ಬೆಂಗಳೂರು: ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ನನ್ನ ಬಳಿ ಬನ್ನಿ ಎಂದು ಯಾರಾನ್ನಾದರೂ ಕರೆದಿದ್ದಾರೆಯೇ? ಇವರ ಸ್ವಾರ್ಥಕ್ಕಾಗಿ ಹೋಗಿ ಈಗ ಆರೋಪ ಮಾಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ನಿನ್ನೆ ನಡೆದ ಸಭೆಯಲ್ಲಿ ಎಲ್ಲಾ ಶಾಸಕರಿಗೂ ವಸ್ತುಸ್ಥಿತಿಯನ್ನು ಸಿಎಂ ಮನವರಿಕೆ ಮಾಡಿಕೊಟ್ಟಿದ್ದಾರೆ. ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಬಜೆಟ್ನಲ್ಲಿ ಸಾಧ್ಯವಾಗುವುದನ್ನು ಮಾಡಿಕೊಡುವುದಾಗಿ ಭರವಸೆ ಕೊಟ್ಟಿದ್ದಾರೆ. ಅದಕ್ಕೆ ಶಾಸಕರು ತೃಪ್ತರಾಗಿದ್ದು, ಎರಡು, ಮೂರು ತಿಂಗಳಿಗೊಮ್ಮೆ ಇಂತಹ ಸಭೆ ನಡೆಸಲು ಸಲಹೆ ಕೊಟ್ಟರು. ಈ ಸಲಹೆಯನ್ನು ಸಿಎಂ ಮತ್ತು ರಾಜ್ಯಾಧ್ಯಕ್ಷರು ಒಪ್ಪಿದ್ದಾರೆ ಎಂದರು.
ನಾನು ಕೇವಲ ಯಡಿಯೂರಪ್ಪನವರ ಪರವಾಗಿ ಮಾತನಾಡುವವನಲ್ಲ. ಸಂಘಟನೆ ಮತ್ತು ಪಕ್ಷ ತಾಯಿ ಸಮಾನ. ಪಕ್ಷವನ್ನು ಕಟ್ಟಿ ಬೆಳೆಸಿ ಅಧಿಕಾರಕ್ಕೆ ತಂದಿರುವ ಯಡಿಯೂರಪ್ಪನವರು ತಂದೆಯ ಸಮಾನ. ಇಬ್ಬರನ್ನೂ ಗೌರವಿಸಬೇಕು ಇದು ನಮ್ಮ ಕರ್ತವ್ಯವೂ ಆಗಿದೆ ಎಂದರು.
ಯತ್ನಾಳ್ ವಿರುದ್ಧ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ಯಡಿಯೂರಪ್ಪನವರ ಮಕ್ಕಳು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನುವುದು ಕೇವಲ ಊಹಾಪೋಹ. ವಿಜಯೇಂದ್ರ ರಾಜ್ಯದ ಉಪಾಧ್ಯಕ್ಷರಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ವಿಜಯೇಂದ್ರ ಬನ್ನಿ ಎಂದು ಯಾರನ್ನಾದರೂ ಕರೆದಿದ್ದಾರೆಯೇ? ಇವರ ಸ್ವಾರ್ಥಕ್ಕಾಗಿ ಹೋಗಿ, ಈಗ ಆರೋಪ ಮಾಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಹರಿಹಾಯ್ದರು.
ಯತ್ನಾಳ್ ವಿರುದ್ಧ ಪಕ್ಷ ಏನು ಕ್ರಮ ಕೈಗೊಳ್ಳಲಿದೆ ನೋಡೋಣ:
ಯಡಿಯೂರಪ್ಪ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಸ್ವಾರ್ಥಕ್ಕೋಸ್ಕರ ಯಾರು ಬೇಕಾದರೂ ಆರೋಪ ಮಾಡಬಹುದು. ಆದರೆ ಈ ಆರೋಪದಲ್ಲಿ ಹುರುಳಿಲ್ಲ, ಇದು ಒಳ್ಳೆಯ ಬೆಳವಣಿಗೆಯೂ ಅಲ್ಲ. ಮುಖ್ಯಮಂತ್ರಿಗಳ ಹಾಗೂ ಪಕ್ಷದ ವಿರುದ್ಧ ಬಹಿರಂಗವಾಗಿ ಮಾತನಾಡಿದರೆ ಶಿಸ್ತುಕ್ರಮ ಜರುಗಿಸುವುದಾಗಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಈಗಾಗಲೇ ಹೇಳಿದ್ದಾರೆ. ಆ ವಿಚಾರದಲ್ಲಿ ಯತ್ನಾಳ್ ಬಗ್ಗೆ ಪಕ್ಷ ಏನು ತೀರ್ಮಾನ ಕೈಗೊಳ್ಳುತ್ತೋ ನೋಡೋಣ ಎಂದರು.
ರಾಜಸ್ವ ಸಂಗ್ರಹದಲ್ಲಿ ಹಿನ್ನಡೆ:
ನಮ್ಮ ಮುಂದೆ ಅನೇಕ ಸವಾಲುಗಳಿವೆ, ಕೊರೊನಾದಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಮುಖ್ಯಮಂತ್ರಿಗಳು, ಸಚಿವರು ಕೊರೊನಾವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ರಾಜಸ್ವ ಸಂಗ್ರಹದಲ್ಲಿ ಸ್ವಲ್ಪ ಹಿನ್ನಡೆಯಾಗಿದೆ. ಇದನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಅನುದಾನಕ್ಕಾಗಿ ಪಟ್ಟು ಹಿಡಿಯುತ್ತಿರುವ ಶಾಸಕರಿಗೆ ಸಲಹೆ ನೀಡಿದರು.
ಸಂಪುಟ ಸೇರಲು ಆತುರವಿಲ್ಲ:
ಈ ಸಭೆಯಲ್ಲಿ ಸಚಿವ ಸಂಪುಟ ವಿಸ್ತರಣೆ, ಯಾರನ್ನು ಸಂಪುಟಕ್ಕೆ ಸೇರಿಸಬೇಕು, ಯಾರನ್ನು ಕೈಬಿಡಬೇಕು ಎಂದು ಯಾವುದೇ ಚರ್ಚೆಯಾಗಿಲ್ಲ. ತಾಳ್ಮೆಯಿಂದ ಕಾಯುವಂತೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೂಚನೆ ನೀಡಿದ್ದಾರೆ. ನಾವೆಲ್ಲ ತಾಳ್ಮೆಯಿಂದ ಕಾಯುತ್ತೇವೆ, ಸಂಪುಟ ಸೇರಲು ನನಗೆ ಯಾವುದೇ ಆತುರವಿಲ್ಲ ಎಂದರು.
ಇನ್ನೆರಡು ದಿನದಲ್ಲಿ ಸಂಪುಟ ಸೇರುತ್ತೇನೆ ಎನ್ನುವ ಎಂಟಿಬಿ ನಾಗರಾಜ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, ಅವರು ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಬಂದಿದ್ದಾರೆ. ಅಧಿಕಾರದಲ್ಲಿದ್ದವರು ತ್ಯಾಗ ಮಾಡಿ ಬಂದಿದ್ದಾರೆ. ಸರ್ಕಾರಕ್ಕೆ ಗೌರವ ತಂದಿದ್ದಾರೆ ಹಾಗಾಗಿ ಅವರನ್ನು ಗೌರವಿಸುತ್ತೇವೆ. ಆದರೆ ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ತಿಳಿಸಿದರು.