ಬೆಂಗಳೂರು:ಶಾಲೆಗಳಿಗೆ ಹಣ ಕೊಡಿಸಬೇಕು ಎಂಬ ಕಾಳಜಿ ನಮಗೂ ಇದೆ. ಸಿಎಂ ಬೊಮ್ಮಾಯಿ ಅವರ ಜೊತೆ ಮಾತುಕತೆ ನಡೆಸಿ, ಶಿಕ್ಷಕರ ವೇತನಾನುದಾನ ಬಿಡುಗಡೆ ಮಾಡುವ ಕುರಿತು ನಿರ್ಧರಿಸುತ್ತೇನೆ. ಬೊಮ್ಮಾಯಿ ಅವರೇ ಹಣಕಾಸು ಸಚಿವರಾಗಿರುವ ಹಿನ್ನೆಲೆ ಮಾತುಕತೆ ನಡೆಸಿ ಶಿಕ್ಷಕರಿಗೆ ನ್ಯಾಯ ಒದಗಿಸುತ್ತೇನೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸದನದಲ್ಲಿ ಭರವಸೆ ಕೊಟ್ಟಿದ್ದಾರೆ.
ವಿಧಾನ ಪರಿಷತ್ನಲ್ಲಿ 1986-87 ರಿಂದ 1994-95ನೇ ಸಾಲಿನವರೆಗೆ ಆರಂಭವಾದ ಸತತವಾಗಿ ನಡೆಯುತ್ತಿರುವ ಎಲ್ಲಾ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವಂತೆ ಸರ್ಕಾರದ ಮೇಲೆ ಸರ್ವ ಪಕ್ಷದ ಸದಸ್ಯರು ತೀವ್ರ ಒತ್ತಡ ಹೇರಿದರು. ಪ್ರತಿಪಕ್ಷ ನಾಯಕರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ, 1995ಕ್ಕಿಂತ ಮುಂಚಿನ ಶಾಲೆಗಳೇ ಹೆಚ್ಚಿವೆ. ಕಾಂಗ್ರೆಸ್ ಸರ್ಕಾರ ಇದ್ದಾಗಲೂ ನಿರ್ಲಕ್ಷ್ಯ ಆಗಿದೆ. ಶಾಲೆಗಳ ಬಗ್ಗೆ ಕಳಕಳಿ ನಮ್ಮ ಸರ್ಕಾರಕ್ಕೆ ಇದೆ. ಇಲ್ಲವಾಗಿದ್ದರೆ ಸಭೆಯೇ ಆಗುತ್ತಿರಲಿಲ್ಲ. ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ಹಣ ಬಿಡುಗಡೆ ಆಗಿಲ್ಲ. ಸಿಎಂ ಜತೆ ಇಂದೇ ಮಾತುಕತೆ ನಡೆಸಿ ಒಂದು ತೀರ್ಮಾನ ಕೈಗೊಳ್ಳುತ್ತೇನೆ ಎಂದರು.
ಬಿಜೆಪಿ ಸದಸ್ಯ ಎಸ್. ವಿ. ಸಂಕನೂರು ಮಾತನಾಡಿ, ಶಿಕ್ಷಣ ಹಕ್ಕು ಕಾಯ್ದೆಯಡಿ 1ರಿಂದ 8ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡಬೇಕು. ಇಲ್ಲಿ ಕಾರ್ಯನಿರ್ವಹಿಸುವ ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರಿಗೆ ಬಾಕಿ ಇರುವ ಅನುದಾನ ಬಿಡುಗಡೆ ಮಾಡಿ. 114 ಶಾಲೆಯಲ್ಲಿ ಶಿಕ್ಷಕರು ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಸಾಮಾಜಿಕ ಬದ್ಧತೆಯಡಿ ಕಾರ್ಯ ಆಗಬೇಕು. ಈ ಬಗ್ಗೆ ಒಂದು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನೀವು ಆದೇಶ ನೀಡಬೇಕು. ಸರ್ಕಾರ ಶಿಕ್ಷಣಕ್ಕೆ ಮಹತ್ವ ಕೊಟ್ಟಿರುವಾಗ ಈ ಶಾಲೆಗಳನ್ನು ಬಿಟ್ಟಿರುವುದು ಎಷ್ಟು ಸರಿ. ಯಾವುದಾದರೂ ಯೋಜನೆ ಅಡಿ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಖಾಸಗಿ ಶಾಲೆಗಳಿಗೆ ವೇತನಾನುದಾನ: ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಯಾವುದೇ ಸರ್ಕಾರಕ್ಕೆ ಬದ್ಧತೆ ಇರಬೇಕು. ಯಡಿಯೂರಪ್ಪ ಸಿಎಂ ಆಗಿ ಬಂದ ಮೇಲೆ ಶಿಕ್ಷಣ ಇಲಾಖೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆ ಮಹತ್ವ ಅರಿತು ಕನ್ನಡ ಮಾಧ್ಯಮದ ಶಿಕ್ಷಣ ನೀಡುವ ಖಾಸಗಿ ಶಾಲೆಗೆ ವೇತನಾನುದಾನ ತಂದಿದ್ದೀರಿ. 2,699 ಶಾಲೆಗಳು ಇದರ ವ್ಯಾಪ್ತಿಗೆ ಒಳಪಟ್ಟಿದ್ದು, 3 ಸಾವಿರಕ್ಕೂ ಹೆಚ್ಚು ಶಾಲೆಗಳಿಗೆ ಸವಲತ್ತು ಸಿಕ್ಕಿಲ್ಲ. ಈ ಶಿಕ್ಷಕರ ಜೀವನ ನರಕ. ಯಡಿಯೂರಪ್ಪ, ಕುಮಾರಸ್ವಾಮಿ, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ವೇತನಾನುದಾನ ಸಿಕ್ಕಿತ್ತು. ಈಗಿನ ಸರ್ಕಾರ ಚೌಕಾಸಿ ಎಣಿಸುತ್ತಿದೆ.
ಶಿಕ್ಷಣ ಇಲಾಖೆ, ಅದರಲ್ಲೂ ಕನ್ನಡ ಮಾಧ್ಯಮ ಶಿಕ್ಷಣ ಉಳಿಸಲು ಆಗದ ಸರ್ಕಾರ ನಾಲಾಯಕ್. ಇಂತಹ ಸರ್ಕಾರ ಬೇಕಾ? 576 ಹುದ್ದೆಗೆ ವೇತನಾನುದಾನ ನೀಡಲಾಗದಿದ್ದರೆ ಹೇಗೆ? ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಆಗಿದೆ. ಆದರೆ ಈಗ ಅನುದಾನ ನೀಡಲು ಎದುರಾಗಿರುವ ಸಮಸ್ಯೆ ಏನು? ವಿಧಾನ ಪರಿಷತ್ ನಡಾವಳಿಯನ್ನು ಆರ್ಥಿಕ ಇಲಾಖೆ ಪರಿಗಣಿಸಲ್ಲ ಅಂದರೆ ಏನು? ಸರ್ಕಾರದ ಆರ್ಥಿಕ ಇಲಾಖೆ ಈ ಅನುದಾನ ಬಿಡುಗಡೆ ಸಂಬಂಧ ಆದೇಶ ಹೊರಡಿಸಿದೆ.
ಕಡಿಮೆ ಸಂಬಳಕ್ಕೆ ದುಡಿಯುತ್ತಿರುವ ಶಿಕ್ಷಕರು: ಸಾಕಷ್ಟು ಶಿಕ್ಷಕರಿಗೆ ವಯಸ್ಸಾಗಿದೆ. ಕೋವಿಡ್ ನಂತರ ಮಕ್ಕಳು ಕಾಲೇಜಿಗೆ ಬರುತ್ತಿಲ್ಲ. ಹಿಂದಿನಿಂದ ಬಂದ ವ್ಯವಸ್ಥೆ ಬದಲಾಗಿದ್ದೇಕೆ? ನಮ್ಮ ತಾಳ್ಮೆ ಕೆಟ್ಟಿದೆ. ನಾಳೆಯಿಂದಲೇ ಶಿಕ್ಷಕರಿಗೆ ಅನುದಾನ ನೀಡಿಕೆ ಪ್ರಾರಂಭವಾಗಲಿದೆ ಎಂದು ಪರಿಷತ್ಗೆ ಸಿಎಂ ಬಂದು ಭರವಸೆ ನೀಡುವವರೆಗೆ ನಾನು ಬಾವಿಯಿಂದ ಆಚೆ ಬರುವುದಿಲ್ಲ. ಶಿಕ್ಷಕರು ಕೆಲವರು ಪುಕ್ಕಟೆ, ಇಲ್ಲ 2 ಸಾವಿರ ರೂ.ಗೆ ಕೆಲಸ ಮಾಡುತ್ತಿದ್ದಾರೆ.