ಬೆಂಗಳೂರು: ರಾಪಿಡೊ ಬೈಕ್ ಸಂಚಾರ ನಿಷೇಧಿಸುವಂತೆ ಆಗ್ರಹಿಸಿ ನಾಳೆಯಿಂದ ಆಟೋ ಚಾಲಕರು ಕರೆಕೊಟ್ಟಿರುವ ಮುಷ್ಕರಕ್ಕೆ ಕಾಂಗ್ರೆಸ್ ನಾಯಕ ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಶ್ರೀರಾಮಪುರದಲ್ಲಿ ಕಾಂಗ್ರೆಸ್ ಮುಖಂಡ ಸತ್ಯ ಅವರು ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಟೋ ಚಾಲಕರಿಗೆ ಯೂನಿಫಾರಂ ನೀಡುವ ಮೂಲಕ ಮುಷ್ಕರಕ್ಕೆ ಬೆಂಬಲ ಸೂಚಿಸಿ ಬಳಿಕ ಮಾತನಾಡಿ, ರಾಪಿಡೊ ಬೈಕ್ ಟ್ಯಾಕ್ಸಿಗಳಿಂದ ಆಟೋ ಚಾಲಕರ ಜೀವನ ಹಾಳಾಗುತ್ತಿದೆ. ಆಟೋ ಚಾಲಕರ ಜೀವನ ನಿತ್ಯವೂ ನರಕ ಆಗುತ್ತಿದೆ. ರಾಪಿಡೊ ಬೈಕ್ಗಳಿಂದ ಆಟೋ ಚಾಲಕರ ಜೀವನ ಕಸಿದಿದೆ. ಹೀಗಾಗಿ ನಗರದಲ್ಲಿ ರಾಪಿಡೊ ಬೈಕ್ಗಳನ್ನ ಬ್ಯಾನ್ ಮಾಡಬೇಕು. ಬ್ಯಾನ್ ಆಗಲಿಲ್ಲ ಅಂದ್ರೆ ಕಾಂಗ್ರೆಸ್ ಪಕ್ಷದಿಂದ ಹೋರಾಟ ಖಚಿತ ಎಂದು ತಿಳಿಸಿದ್ದಾರೆ.
ಒಟ್ಟಾರೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ಯಾವುದೇ ಸಂಘಟನೆ ಪ್ರತಿಭಟನೆಗೆ ಇಳಿದರೂ ಒಂದಲ್ಲಾ ಒಂದು ರೀತಿ ಪ್ರತಿಪಕ್ಷ ಕಾಂಗ್ರೆಸ್ ತನ್ನ ಬೆಂಬಲ ವ್ಯಕ್ತಪಡಿಸುತ್ತಾ ಬಂದಿದೆ. ಇದೇ ನಿಟ್ಟಿನಲ್ಲಿ ಇದೀಗ ಆಟೊ ಚಾಲಕರ ಮುಷ್ಕರಕ್ಕೂ ದನಿಗೂಡಿಸಿದೆ.
ಸಿದ್ದರಾಮಯ್ಯ ಮೇಲೆ ಒತ್ತಡ: ಕೋಲಾರದಿಂದ ವಿಧಾನಸಭೆಗೆ ಸ್ಪರ್ಧಿಸುವುದಿಲ್ಲ ಎಂಬ ಮಾತನ್ನಾಡಿರುವ ಸಿದ್ದರಾಮಯ್ಯ ಅವರ ಮನವೊಲಿಸುವ ಯತ್ನವನ್ನು ಜಿಲ್ಲೆಯ ನಾಯಕರು ಮುಂದುವರಿಸಿದ್ದಾರೆ. ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ ಇಂದು ಬೆಂಗಳೂರಿನ ಸಿದ್ದರಾಮಯ್ಯ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಕೋಲಾರದಲ್ಲಿ ನಮ್ಮ ನಾಯಕರು ಸಿದ್ದರಾಮಯ್ಯ ಅವರು ಗೆದ್ದೇ ಗೆಲ್ಲುತ್ತಾರೆ. ಇನ್ನು ಅವರ ಜೊತೆ ಮಾತನಾಡಿಲ್ಲ. ನಿನ್ನೆ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಲು ವೇಟ್ ಮಾಡಿದಿವಿ ಎಂದರು.
ಕೋಲಾರ ಜಿಲ್ಲಾ ಕಾಂಗ್ರೆಸ್ ಅಷ್ಟೊಂದು ವೀಕ್ ಆಯಿತಾ ಎಂಬ ವಿಚಾರಕ್ಕೆ ಮಾತನಾಡಿ, ಇಲ್ಲಾ ಅವರನ್ನ ಗೆದ್ದೆ ಗೆಲ್ಲಿಸುತ್ತೇವೆ. ಗೆಲ್ಲುವುದರಲ್ಲಿ ಅನುಮಾನವೇ ಇಲ್ಲಾ. ಕೋಲಾರ ಜಿಲ್ಲೆಯಲ್ಲಿ ಮತ್ತು ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ತುಂಬಾ ಬಲಿಷ್ಠವಾಗಿದೆ. ವರ್ತೂರ್ ಪ್ರಕಾಶ್ ಹೇಳಿಕೆಯನ್ನು ನಾವು ಗಂಭಿರವಾಗಿ ಪರಿಗಣಿಸುವುದಿಲ್ಲ ಎಂದರು.
