಪೀಕರ್ ಕೊಟ್ಟಿರುವ ತೀರ್ಪನ್ನು ಓವರ್ ರೂಲ್ ಮಾಡುವ ಅಧಿಕಾರ ಆಯೋಗಕ್ಕೆ ಇದೆಯಾ ಎನ್ನುವ ಪ್ರಶ್ನೆ ಎದುರಾಗಿದೆ. ಹಾಗಾಗಿ ಈ ಪ್ರರಣದಲ್ಲಿ ಸುಪ್ರೀಂಕೋರ್ಟ್ ಅಂತಿಮ ಆದೇಶ ನೀಡುವವರೆಗೂ ಅನರ್ಹ ಶಾಸಕರ ಸ್ಪರ್ಧೆಗೆ ಅವಕಾಶ ನೀಡಬಾರದು ಎಂದು ಮನವಿ ಪತ್ರ ಸಲ್ಲಿಸಿರುವುದಾಗಿ ಹೇಳಿದರು.