ಬೆಂಗಳೂರು:ಇಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ಜೊತೆಗೆ ಕಾರ್ಯಾದ್ಯಕ್ಷರಾದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ ಹಾಗೂ ಸಲೀಂ ಅಹಮದ್ ಸಹ ಪದಗ್ರಹಣ ಮಾಡಿದರು.
ರಾಜ್ಯದ 7,800 ಗ್ರಾಮ ಪಂಚಾಯ್ತಿ, ನಗರ ಸಭೆ ಹಾಗೂ ಪುರಸಭೆ ಸೇರಿದಂತೆ ಸುಮಾರು 10 ಸಾವಿರಕ್ಕೂ ಅಧಿಕ ಸ್ಥಳಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿ, ಪ್ರತಿಜ್ಞೆ ಸ್ವೀಕರಿಸಿದರು.
ಮಂಗಳೂರು:ಮಾಜಿ ಸಚಿವ ಬಿ. ರಮಾನಾಥ ರೈ ಅವರು ಬಂಟ್ವಾಳ ತಾಲೂಕಿನ ಕಳ್ಳಿಗೆಯಲ್ಲಿರುವ ತಮ್ಮ ಮನೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದ ಡಿ.ಕೆ.ಶಿವಕುಮಾರ್ ಅವರ ಪ್ರತಿಜ್ಞಾ ವಿಧಿಯನ್ನು ಡಿಜಿಟಲ್ ಪರದೆ ಮೂಲಕ ವೀಕ್ಷಿಸಿದರು.
ಚಿಕ್ಕಮಗಳೂರು: ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಬೆಂಗಳೂರಿಗೆ ಹೋಗದೆ, ಜಿಲ್ಲೆಯ ವಿವಿಧ ಭಾಗದಲ್ಲಿ ಪ್ರತಿಜ್ಞಾ ವಿಧಿ ಬೋಧನೆ ಕಾರ್ಯಕ್ರಮ ಮಾಡಿದರು. ಚಿಕ್ಕಮಗಳೂರು ನಗರದ 9 ವಿವಿಧ ಭಾಗದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಜಿಲ್ಲೆಯಲ್ಲಿ 250 ಭಾಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನು ಈ ಪ್ರತಿಜ್ಞಾವಿಧಿ ಕಾರ್ಯಕ್ರಮವನ್ನು ಆನ್ಲೈನ್ನಲ್ಲಿ ನೋಡುವುದರ ಮೂಲಕ ಪ್ರತಿಜ್ಞಾ ವಿಧಿಯನ್ನು ಸ್ವೀಕಾರ ಮಾಡಿದರು.
ಗದಗ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಪದಗ್ರಹಣ ಸಮಾರಂಭವನ್ನು, ಗದಗನಲ್ಲಿ ಎಲ್ಇಡಿ ಪರದೆಯಲ್ಲಿ ವೀಕ್ಷಣೆ ಮಾಡಲಾಯಿತು. ಗದಗನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬೃಹತ್ ಎಲ್ಇಡಿ ಪರದೆ ವ್ಯವಸ್ಥೆ ಮಾಡಲಾಗಿತ್ತು. ಗದಗ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಜಿ.ಎಸ್.ಪಾಟೀಲ ನೇತೃತ್ವದಲ್ಲಿ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹಾಗೂ ನೂರಾರು ಕಾಂಗ್ರೆಸ್ ಕಾರ್ಯಕರ್ತರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ವೀಕ್ಷಣೆ ಮಾಡಲಾಯಿತು. ಇನ್ನು ನರಗುಂದ ಪಟ್ಟಣದಲ್ಲಿ ಮಾಜಿ ಸಚಿವ ಬಿ.ಆರ್. ಯಾವಗಲ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪದಗ್ರಹಣ ಕಾರ್ಯಕ್ರಮ ವೀಕ್ಷಣೆ ಮಾಡಿದರು.
