ಬೆಂಗಳೂರು: ಸಂಸದ ಡಿ.ಕೆ. ಸುರೇಶ್ ರಾಮನಗರದಿಂದ ಸ್ಪರ್ಧೆ ಮಾಡುವ ಪ್ರಸ್ತಾಪ ಇದೆ. ಅದನ್ನ ತಳ್ಳಿ ಹಾಕಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಡಿ ಕೆ ಸುರೇಶ್ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಕೂತು ಮಾತನಾಡಬೇಕು. ನನಗೆ ಈ ಬಗ್ಗೆ ಸಂದೇಶ ಸಿಕ್ಕಿದೆ. ಹೈಕಮಾಂಡ್ ನಿಂದ ಸಂದೇಶ ಬಂದಿದ್ದು ಹೌದು. ಈ ಕುರಿತು ಪಾರ್ಟಿ ಹೇಳುತ್ತಿದೆ, ನಾವಿನ್ನು ತೀರ್ಮಾನ ಮಾಡಿಲ್ಲ. ಈ ಹಿಂದೆ ಇದೇ ವಿಚಾರದ ಬಗ್ಗೆ ಚರ್ಚೆ ಆಗಿತ್ತು. ಕಾರ್ಯಕರ್ತರೂ ಇದಕ್ಕೆ ಒತ್ತಾಯ ಮಾಡಿದ್ದರು. ಆದರೆ ನಾವು ಅದರ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ ಮತ್ತೆ ಬೈ ಎಲೆಕ್ಷನ್ ಎಲ್ಲಾ ಮಾಡುವುದು ನನಗೆ ಇಷ್ಟ ಇಲ್ಲಾ. ಡಿ.ಕೆ. ಸುರೇಶ್ ಅರ್ಜಿಯನ್ನು ಹಾಕಿಲ್ಲ, ಅದರ ಬಗ್ಗೆ ಚರ್ಚೆಯನ್ನೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಸಚಿವ ಸೋಮಣ್ಣ ಜತೆ ತಮ್ಮ ಫೋಟೋ ವೈರಲ್ ಆಗಿರುವ ವಿಚಾರವಾಗಿ ಮಾತನಾಡಿ, ನಾವು ಧರ್ಮದ ಹೆಸರಿನಲ್ಲಿ, ಮಠಗಳ ವಿಚಾರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೀವಿ. ಅವರು ನಮ್ಮ ತಾಲ್ಲೂಕಿನವ್ರು. ಬೇಕಾದಷ್ಟು ಸಲ ನಮ್ಮ ಊರಿಗೆ ಬರ್ತಾ ಇರ್ತಾರೆ. ಅವರು ಸ್ವಂತ ನಮ್ಮ ಕ್ಷೇತ್ರದವರು, ನಾವು ಗೌರವ ನೀಡುತ್ತೇವೆ. ಆ ಬಾಂಧವ್ಯ ಇದೆ. ರಾಜಕಾರಣ ಬೇರೆ ಬಾಂಧವ್ಯ ಬೇರೆ. ಕಾಂಗ್ರೆಸ್ಗೆ ಬರ್ತಾರೆ ಅಂತ ಅವರು ಹೇಳಿಲ್ಲ. ಅವರು ನಮ್ಮ ಪಕ್ಷಕ್ಕೆ ಬರ್ತಾರೆ ಅಂತ ನಾನು ಹೇಳಿಲ್ಲ. ನಾನು ಕರೆದಿಲ್ಲ, ಅವರ ಕೆಲಸ ಅವರು ಮಾಡಿಕೊಂಡು ಇದ್ದಾರೆ. ಅವರನ್ನ ಯಾಕೆ ಎಳೆದು ತರುವುದು. ಅಧಿವೇಶನ ಮುಗಿಸಿಕೊಂಡು ಬೆಳಗಾವಿಯಿಂದ ಒಂದೇ ಫ್ಲೈಟ್ನಲ್ಲಿ ಬರ್ತಾ ಇದ್ವಿ. ಆ ಫೋಟೋ ವೈರಲ್ ಆಗಿದೆ. ಪಕ್ಕದಲ್ಲಿ ಕುಳಿತುಕೊಂಡ್ರೆ ಏನಿದೆ? ಎಲ್ಲರ ಪಕ್ಕದಲ್ಲಿ ಕುಳಿತುಕೊಳ್ತೀವಿ ಎಂದು ಡಿಕೆಶಿ ಹೇಳಿದ್ರು.
ಇದನ್ನೂ ಓದಿ:ಒಕ್ಕಲಿಗರ ಹೆಗಲ ಮೇಲೆ ಕೋವಿ ಇಟ್ಟು ಬಿಜೆಪಿಯಿಂದ ಹೊಸ ಸುಳ್ಳಿನ ಕಥೆ ಸೃಷ್ಟಿ: ಹೆಚ್‌ಡಿಕೆ