ಬೆಂಗಳೂರು: ಮೈಸೂರು ಸಂಸ್ಥಾನಕ್ಕೂ ಮುಂಚಿನ ತಲೆಮಾರುಗಳಿಂದ 80 ಕುಟುಂಬಗಳು ಚಿಕ್ಕ ಬೇಗೂರಿನಲ್ಲಿ ವಾಸವಿದೆ. ರಾಜಕಾಲುವೆ ಹಾದು ಹೋಗುವ ಇಕ್ಕೆಲಗಳನ್ನು ವಿಸ್ತರಿಸುವ ಬದಲು ಬಡವರ ಮನೆಗಳನ್ನ ಸರ್ಕಾರ ಕೆಡವಲು ಮುಂದಾಗಿದೆ. ಗ್ರಾಮ ಪಂಚಾಯಿತಿಗಳಿಂದ ಹಕ್ಕು ಪತ್ರ ನೀಡಿ, ನೋಂದಣಿ ಮಾಡಿಸಿ ಎಲ್ಲ ತರಹದ ಸೌಕರ್ಯಗಳು ಒದಗಿಸಿ ಈಗ ಸರ್ಕಾರವೇ ಬಡವರ ಕತ್ತು ಹಿಸುಕಲು ಹೊರಟಿದೆ ಎಂದು ಸಂಸದ ಡಿ.ಕೆ ಸುರೇಶ್ ಸರ್ಕಾರದ ಕ್ರಮದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.
ರಾಜಕಾಲುವೆ ಕಾಮಗಾರಿಗಾಗಿ ಮನೆ ತೆರವಿಗೆ ಮುಂದಾದ ಜಿಲ್ಲಾಡಳಿತ ರಾಜಕಾಲುವೆ ವಿಸ್ತರಣೆಗಾಗಿ ಮನೆ ತೆರವು ಮಾಡಲು ಜೆಸಿಬಿಗಳು ಆಗಮಿಸಿದ್ದವು. ಈ ಹಿನ್ನೆಲೆ ಕಾರ್ಯಾಚರಣೆ ನಿಲ್ಲಿಸುವಂತೆ ಜೆಸಿಬಿಯ ತಡೆದು ಡಿಕೆ ಸುರೇಶ್ ಮಾತನಾಡಿದ್ದಾರೆ. ರಾಜಕಾಲುವೆ ನೀರು ಹರಿಯಲು ಇಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದಾಗ್ಯೂ ರಾಜಕಾಲುವೇ ವಿಸ್ತರಣೆಗೆ ಇಲ್ಲಿ ಅವಕಾಶವಿದೆ. ಮನೆ ತೆರವು ಮಾಡದೆಯೇ 10-15 ಅಡಿಯಷ್ಟು ವಿಸ್ತರಣೆ ಮಾಡಬಹುದು. ಈ ಕುರಿತು ಜಿಲ್ಲಾಧಿಕಾರಿ ಜೊತೆ ಮಾತನಾಡುತ್ತೇನೆ ಎಂದಿದ್ದಾರೆ.
1951ರಿಂದಲೇ ವಾಸವಿದ್ದ ಕುಟುಂಬಗಳು
ಬೇಗೂರು ಕಾರ್ಪೊರೇಟರ್ ಆಂಜಿನಪ್ಪ ಮಾತನಾಡಿ, ಇರುವ ರಾಜಕಾಲುವೆಯನ್ನು ಇನ್ನೂ ಅಗಲೀಕರಣ ಮಾಡಿದರೂ ಜನರಿಗೆ ತೊಂದರೆ ಇಲ್ಲ. ಆದರೆ, ಸರ್ಕಾರ ಚಿಕ್ಕ ಬೇಗೂರಿನ ಜನಕ್ಕೆ ಕಿರುಕುಳ ನೀಡಲು ಬೇಕಂತಲೇ ಮನೆ ತೆರವಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಮೈಸೂರು ಸಂಸ್ಥಾನಕ್ಕೂ ಮುನ್ನ ಚಿಕ್ಕ ಬೇಗೂರಿನಲ್ಲಿ 80 ಕುಟುಂಬಗಳು ವಾಸ ಇವೆ. 1951ರಲ್ಲಿ ಮನೆ ಪಟ್ಟಿ ಮಾಡಿದ ಸರ್ಕಾರ ಮೂಲ ಸೌಕರ್ಯ ಒದಗಿಸಿ ಮತಪಟ್ಟಿಯಲ್ಲಿ ಹೆಸರು ಸೇರಿಸಲಾಗಿದೆ. 1983ರಲ್ಲಿ ಹಕ್ಕುಪತ್ರ ವಿತರಿಸಿದ್ದಲ್ಲದೇ ನೋಂದಣಿ ಮಾಡಿಸಿ ಮನೆ ನಿರ್ಮಾಣಕ್ಕೂ ನೆರವು ನೀಡಿದೆ. 1994ರಲ್ಲಿ ಹುಡ್ಕೋ-ನಬಾರ್ಡ್ನಿಂದ 4 ಸಾವಿರ ರೂ. ಸಾಲ ನೀಡಿ ಎರಡು ಸಾವಿರ ಸಬ್ಸಿಡಿ ನೀಡಿ ಸಹಕರಿಸಿದೆ.
ಅದಾದ ನಂತರ ಜಿಲ್ಲಾಧಿಕಾರಿಗಳು ಕೆರೆ ಅಂಗಳದಲ್ಲಿ ಅಕ್ರಮ ಮನೆ ನಿರ್ಮಾಣ ತೆರವು ಮಾಡುವ ನೋಟಿಸ್ ನೀಡಿದ್ದರು. ನಿವಾಸಿಗಳು ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿ ಮನೆ ತೆರವಿಗೆ ತಡೆ ತಂದಿದ್ದರು. ಆದರೆ, ಕೋವಿಡ್ ಸಂದರ್ಭದಲ್ಲಿ ಸಿವಿಲ್ ಕೋರ್ಟಿನಿಂದ ಆದೇಶ ಮಾಡಿಸಿ ಏಕಾಏಕಿ ರಾಜಕಾಲುವೆ ನಿರ್ಮಾಣಕ್ಕೆ ಮುಂದಾಗಿದ್ದು, ಮನೆ ತೆರವು ಕಾರ್ಯಾಚರಣೆ ಮಾಡಲಾಗಿದೆ.
ಇದನ್ನೂ ಓದಿ:ಯುಪಿಯಲ್ಲಿ ಬಿಜೆಪಿ ಕುಸಿಯಲಿದ್ದು, ಕಾಂಗ್ರೆಸ್ಗೆ ಉತ್ತಮ ಭವಿಷ್ಯವಿದೆ: ವೀರಪ್ಪ ಮೊಯ್ಲಿ