ಬೆಂಗಳೂರು: ದೇಶದಲ್ಲಿ ಬಿಜೆಪಿ ಸರ್ಕಾರಿ ಸಂಸ್ಥೆಗಳನ್ನು ಪಕ್ಷದ ಮುಂಚೂಣಿ ಘಟಕದ ಹಾಗೆ ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷ ಡಿಕೆಶಿ ಬೆಂಬಲಕ್ಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಲಾಭಕ್ಕಾಗಿ ಬಿಜೆಪಿ ಸಿಬಿಐ, ಐಟಿ, ಇಡಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಕಳೆದ ಐದಾರು ವರ್ಷದಲ್ಲಿ ಬಿಜೆಪಿ ಸರ್ಕಾರದ ಆಡಳಿತ ನೋಡಿದಾಗ ಅವರು ಪ್ರತಿಪಕ್ಷ ನಾಯಕರನ್ನು, ಟೀಕಿಸಿದವರನ್ನು, ಎನ್‌ಜಿಒಗಳನ್ನು ಉದ್ದೇಶ ಪೂರ್ವಕವಾಗಿ ಗುರಿಯಾಗಿಸಿ, ಸುಳ್ಳು ಆರೋಪ ಮಾಡಿ, ಅವರನ್ನು ಮುಗಿಸುವ ಅಜೆಂಡಾ ನಡೆಸುತ್ತಿರುವುದು ಸ್ಪಷ್ಟವಾಗುತ್ತದೆ. ಕಾಂಗ್ರೆಸ್ ಪಕ್ಷ ಡಿಕೆಶಿ ಅವರ ಹಿಂದೆ ನಿಂತಿದೆ. ಅವರು ಈ ಪ್ರಕರಣದಿಂದ ಹೊರ ಬರುತ್ತಾರೆ ಎಂಬ ವಿಶ್ವಾಸ ಇದೆ. ನಾವೆಲ್ಲರೂ ಒಂದಾಗಿದ್ದೇವೆ. ಅವರ ಬೆಂಬಲಕ್ಕೆನ ನಾವಿದ್ದೇವೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಸರ್ಕಾರ ಇದ್ದಾಗ ನಮ್ಮ ಪಕ್ಷದ ವಿವಿಧ ನಾಯಕರ ಮೇಲೆ, ಡಿಕೆಶಿ, ಶ್ಯಾಮನೂರು ಶಿವಶಂಕರಪ್ಪ, ಎಂಟಿಬಿ ನಾಗರಾಜ್, ಅವರ ಆಪ್ತರ ಮೇಲೆ ಐಟಿ ದಾಳಿ ನಡೆಸಿದ್ದರು. ಏಕೆ ದಾಳಿ ನಡೆಸಿದರು ಎಂಬುದು ಗೊತ್ತೇ ಆಗುತ್ತಿರಲಿಲ್ಲ. ಆ ಮೇಲೆ ಆ ಪ್ರಕರಣಗಳು ಏನಾಯಿತು ಎಂಬುದೇ ಗೊತ್ತಾಗಲಿಲ್ಲ. ತನಿಖಾ ಏಜೆನ್ಸಿ ಪಕ್ಷದ ಅಜೆಂಡಾ ಹಿಡಿದು ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಡಿಕೆಶಿಯವರನ್ನು ಗುರಿಯಾಗಿಸಲಾಗುತ್ತಿದೆ. ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಡಿಕೆಶಿ ಗುಜರಾತ್ ಶಾಸಕರನ್ನು ರಕ್ಷಿಸಿದರು. ಆವಾಗ ಅವರ ಮೇಲೆ ದಾಳಿ ಮಾಡಿದರು. ಯಡಿಯೂರಪ್ಪ ಟೇಪ್ ಬಹಿರಂಗವಾದ ಮೇಲೆ ಅವರ ಮೇಲೆ ಏಕೆ ಸ್ವಯಂ ಪ್ರೇರಣೆಯಿಂದ ದಾಳಿ ಮಾಡಿಲ್ಲ. ಹೀಗಾಗಿ ರಾಜಕೀಯ ಸನ್ನಿವೇಶ ನೋಡಿ ದಾಳಿ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.