ಪುಟ್ಟಣ್ಣ ವಿರುದ್ಧ ಪೋಸ್ಟರ್:ರಾಜಾಜಿನಗರದಲ್ಲಿ ಮಾಜಿ ಎಂಎಲ್ಸಿ ಪುಟ್ಟಣ್ಣಗೆ ಕಾಂಗ್ರೆಸ್ ಟಿಕೆಟ್ ನೀಡುವುದನ್ನು ಖಂಡಿಸಿ ಕ್ಷೇತ್ರದಲ್ಲಿ ಪೋಸ್ಟರ್ ಅಭಿಯಾನ ಆರಂಭವಾಗಿದೆ.
ರಾಜಾಜಿನಗರ ಕಾಂಗ್ರೆಸ್ನಲ್ಲಿ ಮತ್ತೆ ಭುಗಿಲೆದ್ದ ಆಕ್ರೋಶ ವ್ಯಕ್ತವಾಗಿದ್ದು, ಪುಟ್ಟಣ್ಣ ‘‘ಗೋ ಬ್ಯಾಕ್’’ ಅಭಿಯಾನ ಪ್ರಾರಂಭಿಸಲಾಗಿದೆ. ರಾತ್ರೋರಾತ್ರಿ ರಾಜಾಜಿನಗರದ ಎಲ್ಲೆಡೆ ಪೋಸ್ಟರ್ ಅಂಟಿಸಲಾಗಿದ್ದು. ಪುಟ್ಟಣ್ಣ ವಿರೋಧಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೋ ಬ್ಯಾಕ್ ಪುಟ್ಟಣ್ಣ ಫ್ರಮ್ ರಾಜಾಜಿನಗರ ಎಂದು ಬರೆದಿರುವ ಪೋಸ್ಟರ್ಗಳನ್ನು ರಾಜಾಜಿನಗರದ ಬಾಷ್ಯಂ ಸರ್ಕಲ್, ರಾಮ ಮಂದಿರ, ಶಾಂತಿ ಸಾಗರ್ ಹೊಟೇಲ್ ಸೇರಿದ್ದಂತೆ ಎಲ್ಲೆಡೆ ಪೋಸ್ಟರ್ ಅಂಟಿಸಲಾಗಿದೆ. ಒಟ್ಟಾರೆ ಪುಟ್ಟಣ್ಣ ಬದಲು ಮೂಲ ಕಾಂಗ್ರೆಸ್ ನಾಯಕರಿಗೆ ಟಿಕೆಟ್ ನೀಡಬೇಕೆಂದು ಎಸ್.ಮನೋಹರ್, ಭವ್ಯಾ ನರಸಿಂಹಮೂರ್ತಿ, ಮಾಜಿ ಮೇಯರ್ ಪದ್ಮಾವತಿ ಸೇರಿದಂತೆ ಹಲವು ಕಾಂಗ್ರೆಸಿಗರು ಟಿಕೆಟ್ ನಿರೀಕ್ಷಿಸುತ್ತಿದ್ದಾರೆ.
ಇದೀಗ ಪೋಸ್ಟರ್ ಅಂಟಿಸುವ ಅಭಿಯಾನ ನಡೆದಿದ್ದು, ಇದನ್ನು ಯಾರು ಮಾಡಿಸುತ್ತಿದ್ದಾರೆ ಎಂಬುದು ಅರಿವಿಗೆ ಬಂದಿಲ್ಲ. ವಿಪರ್ಯಾಸ ಅಂದರೆ ನಗರದಲ್ಲಿ ಪೋಸ್ಟರ್ ಅಂಟಿಸುವ ಅಭಿಯಾನಕ್ಕೆ ಚಾಲನೆ ನೀಡಿದ್ದೇ ಕಾಂಗ್ರೆಸ್. ಬಿಜೆಪಿ ವಿರುದ್ಧ ಹೋರಾಟಕ್ಕೆ ಇದನ್ನು ಬಳಸಿಕೊಂಡಿತ್ತು. ಆದರೆ ಇದೀಗ ಕಾಂಗ್ರೆಸ್ ಅಭಿಯಾನ ಈಗ ಕಾಂಗ್ರೆಸ್ಗೇ ಮುಳುವಾಗಿದೆ.
ಇದನ್ನೂ ಓದಿ:ಮಾಜಿ ಸಿಎಂ ಕುಮಾರಸ್ವಾಮಿ ದೃಷ್ಠಿಯಲ್ಲಿ ಒನಕೆ ಓಬವ್ವ ಮಾಡಿದ್ದು ಅಪರಾಧವಾಗುತ್ತೆ: ಸಿ ಟಿ ರವಿ