ಬೆಂಗಳೂರು:ಡಿವೋರ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜೀವನಾಂಶದ ವಿಷಯದಲ್ಲಿ ಹೈಕೋರ್ಟ್ ಮಹತ್ವದ ಆದೇಶವನ್ನು ನೀಡಿದೆ.ದುಡಿಯಲು ಸಮರ್ಥಳಾಗಿರುವ ಪತ್ನಿ, ಪತಿಯಿಂದ ಹೆಚ್ಚಿನ ಜೀವನಾಂಶ ಕೋರಲು ಆಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೆ, ಪತ್ನಿಯ ಜೀವನಾಂಶದ ಮೊತ್ತವನ್ನು ಮಾಸಿಕ 10 ಸಾವಿರ ರೂ.ಗಳಿಂದ 5 ಸಾವಿರಕ್ಕೆ ಮತ್ತು ಪರಿಹಾರ ಮೊತ್ತವನ್ನು 3 ಲಕ್ಷದಿಂದ 2 ಲಕ್ಷ ರೂಪಾಯಿಗೆ ಕಡಿತ ಮಾಡಿ ಸೆಷನ್ಸ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದೆ.
ವಿಚ್ಛೇದಿತ ಮಹಿಳೆ ಮತ್ತು ಆಕೆಯ ಮಗು ಸಲ್ಲಿಸಿದ್ದ ಕ್ರಿಮಿನಲ್ ಪುನರ್ ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರಿದ್ದ ನ್ಯಾಯಪೀಠ, ಈ ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿದೆ.
ಉದ್ಯೋಗದಲ್ಲಿದ್ದ ಪತ್ನಿ ಸಂಪೂರ್ಣ ಜೀವನಾಂಶ ಕೇಳುವಂತಿಲ್ಲ: ಅಲ್ಲದೆ, ವಿವಾಹಕ್ಕೂ ಮುನ್ನ ಉದ್ಯೋಗದಲ್ಲಿದ್ದ ಪತ್ನಿ, ಈಗ ಮತ್ತೆ ಕೆಲಸಕ್ಕೆ ಸೇರದಿರಲು ಸಮರ್ಪಕ ಕಾರಣಗಳಿಲ್ಲ. ದುಡಿಯುವ ಸಾಮರ್ಥ್ಯವಿದ್ದರೂ, ಆಲಸ್ಯದಿಂದ ಕುಳಿತು ಪತಿಯಿಂದಲೇ ಸಂಪೂರ್ಣ ಜೀವನಾಂಶ ಕೇಳುವಂತಿಲ್ಲ. ತನ್ನ ಜೀವನ ನಿರ್ವಹಣೆಗೆ ಪತ್ನಿ ಪ್ರಯತ್ನಿಸಬೇಕು. ಪತಿಯಿಂದ ಪೂರಕ ಜೀವನಾಂಶವನ್ನಷ್ಟೇ ಕೇಳಬಹುದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅರ್ಜಿದಾರರ ಪತಿ ಪ್ರಾವಿಷನ್ ಸ್ಟೋರ್ ನಡೆಸುತ್ತಿದ್ದು, ಅವರ ತಾಯಿ ಮತ್ತು ಅವಿವಾಹಿತ ಸಹೋದರಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿದ್ದಾರೆ. ಆದರೆ, ಪತಿಯೊಂದಿಗೆ ಜೀವನ ನಡೆಸಲು ಇಚ್ಛಿಸದ ಪತ್ನಿ ವಿಚ್ಛೇದನ ಪಡೆದುಕೊಂಡಿರುವ ಅಂಶವನ್ನು ಪರಿಗಣಿಸಿದ ನ್ಯಾಯಪೀಠ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಸಕಾರಣ ಕಾಣುತ್ತಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾ ಮಾಡಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ ಏನು ?..ವಿಚ್ಛೇದನ ಪಡೆದ ಬಳಿಕ ಜೀವನಾಂಶ ಕೋರಿ ಪತ್ನಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಮಹಿಳೆ ಮತ್ತು ಮಗವಿನ ಜೀವನಾಂಶಕ್ಕಾಗಿ 10 ಸಾವಿರದಿಂದ 5 ಸಾವಿರಕ್ಕೆ ಮತ್ತು ಪರಿಹಾರ ಮೊತ್ತವನ್ನು 3 ಲಕ್ಷದಿಂದ ಎರಡು ಲಕ್ಷಕ್ಕೆ ಕಡಿಮೆ ಮಾಡಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಿಚಾರಣಾ ನ್ಯಾಯಾಲಯ ವಿಧಿಸಿರುವ ಪರಿಹಾರ ಸಾಕಷ್ಟು ಕಡಿಮೆಯಿದೆ. ಇದರಿಂದ ಅರ್ಜಿದಾರರು ಜೀವನ ನಡೆಸುವುದಕ್ಕೆ ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಪರಿಹಾರವನ್ನು ಹೆಚ್ಚಳ ಮಾಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು.
ಇದನ್ನೂಓದಿ:ಒಕ್ಕಲಿಗ ಸಂಘದ ಕಾರ್ಯಕಾರಿ ಸಮಿತಿ ಸಭೆ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್