ಬೆಂಗಳೂರು: ಬೆಂಗಳೂರಿನ ಯಲಹಂಕ ಬಳಿಯ ಖಾಸಗಿ ರೆಸಾರ್ಟ್ ನಲ್ಲಿ ಬೀಡು ಬಿಟ್ಟಿರುವ ಮಧ್ಯಪ್ರದೇಶ ಶಾಸಕರನ್ನು ಭೇಟಿಯಾಗಲು ಅಡ್ಡಿಪಡಿಸಿದ ಪೊಲೀಸರಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ದಿಗ್ವಿಜಯ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಲು ಹೈಕೋರ್ಟ್ ನಿರಾಕರಿಸಿದೆ.
ಮಧ್ಯಪ್ರದೇಶ ಕಾಂಗ್ರೆಸ್ ಶಾಸಕರ ಭೇಟಿಗೆ ಬೆಂಗಳೂರು ನಗರ ಪೊಲೀಸರು ಅವಕಾಶ ನೀಡದ ಕ್ರಮ ಪ್ರಶ್ನಿಸಿ ದಿಗ್ವಿಜಯ್ ಸಿಂಗ್ ಅವರು ಸಲ್ಲಿಸಿದ್ದ ತುರ್ತು ರಿಟ್ ಅರ್ಜಿಯನ್ನು ನ್ಯಾ.ಆರ್.ದೇವದಾಸ್ ಅವರಿದ್ದ ಏಕ ಸದಸ್ಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಪ್ರತಿವಾದ ಆಲಿಸಿದ ಪೀಠ, ದಿಗ್ವಿಜಯ್ ಸಿಂಗ್ ಅವರ ಕೋರಿಕೆ ಪರಿಗಣಿಸಲು ಸಾಧ್ಯವಿಲ್ಲ. ಪೊಲೀಸರು ರೆಸಾರ್ಟ್ನಲ್ಲಿ ಇರುವ ಶಾಸಕರ ಮನವಿ ಮೇರೆಗೆ ಅರ್ಜಿದಾರರಿಗೆ ಭೇಟಿಯಾಗಲು ಅವಕಾಶ ನೀಡಿಲ್ಲ. ಹೀಗಾಗಿ ಪೊಲೀಸರ ಕ್ರಮ ಕಾನೂನು ಬಾಹಿರ ಅಲ್ಲ ಎಂದು ಆದೇಶಿಸಿ, ವಿಚಾರಣೆಯನ್ನು ಮಾ.26 ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ಅರ್ಜಿದಾರ ದಿಗ್ವಿಜಯ್ ಸಿಂಗ್ ಅವರ ಪರ ವಾದಿಸಿದ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ, ಖಾಸಗಿ ರೆಸಾರ್ಟ್ಗೆ ಭೇಟಿ ನೀಡಲು ಅಡ್ಡಿಪಡಿಸಿರುವ ಪೊಲೀಸರ ಕ್ರಮ ಕಾನೂನು ಬಾಹಿರ. ಪೊಲೀಸರ ಈ ನಡವಳಿಕೆ ಅರ್ಜಿದಾರರ ಮೂಲ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ದೂರಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ವಾದಿಸಿ, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಲ್ಲಿ ಈಗಾಗಲೇ ರಿಟ್ ಸಲ್ಲಿಕೆಯಾಗಿದೆ. ಇನ್ನೂ ಬೆಂಗಳೂರಿನಲ್ಲಿರುವ 22 ಶಾಸಕರು ರಾಜ್ಯ ಪೊಲಿಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದು ತಮಗೆ ರಕ್ಷಣೆ ನೀಡುವಂತೆ ಕೋರಿದ್ದಾರೆ. ಹೀಗಾಗಿ ಪೊಲೀಸರು ದಿಗ್ವಿಜಯ್ ಸಿಂಗ್ ಅವರ ಭೇಟಿಗೆ ಅವಕಾಶ ನೀಡಲು ನಿರಾಕರಿಸಿದ್ದಾರೆ. ಪೊಲೀಸರು ಕಾನೂನು ರೀತಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಮುಖ್ಯವಾಗಿ ಅರ್ಜಿದಾರರು ಆರೋಪಿಸಿರುವಂತೆ ಯಾರನ್ನು ಬಂಧಿಸಿಲ್ಲ. ಸುರಕ್ಷತಾ ಕ್ರಮವಾಗಿ ಕೇವಲ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ವಿವರಿಸಿದರು.