ಬೆಂಗಳೂರು: ಪಕ್ಷದ ರಾಷ್ಟ್ರೀಯ ನಾಯಕರ ಸೂಚನೆ ಹಿನ್ನೆಲೆ ಕೆಪಿಸಿಸಿ ಕಚೇರಿಗೆ ತೆರಳಲು ಡಿ.ಕೆ.ಶಿವಕುಮಾರ್ ನಿರ್ಧರಿಸಿದ್ದಾರೆ. ಈಗಾಗಲೇ ನಿವಾಸದ ಆಚೆ ಬಂದು ಪರಿಶೀಲನೆ ನಡೆಸಿ ಶಿವಕುಮಾರ್ ತೆರಳಿದ್ದು, ಕೆಲವೇ ಕ್ಷಣಗಳಲ್ಲಿ ಕೆಪಿಸಿಸಿ ಕಚೇರಿಗೆ ತೆರಳಲಿದ್ದಾರೆ.
ಕೆಪಿಸಿಸಿ ಕಚೇರಿಗೆ ತೆರಳಲಿದ್ದಾರೆ ಡಿಕೆಶಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕರೆ ಮೇರೆಗೆ ಪಕ್ಷದ ಕೆಲಸ ಕಾರ್ಯಗಳಲ್ಲಿ ಮತ್ತೆ ಡಿ.ಕೆ.ಶಿವಕುಮಾರ್ ಪರಿಪೂರ್ಣವಾಗಿ ತೊಡಗಿಕೊಳ್ಳಲು ಮುಂದಾಗಿದ್ದಾರೆ. ನಿನ್ನೆ ಬೆಳಿಗ್ಗೆಯಿಂದಲೇ ಸಿಬಿಐ ಅಧಿಕಾರಿಗಳು ತಮ್ಮ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ ಕಾರಣ, ಕೊಂಚ ಆತಂಕಕ್ಕೀಡಾಗಿದ್ದ ಡಿಕೆಶಿ ಗೆ ಸುರ್ಜೆವಾಲಾ ಕರೆ ಮಾಡಿ ಧೈರ್ಯ ತುಂಬಿದ್ದರು.
ಫೋನ್ನಲ್ಲಿ ಮಾತನಾಡಿರುವ ಅವರು, ಉಪ ಚುನಾವಣೆ ಬಗ್ಗೆ ಗಮನ ಹರಿಸಿ, ಇದೆಲ್ಲಾ ರಾಜಕೀಯ ಪ್ರೇರಿತ, ಬಿಜೆಪಿ ಅವರದ್ದು ಸರ್ವೇಸಾಮಾನ್ಯ. ಕಾರ್ಯಕರ್ತರನ್ನು ಚುನಾವಣೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಳ್ಳುವಂತೆ ಮಾಡಿ. ನಿನ್ನೆ ಸಿಬಿಐ ರೇಡ್ ಘಟನೆ ಬಗ್ಗೆ ಕಾರ್ಯಕರ್ತರಿಗೆ ಪಾಸಿಟಿವ್ ಸಂದೇಶ ಹೋಗುವ ಹಾಗೆ ನೋಡಿಕೊಳ್ಳಿ. ಕಚೇರಿಯಲ್ಲಿ ಹೆಚ್ಚು ಸಮಯ ಮೀಸಲಿಟ್ಟು ಕಾರ್ಯಕರ್ತರನ್ನು ಉತ್ಸಾಹದಿಂದ ಇರುವಂತೆ ನೋಡಿಕೊಳ್ಳಿ ಎಂದಿದ್ದಾರೆ.
ಬೆಳಗ್ಗೆಯಿಂದ ಹಣ್ಣುಗಳ ಜ್ಯೂಸ್ ಕುಡಿದು ನಿವಾಸಕ್ಕೆ ಬಂದ ಗಣ್ಯರನ್ನು ಭೇಟಿ ಮಾಡಿದ ಡಿ.ಕೆ.ಶಿವಕುಮಾರ್ ಇದೀಗ ಪಕ್ಷದ ಕಚೇರಿಗೆ ತೆರಳಿ ಮುಂದಿನ ಚಟುವಟಿಕೆಯಲ್ಲಿ ಭಾಗಿಯಾಗಲಿದ್ದಾರೆ. ನಂಜಾವಧೂತ ಸ್ವಾಮೀಜಿ, ಮಾಜಿ ಸಂಸದ ಧ್ರುವ ನಾರಾಯಣ್, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿ ಹಲವಾರು ಗಣ್ಯರನ್ನು ಭೇಟಿ ಮಾಡಿದ ಡಿಕೆಶಿ ಮುಂದೆ ಕೆಪಿಸಿಸಿ ಕಚೇರಿಯಲ್ಲಿ ಇದ್ದು ಪಕ್ಷದ ಮುಖಂಡರನ್ನು ಭೇಟಿ ಮಾಡಿ ಉಪ ಚುನಾವಣೆ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂಬ ಮಾಹಿತಿ ಇದೆ.