ಬೆಂಗಳೂರು: ಗಣರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಧ್ವಜಾರೋಹಣ ನೆರವೇರಿಸಿದರು.
ಕಾಂಗ್ರೆಸ್ ಭವನದಲ್ಲಿ 72 ನೇ ಗಣರಾಜ್ಯೋತ್ಸವ ಆಚರಣೆ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಡಿಕೆಶಿ, ಬಂಡವಾಳಶಾಹಿಗಳ ಪರವಾಗಿ ಬಿಜೆಪಿ ಸರ್ಕಾರ ನಿಂತಿದೆ. ಇದರ ಬಗ್ಗೆ ನಾವು ಧ್ವನಿ ಎತ್ತಬೇಕು. ಸಾಮಾನ್ಯ ಜನರ ಮೇಲೆ ತೆರಿಗೆ ಹೆಚ್ಚಳ ಆಗುತ್ತಿದೆ. ಕೊರೊನಾ ಸಮಯದಲ್ಲಿ ಆದ ತೊಂದರೆಗಳಿಗೆ ಸರ್ಕಾರ ಸ್ಪಂದಿಸಿಲ್ಲ. ಇದರ ಬಗ್ಗೆ ವಿಪಕ್ಷಗಳು ಧ್ವನಿ ಎತ್ತಿದ್ರೆ ನಮ್ಮ ಬಾಯಿ ಮುಚ್ಚಿಸುವ ಕೆಲಸ ಸರ್ಕಾರ ಮಾಡಿತ್ತು. ಬಣ್ಣದ ಮಾತುಗಳಿಗೆ ನಾವು ಮರಳಾಗಬಾರದು ಎಂದರು.
ಏಳು ದಶಕಗಳ ಸಂಭ್ರಮದಲ್ಲಿ ನಾವಿದ್ದೇವೆ. ಸಂವಿಧಾನದ ಮೇಲೆ ನಾವು ನಂಬಿಕೆ ಇಟ್ಟು ಬದುಕುತ್ತಿದ್ದೇವೆ. ಸ್ವಾತಂತ್ರ್ಯಕ್ಕಾಗಿ ದೇಶದಲ್ಲಿ ಹಲವಾರು ಜಾತಿ, ಧರ್ಮದ ಜನ ಶ್ರಮಿಸಿದ್ದಾರೆ. 72 ವರ್ಷದಲ್ಲಿ ಸಾಕಷ್ಟು ಸಾಧನೆ ಮಾಡಿದ್ದೇವೆ. ಚಂದ್ರಯಾನ ಸೇರಿದಂತೆ, ದೇಶದ ಒಳಗೆ, ಗಡಿಯಲ್ಲಿ ದೇಶ ಹಲವಾರು ಸಾಧನೆ ಮಾಡಿದೆ. 70 ವರ್ಷದ ನಾವು ಮಾಡಿರುವ ಸಾಧನೆಯನ್ನ ಪ್ರಪಂಚ ನೋಡಿದೆ. ಪ್ರತಿದಿನ ಸ್ವಾತಂತ್ರ್ಯದ ಬಗ್ಗೆ ಮಾತಾಡಬೇಕು. ಪ್ರತಿದಿನ ಮಕ್ಕಳಿಗೆ ದೇಶಾಭಿಮಾನದ ಬಗ್ಗೆ ಅರಿವು ಮೂಡಿಸಬೇಕು. ಧಾರ್ಮಿಕ ಹಬ್ಬಗಳನ್ನು ಮಾಡುವ ಹಾಗೆ ದೇಶದ ಪವಿತ್ರ ಹಬ್ಬವನ್ನು ಮಾಡಬೇಕು ಎಂದು ಡಿಕೆಶಿ ಕರೆ ನೀಡಿದ್ರು.
ಇಡೀ ರಾಷ್ಟ್ರ ಕವಲು ದಾರಿಯಲ್ಲಿ ಹೊರಟಿದೆ. ರಾಷ್ಟ್ರದ ಉದ್ದಗಲಕ್ಕೂ ಹೋರಾಟ ಆರಂಭವಾಗಿದೆ. ವೈಯಕ್ತಿಕ ಗುರುತಿಗೂ ಹೋರಾಟ ನಡೆದಿದೆ. ಇವತ್ತು ರೈತರು ಭವಿಷ್ಯವನ್ನು ರೂಪಿಸಿಕೊಳ್ಳಲು ಹೋರಾಟ ಮಾಡುತ್ತಿದ್ದಾನೆ. ಇಡೀ ಭಾರತ ಅನ್ನದಾತನ ಜೊತೆಗೆ ನಿಲ್ಲಬೇಕಾದ ಪರಿಸ್ಥಿತಿ ಬಂದಿದೆ ಎಂದರು.