ಬೆಂಗಳೂರು: ಪಿಎಸ್‌ಐ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಲು ನಾವು ಸಿದ್ಧ. ಆದರೆ, ನ್ಯಾಯಾಲಯದ ಆದೇಶಕ್ಕಾಗಿ ಕಾಯುತ್ತಿದ್ದೇವೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ. ಸಿಎಆರ್-ಡಿಎಆರ್ ಆರ್‌ಎಸ್‌ಐ, ಕೆಎಸ್‌ಆರ್‌ಪಿ ಸ್ಪೆಷಲ್ ಆರ್‌ಎಸ್‌ಐ, ಕೆಎಸ್‌ಐಎಸ್‌ಎಫ್ ಪಿಎಸ್‌ಐ ಹುದ್ದೆಗಳಿಗೆ ಭಾನುವಾರ ಲಿಖಿತ ಪರೀಕ್ಷೆ ನಡೆಸುತ್ತಿರುವ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಅವರು, '545 ಪಿಎಸ್‌ಐ ಹುದ್ದೆಗಳಿಗೂ ಮರು ಪರೀಕ್ಷೆ ನಡೆಸಲು ನಾವು ಸಿದ್ಧರಿದ್ದೇವೆ. ಆದರೆ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೂ ಮರು ಪರೀಕ್ಷೆಗೆ ನಿರ್ಬಂಧವಿದೆ. ನಾವು ನ್ಯಾಯಾಲಯದ ತೀರ್ಪಿಗೆ ಬದ್ಧ. 545 ಪಿಎಸ್‌ಐ ಹುದ್ದೆಗಳ ಮರು ಪರೀಕ್ಷೆ ನಡೆಸಿದ ಬಳಿಕ 402 ಪಿಎಸ್‌ಐ ಹುದ್ದೆಗಳಿಗೆ ಪರೀಕ್ಷೆ ನಡೆಸಲಿದ್ದೇವೆ' ಎಂದು ತಿಳಿಸಿದ್ದಾರೆ.
ಪಿಎಸ್‌ಐ ನೇಮಕಾತಿ ಹಗರಣವೇನು?: 545 ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದ್ದ ಅವ್ಯವಹಾರ ಕಳೆದ ವರ್ಷದ ಅತಿದೊಡ್ಡ ಚರ್ಚಾ ವಿಷಯವಾಗಿತ್ತು. ರಾಜ್ಯ ಸರ್ಕಾರ, ಪರೀಕ್ಷಾ ಫಲಿತಾಂಶ ರದ್ದುಗೊಳಿಸಿ ಪ್ರಕರಣವನ್ನು ಸಿಐಡಿ ತನಿಖೆ ವಹಿಸಿತ್ತು. ಅಕ್ರಮದಲ್ಲಿ ಭಾಗಿಯಾದ ಆರೋಪದಡಿ ನೇಮಕಾತಿ ವಿಭಾಗದ ಎಡಿಜಿಪಿ, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಅಭ್ಯರ್ಥಿಗಳು ಸೇರಿ 50ಕ್ಕೂ ಅಧಿಕ ಆರೋಪಿಗಳನ್ನು ಇದುವರೆಗೂ ಬಂಧಿಸಲಾಗಿದೆ.
ಇದನ್ನೂ ಓದಿ:ಪಿಎಸ್‌ಐ ಅಕ್ರಮದ ಆರೋಪಿಗಳ ವಿಚಾರಣೆ: ಇಡಿಗೆ ನೀಡಿದ್ದ ಅನುಮತಿ ರದ್ದುಪಡಿಸಿದ ಹೈಕೋರ್ಟ್