ತುಮಕೂರು: ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಆರ್. ರಾಜೇಂದ್ರ ಅವರ ಸಹಯೋಗದಲ್ಲಿ ನಗರದ ಕನ್ನಡ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಯುವ ಅಭಿಮಾನಿಗಳು ಡಿ.ಕೆ ಶಿವಕುಮಾರ್ ಅವರ ಪದಗ್ರಹಣ ಸಮಾರಂಭವನ್ನು ನೇರ ಪ್ರಸಾರ ವೀಕ್ಷಿಸಲು ಎಲ್ಇಡಿ ಸ್ಕ್ರೀನ್ ಆಯೋಜನೆ ಮಾಡಿದ್ದರು. ಸುಮಾರು 150ಕ್ಕೂ ಹೆಚ್ಚು ಯುವಕರು ಕಾಂಗ್ರೆಸ್ ಕಾರ್ಯಕರ್ತರು ವಿವಿಧ ಘಟಕಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಪಾವಗಡ: ಡಿ.ಕೆ. ಶಿವಕುಮಾರ್ ಪದಗ್ರಹಣ ಕಾರ್ಯಕ್ರಮದ ನೇರ ಪ್ರಸಾರವನ್ನು ಮಾರುತಿ ಚಿತ್ರ ಮಂದಿರದಲ್ಲಿ ಏರ್ಪಡಿಸಲಾಗಿತ್ತು. ಪಾವಗಡ ತಾಲೂಕಿನ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಹೆಚ್.ವಿ.ವೆಂಕಟೇಶ್ ಸಂಮುಖದಲ್ಲಿ ನೇರ ಪ್ರಸಾರ ಏರ್ಪಡಿಸಲಾಗಿತ್ತು. ತಾಲೂಕಿನ 33 ಗ್ರಾಮ ಪಂಚಾಯತಿಗಳಲ್ಲಿ ನೇರ ಪ್ರಸಾರವನ್ನು ವೀಕ್ಷಿಸಲು, ತಾಲೂಕು ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಅಗತ್ಯವಾದ ವ್ಯವಸ್ಥೆ ಮಾಡಿ ತಾಲೂಕಿನ ಜನತೆ ಪದಗ್ರಹಣ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ಈ ವೇಳೆ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಧ್ಯಕ್ಷ ಶಶಿ ಹುಲಿಕುಂಟೆ ಮಠ್, ಇಂದು ಡಿಕೆ ಶಿವಕುಮಾರ್ ಅವರ ಪ್ರತಿಜ್ಞಾ ದಿನ ಕಾರ್ಯಕ್ರಮದಲ್ಲಿ ರಾಜ್ಯದ್ಯಂತ ಏಳು ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನ ಡಿಜಿಟಲ್ ಮತ್ತು ಜೂಮ್ ಸಂವಾದದ ಮೂಲಕ ಪಾಲ್ಗೊಂಡಿದ್ದಾರೆ. ತುಮಕೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ಎಲ್ಲಾ ಕಾರ್ಯಕರ್ತರು ಸಂಭ್ರಮದಿಂದಿದ್ದಾರೆ ಎಂದರು.
ಶಿವಮೊಗ್ಗ: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಅಧಿಕಾರ ಸ್ವೀಕರಿಸುತ್ತಿರುವ ಹಿನ್ನೆಲೆ, ಇಂದು ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿ ಎದುರು ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ನಂತರ ಮಾತನಾಡಿದ ಜಿಲ್ಲಾಧ್ಯಕ್ಷ ಹೆಚ್. ಎಸ್ ಸುಂದ್ರೇಶ್ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿ ಕೇಂದ್ರಗಳು, ನಗರದ ಪಾಲಿಕೆ ಸೇರಿದಂತೆ ಜಿಲ್ಲೆಯ ಐದುನೂರು ಪಾಯಿಂಟ್ ಗಳಲ್ಲಿ ಡಿ.ಕೆ ಶಿವಕುಮಾರ್ ಅವರ ಅಧಿಕಾರ ಸ್ವೀಕಾರ ಹಾಗೂ ಪ್ರತಿಜ್ಞಾ ವಿಧಿ ಕಾರ್ಯಕ್ರಮ ವನ್ನು ವಿಕ್ಷೀಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಬಾಗಲಕೋಟೆ:ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭವನ್ನು ವೀಕ್ಷಣೆ ಮಾಡಲು ನಗರದ ಜಿಲ್ಲಾ ಘಟಕ ವತಿಯಿಂದ ಎಲ್ ಸಿ ಡಿ ಮೂಲಕ ಅವಕಾಶ ನೀಡಲಾಗಿತ್ತು. ಸಾಮಾಜಿಕ ಅಂತರ ಮೂಲಕ ಕುಳಿತುಕೊಂಡು,ಪ್ರ ತಿಜ್ಞೆ ವಿಧಿ ಸ್ವೀಕಾರ ಮಾಡಿದರು. ಸಮಾರಂಭ ಅಂಗವಾಗಿ ಯುವ ಧುರೀಣ ನಾಗರಾಜ ಹದ್ಲಿ ಜ್ಯೋತಿ ಬೆಳೆಗಿಸುವ ಮೂಲಕ ಚಾಲನೆ ನೀಡಿದರು.