ಬೆಂಗಳೂರು :ಹೆಚ್ಚು ಯುವಕರನ್ನು ಪಕ್ಷಕ್ಕೆ ಸೆಳೆಯುವ ಮೂಲಕ ನೀವು ನಾಯಕರಾಗಿ ಬೆಳೆಯಿರಿ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕರೆ ಕೊಟ್ಟಿದ್ದಾರೆ.
ಈ ಸಂಬಂಧ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, ಪ್ರತಿ ತಾಲೂಕಿನಲ್ಲೂ ಕನಿಷ್ಠ 5000 ಯುವಕರನ್ನು ಪಕ್ಷದ ಸದಸ್ಯತ್ವಕ್ಕೆ ನೋಂದಣಿ ಮಾಡಿಸಿ. ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಇತಿಹಾಸವಿದೆ. ಪಕ್ಷದ ನೆರಳಿನಲ್ಲಿ ನಾವೆಲ್ಲ ಬೆಳೆಯುತ್ತಿದ್ದೇವೆ. ಇವತ್ತು ಕಾಂಗ್ರೆಸ್ ಪಕ್ಷ ರಾಷ್ಟ್ರದಲ್ಲಿ ದೊಡ್ಡ ಯುವಕರ ಪಡೆ ನಿರ್ಮಾಣ ಮಾಡಿದೆ ಎಂದಿದ್ದಾರೆ.
ಬದಲಾವಣೆ ತರುವ ಅಗತ್ಯವಿದೆ :ಇಂದು ನಾವು ನೀವೆಲ್ಲ ಸೇರಿ ಈ ದೇಶದಲ್ಲಿ ಬದಲಾವಣೆ ತರಬೇಕಾದ ಅನಿವಾರ್ಯತೆ ಇದೆ. ದೇಶಕ್ಕೆ ಶಕ್ತಿ ತಂದು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ ಎಂಬುದನ್ನು ನಾವೆಲ್ಲರೂ ಮರೆಯುವುದಕ್ಕೆ ಸಾಧ್ಯವಿಲ್ಲ. ಪಕ್ಷಕ್ಕೆ ಹೊಸ ಚೈತನ್ಯ ತುಂಬುವುದು ಯುವಕರನ್ನು ಸೇರಿಸುವುದು, ನಮ್ಮ ನಿಮ್ಮೆಲ್ಲರ ಜವಾಬ್ದಾರಿ. ರಾಹುಲ್ ಗಾಂಧಿ ಅವರು ಯುವ ನಾಯಕತ್ವ ಬೆಳೆಸಬೇಕು ಎಂಬ ದೃಷ್ಟಿಯಿಂದ ಯುವ ಕಾಂಗ್ರೆಸ್ನಲ್ಲಿ ಚುನಾವಣೆ ಪ್ರಾರಂಭಿಸುತ್ತಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಂಚಾಯತ್ ನಿಂದ ಸಂಸತ್ತಿನವರೆಗೆ ಚುನಾವಣೆ ಮೂಲಕ ನಾಯಕರ ಆಯ್ಕೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ. ಈ ನಾಯಕರಾಗಿ ನೀವು ಬೆಳೆಯಬೇಕು ಎಂಬುದು ನಮ್ಮ ಉದ್ದೇಶ. ಈ ದೃಷ್ಟಿಯಿಂದ ಯುವಕರಿಗೆ ಚುನಾವಣೆಯಿಂದ ನಾಯಕತ್ವ ಬೆಳೆಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ.
ಹೀಗಾಗಿ, ನೀವೆಲ್ಲರೂ ಅತಿ ಹೆಚ್ಚು ಯುವಕರನ್ನು ಸದಸ್ಯರನ್ನಾಗಿ ಮಾಡಿ ನಾಯಕರಾಗಿ ಬೆಳೆಯಿರಿ, ನಮ್ಮ ನಾಯಕರಾಗಿ ಬೆಳೆಯಬೇಕು ಹಾಗೂ ದೇಶಕ್ಕೆ ಆಸ್ತಿಯಾಗಬೇಕು. ನಾನು ಕೂಡ ಯುವ ಕಾಂಗ್ರೆಸ್ ತಾಲೂಕು ಮಟ್ಟದಿಂದ ಬೆಳೆದು, ಇಂದು ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನೀವೆಲ್ಲಾ ರಾಜ್ಯದ ಮುಂದಿನ ನಾಯಕರಾಗಿ ಬೆಳೆಯಲು ಪ್ರತಿ ತಾಲೂಕಿನಲ್ಲೂ ಕನಿಷ್ಠ 5000 ಯುವಕರ ಪಕ್ಷದ ಸದಸ್ಯತ್ವ ನೋಂದಣಿ ಮಾಡಿಸಬೇಕು. ಈ ಜವಾಬ್ದಾರಿ ನಿಮ್ಮ ಮೇಲಿದೆ ಎಂದಿದ್ದಾರೆ.
ಯುವ ಪೀಳಿಗೆ ಬಲಗೊಳಿಸಬೇಕಿದೆ :ಬ್ಲಾಕ್ ಕಾಂಗ್ರೆಸ್, ಮಹಿಳೆಯರು, ವಿದ್ಯಾರ್ಥಿಗಳು, ಹಿರಿಯ ನಾಯಕರು ಎಲ್ಲರೂ ಸೇರಿ ಯುವ ಕಾಂಗ್ರೆಸ್ ಹಾಗೂ ಯುವ ಪೀಳಿಗೆ ಬಲಪಡಿಸಬೇಕಿದೆ. ನೀವು ಹೆಚ್ಚು ಜನರನ್ನು ಸದಸ್ಯರನ್ನಾಗಿ ಮಾಡಿ ನಾಯಕರಾಗಿ ಬೆಳೆಯಿರಿ. ಇದಕ್ಕೆ ಮುಕ್ತ ಅವಕಾಶವಿದ್ದು, ನಿಮ್ಮ ಮೇಲೆ ಯಾರ ಒತ್ತಡವೂ ಇರಲ್ಲ. ಹೆಚ್ಚು ಸದಸ್ಯರನ್ನು ಮಾಡಿದಷ್ಟು ನಿಮ್ಮಲ್ಲಿ ನಾಯಕತ್ವಗುಣ ಬೆಳೆಯುತ್ತದೆ. ಇದು ದೊಡ್ಡ ಅವಕಾಶ ನಿಮ್ಮೆಲ್ಲರಿಗೂ ಶುಭವಾಗಲಿ. ನಿಮಗೆ ಸಂಪೂರ್ಣ ಸಹಕಾರ ಸಿಗಲಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ಅತಿ ಹೆಚ್ಚು ನಾಯಕರನ್ನು ಬೆಳೆಸಲು ಅವಕಾಶ ಮಾಡಿಕೊಟ್ಟಿದ್ದಾರೆ ಇದನ್ನ ಬಳಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.