ಬೆಂಗಳೂರು: ಸರ್ಕಾರ ಮತ್ತದರ ಅಂಗ ಸಂಸ್ಥೆಗಳ ನಡುವೆ ಎದುರಾಗುವ ವ್ಯಾಜ್ಯಗಳನ್ನು ಸೂಕ್ತ ವೇದಿಕೆಯಲ್ಲಿ ಬಗೆಹರಿಸಿಕೊಳ್ಳಬೇಕೇ ವಿನಃ ನ್ಯಾಯಾಲಯಗಳ ಮೊರೆ ಹೋಗುವುದು ಸರಿಯಾದ ಕ್ರಮವಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ನಗರದ ಬಿನ್ನಿಪೇಟೆಯಲ್ಲಿನ ಹಣ್ಣು, ಹೂವು ಮತ್ತು ತರಕಾರಿ ಕುರಿತ ವಿಶೇಷ ಎಪಿಎಂಸಿಯ ಕಾರ್ಯದರ್ಶಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಸುನಿಲ್ ದತ್ ಯಾದವ್ ಅವರಿದ್ದ ಏಕ ಸದಸ್ಯಪೀಠ, ಭೂ ಸ್ವಾಧೀನ ಪರಿಹಾರ ಸಂಬಂಧ ವಿಶೇಷ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮತ್ತು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ ವ್ಯಾಜ್ಯವನ್ನು ಮೂರು ತಿಂಗಳಲ್ಲಿ ಪರಿಹರಿಸುವಂತೆ ನ್ಯಾಯಾಲಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಗೆ ನಿರ್ದೇಶನ ನೀಡಿದೆ.
ಕೋರ್ಟ್‌ಗಳು ಈಗಾಗಲೇ ಪ್ರಕರಣಗಳ ಭಾರದಿಂದ ನಲುಗುತ್ತಿವೆ. ಆದ್ದರಿಂದ ರಾಜ್ಯ ಸರ್ಕಾರ ಮತ್ತು ಅದರ ಅಂಗ ಸಂಸ್ಥೆಗಳ ನಡುವಿನ ವ್ಯಾಜ್ಯಗಳನ್ನು ಪ್ರತ್ಯೇಕ ವೇದಿಕೆಗಳಲ್ಲಿ ಬಗೆಹರಿಸಿಕೊಳ್ಳಬೇಕು, ಅವುಗಳನ್ನು ಕೋರ್ಟ್‌ಗಳ ಮುಂದೆ ತರುವುದು ಸರಿಯಲ್ಲ. ಜತೆಗೆ, ಸರ್ಕಾರ ಸಾಧ್ಯವಾದಷ್ಟೂ ಕೋರ್ಟ್‌ಗಳಲ್ಲಿರುವ ವ್ಯಾಜ್ಯಗಳ ಹೊರೆಯನ್ನು ಇಳಿಸಲು ಪ್ರಯತ್ನ ಮಾಡಬೇಕು ಎಂದು ತಿಳಿಸಿದೆ.
ಈ ಪ್ರಕರಣದಲ್ಲಿ ಅರ್ಜಿದಾರರು ಮತ್ತು ಬಿಎಂಆರ್‌ಸಿಎಲ್ ಎರಡೂ ಸರ್ಕಾರದ ಸಂಸ್ಥೆಗಳೇ ಆಗಿವೆ. ಸಂವಿಧಾನದ ಕಲಂ 12ಕ್ಕೆ ಒಳಪಡಲಿವೆ. ಅಲ್ಲದೆ, ರಾಜ್ಯ ಸರ್ಕಾರ ಮತ್ತು ಅದರ ಅಂಗ ಸಂಸ್ಥೆಗಳ ನಡುವೆ ವ್ಯಾಜ್ಯಗಳಿದ್ದ ಸಂದರ್ಭದಲ್ಲಿ ಅವುಗಳನ್ನು ಪರಿಹರಿಸಲು ಕರ್ನಾಟಕ ರಾಜ್ಯ ವ್ಯಾಜ್ಯ ಪರಿಹಾರ ನೀತಿ 2021 ಅಳವಡಿಸಿಕೊಳ್ಳಲಾಗಿದೆ. ಅದರಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ಈ ವ್ಯಾಜ್ಯವನ್ನು ಪರಿಹರಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ.