ಬೆಂಗಳೂರು:2023 ಕಳೆದು 2024ರ ವಸಂತಕ್ಕೆ ಕಾಲಿಡಲು ಕ್ಷಣಗಣನೆ ಆರಂಭಗೊಂಡಿದೆ. ಕಳೆದ ಒಂದು ವರ್ಷದಲ್ಲಿ ರಾಜ್ಯ ಬಿಜೆಪಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಕೆಲವರು ಪಕ್ಷ ತೊರೆದರೆ, ಮತ್ತೆ ಕೆಲವರು ಪಕ್ಷಕ್ಕೆ ಬಂದಿದ್ದಾರೆ. ಆಡಳಿತ ಪಕ್ಷವಾಗಿದ್ದ ಬಿಜೆಪಿ ಚುನಾವಣೆಯಲ್ಲಿ ಸೋತು ಪ್ರತಿಪಕ್ಷ ಸ್ಥಾನಕ್ಕೆ ಬಂದಿದೆ. ರಾಜ್ಯಕ್ಕೆ ಹೊಸ ಸಾರಥಿಯ ನೇಮಕವಾಗಿದೆ. ಆದರೂ ಸಹ ವರ್ಷಾರಂಭದಿಂದಲೂ ಇರುವ ಅಸಮಾಧಾನ, ಬಂಡಾಯ ಮಾತ್ರ ಕಡಿಮೆಯಾಗಿಲ್ಲ.
ರಾಜ್ಯದಲ್ಲಿ ನಾಲ್ಕು ವರ್ಷ ಆಡಳಿತ ನಡೆಸಿದ ಬಿಜೆಪಿ ಮರಳಿ ಅಧಿಕಾರಕ್ಕೆ ಬರಬೇಕು ಎನ್ನುವ ಕನಸನ್ನು ನನಸಾಗಿಸಿಕೊಳ್ಳುವಲ್ಲಿ ವಿಫಲವಾಯಿತು. ಪಕ್ಷದ ದಯನೀಯ ಸೋಲಿಗೆ ಹತ್ತು ಹಲವು ಕಾರಣಗಳಿವೆ. ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡಿದ್ದು, ಪರ್ಯಾಯ ನಾಯಕತ್ವ ಇಲ್ಲದೇ ಹೋಗಿದ್ದು, ಸೇರಿದಂತೆ ಹಲವು ತಪ್ಪುಗಳು ಪಕ್ಷದ ಸೋಲಿಗೆ ಕಾರಣವಾದವು ಎಂದು ವಿಶ್ಲೇಷಿಸಲಾಗುತ್ತಿದೆ. ವರ್ಷಾರಂಭದಲ್ಲಿಯೇ ನಂದಿನಿ ವಿವಾದ ಬಿಜೆಪಿಗೆ ಬಿಸಿತುಪ್ಪವಾಗಿದ್ದು ಸುಳ್ಳಲ್ಲ.
ಇದರ ಜೊತೆಯಲ್ಲಿಯೇ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಬೇಡಿಕೆ ಹೋರಾಟ ಬಿಜೆಪಿಗೆ ದೊಡ್ಡ ಹಿನ್ನಡೆ ತಂದಿತು. ಅಷ್ಟಾದರೂ ಸರ್ಕಾರ ಮಾರ್ಚ್ನಲ್ಲಿ 2ಸಿಗೆ ಒಕ್ಕಲಿಗ, 2ಡಿಗೆ ಲಿಂಗಾಯತ, ಇಡ್ಲ್ಯೂಎಸ್ಗೆ ಮುಸ್ಲಿಂ ಎಂದು ಒಬಿಸಿ ಮೀಸಲಾತಿ ಮರು ವರ್ಗೀಕರಿಸಿ ಆದೇಶ ಹೊರಡಿಸಿತ್ತು. ಆದರೆ, ಅದು ಚುನಾವಣೆಯಲ್ಲಿ ಮತ ತಂದುಕೊಡುವಲ್ಲಿ ವಿಫಲವಾಯ್ತು ಎಂದೇ ಹೇಳಬಹುದು.
ರಾಜ್ಯ ಬಿಜೆಪಿ ಆಶಯಕ್ಕೆ ವಿರುದ್ಧವಾಗಿಯೇ ಆಂತರಿಕ ಸಮೀಕ್ಷಾ ವರದಿಗಳು ಬಂದಿದ್ದರಿಂದ ಖುದ್ದು ನರೇಂದ್ರ ಮೋದಿ ಹಾಗೂ ಅಮಿತ್ ಶಾ ಈ ಹಿಂದೆಂದಿಗಿಂತಲೂ ಅತಿ ಹೆಚ್ಚಿನ ಚುನಾವಣಾ ರ‍್ಯಾಲಿ, ಸಮಾವೇಶ ಹಾಗೂ ರೋಡ್ ಶೋಗಳನ್ನು ನಡೆಸಿದರು. ಕೇಂದ್ರ ಪ್ರಮುಖ ನಾಯಕರೆಲ್ಲ ಕರ್ನಾಟಕದಲ್ಲೇ ಬೀಡು ಬಿಟ್ಟು ಪ್ರಚಾರ ನಡೆಸಿದರಾದರೂ ಬೆಂಗಳೂರು ಹೊರತುಪಡಿಸಿ ಉಳಿದೆಡೆ ಬಿಜೆಪಿಗೆ ನಿರೀಕ್ಷಿತ ಬೆಂಬಲ ಸಿಗಲಿಲ್ಲ.
ಶೆಟ್ಟರ್, ಸವದಿ ಫ್ಯಾಕ್ಟರ್:ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನಿರಾಕರಣೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು. ಇದಕ್ಕೆ ಬಿಜೆಪಿಯಲ್ಲಿ ಲಿಂಗಾಯತ ನಾಯಕರ ಕಡೆಗಣನೆ ಎಂದು ಬಿಂಬಿತವಾಯಿತು. ಇದನ್ನು ಸಮರ್ಥವಾಗಿ ಎದುರಿಸುವಲ್ಲಿ ಬಿಜೆಪಿ ನಾಯಕರು ವಿಫಲವಾದರು. ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ಸ್ಥಾನಗಳನ್ನು ಕಳೆದುಕೊಳ್ಳಬೇಕಾಯಿತು.
ಪಕ್ಷದ ಗೆಲುವಿಗಾಗಿ ಬಿಜೆಪಿ ಪ್ರಚಾರ ಸಮಿತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ನೇತೃತ್ವ ನೀಡಲಾಯಿತು. ಬೊಮ್ಮಾಯಿ ತಮ್ಮ ಬೆಂಬಲಕ್ಕಾಗಿ ನಟ ಸುದೀಪ್ರನ್ನು ಕರೆತಂದು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಆದೂ ಸಹ ಬಿಜೆಪಿಗೆ ವರ್ಕೌಟ್ ಆಗಲಿಲ್ಲ. ಅಂತಿಮವಾಗಿ ಕಾಂಗ್ರೆಸ್ನ ಗ್ಯಾರಂಟಿ ಅಲೆಯಲ್ಲಿ ಬಿಜೆಪಿ ಮಂಕಾಯಿತು. 100 ಸ್ಥಾನದ ಆಸುಪಾಸಿನ ನಿರೀಕ್ಷೆಯಲ್ಲಿದ್ದ ಬಿಜೆಪಿ ನಾಯಕರು 66 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಈ ಸೋಲಿನೊಂದಿಗೆ ಬಿಜೆಪಿ ಆಡಳಿತ ಪಕ್ಷದ ಸಾಲಿನಿಂದ ಪ್ರತಿಪಕ್ಷದ ಸಾಲಿಗೆ ಬರಬೇಕಾಯಿತು.
ರಾಜೀನಾಮೆ ಪರ್ವ:ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಟಿಕೆಟ್ ಸಿಗದ ಕಾರಣಕ್ಕೆ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ನತ್ತ ಹಲವು ರಾಜಕಾರಣಿಗಳು ಮುಖ ಮಾಡಿದರು. ಬಂಡಾಯ ಆಡಳಿತ ಮತ್ತು ಪ್ರತಿಪಕ್ಷ ಎರಡೂ ಕಡೆ ಇದ್ದು ಎರಡೂ ಕಡೆಯೂ ಪಕ್ಷಾಂತರ ನಡೆಯಿತು.
ರಾಜೀನಾಮೆ ನೀಡಿದವರ ವಿವರ:
- ಬಿಜೆಪಿ ಪ್ರಾಥಮಿಕ ಸದಸ್ಯತ್ವ, ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಪುಟ್ಟಣ್ಣ ರಾಜೀನಾಮೆ ಸಲ್ಲಿಕೆ
- ಬಿಜೆಪಿಗೆ ಗುಡ್ ಬೈ ಹೇಳಿದ ಬಿಎಸ್ವೈ ಆಪ್ತ ಮಾಜಿ ಎಂಎಲ್ಸಿ ಮೋಹನ್ ಲಿಂಬಿಕಾಯಿ, ಕಾಂಗ್ರೆಸ್ ಸೇರ್ಪಡೆ
- ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮೂಡಿಗೆರೆ ಶಾಸಕರಾಗಿದ್ದ ಎಂಪಿ ಕುಮಾರಸ್ವಾಮಿ
- ಪರಿಷತ್ ಸದಸ್ಯ ಸ್ಥಾನಕ್ಕೆ ಬಾಬುರಾವ್ ಚಿಂಚನಸೂರ್ ರಾಜೀನಾಮೆ, ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ
- ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಲಕ್ಷ್ಮಣ ಸವದಿ
- ಬಿಜೆಪಿ ತೊರೆದ ಸೋಲಿಲ್ಲದ ಸರದಾರ ಜಗದೀಶ್ ಶೆಟ್ಟರ್, ಕಾಂಗ್ರೆಸ್ ಸೇರ್ಪಡೆ
- ಶಿವಮೊಗ್ಗ ಕ್ಷೇತ್ರದ ಟಿಕೆಟ್ ಸಿಗದ ಕಾರಣಕ್ಕಾಗಿ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ತೊರೆದು ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರಿದರು.
ಬಿಜೆಪಿಗೆ ಸೇರ್ಪಡೆಯಾದವರು:
- ಜೆಡಿಎಸ್ ತೊರೆದು ಬಿಜೆಪಿಗೆ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಸೇರ್ಪಡೆ
- ಕಲಘಟಗಿ ಕ್ಷೇತ್ರದ ಟಿಕೆಟ್ ಮಿಸ್ ಆಗಿದ್ದಕ್ಕೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮಾಜಿ ಎಂಎಲ್ಸಿ ನಾಗರಾಜ ಛಬ್ಬಿ
- ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಮಾಜಿ ಶಾಸಕ ಕೊಳ್ಳೆಗಾಲ ಬಾಲರಾಜ್
- ಎಂ.ಪಿ.ಪ್ರಕಾಶ್ ಅವರ ಪುತ್ರಿ, ಮೊಮ್ಮಗ ಬಿಜೆಪಿ ಸೇರ್ಪಡೆ
ಚುನಾವಣಾ ನಿವೃತ್ತಿ:
- ಬಿಜೆಪಿ ಹೈಕಮಾಂಡ್ ಸೂಚನೆಯಂತೆ ಹಿರಿಯ ನಾಯಕ ಕೆ.ಎಸ್ ಈಶ್ವರಪ್ಪ ಚುನಾವಣಾ ನಿವೃತ್ತಿ ಘೋಷಣೆ
- ಹೈಕಮಾಂಡ್ ಸೂಚನೆಯಂತೆ ಚುನಾವಣಾ ರಾಜಕಾರಣದಿಂದ ಸಂಸದ ಸದಾನಂದಗೌಡ ನಿವೃತ್ತಿ ಘೋಷಣೆ
- ವಯಸ್ಸಿನ ಕಾರಣದಿಂದಾಗಿ ಚಾಮರಾಜನಗರ ಸಂಸದ ವಿ. ಶ್ರೀನಿವಾಸ್ ಪ್ರಸಾದ್ 2024ರ ಮಾರ್ಚ್ನಲ್ಲಿ ರಾಜಕೀಯ ನಿವೃತ್ತಿ ಪಡೆಯುವ ಘೋಷಣೆ
- ವಯಸ್ಸಿನ ಕಾರಣದಿಂದಾಗಿ ತುಮಕೂರು ಸಂಸದ ಜಿ.ಎಸ್.ಬಸವರಾಜು ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ
- 2024ರ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹಾವೇರಿ ಸಂಸದ ಶಿವಕುಮಾರ್ ಉದಾಸಿ ಘೋಷಣೆ
- 2024ರ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಪ್ರಕಟಿಸಿದ ವಿಜಯಪುರ ಸಂಸದ ರಮೇಶ್ ಜಿಗಜಿಣಗಿ
ಮುಂದುವರೆದ ಅಸಮಾಧಾನ:ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಚುನಾವಣೆಗೆ ಮೊದಲಿನಿಂದಲೂ ರಾಜ್ಯ ನಾಯಕತ್ವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಯಡಿಯೂರಪ್ಪ ಕುಟುಂಬವನ್ನು ಟೀಕಿಸಿಕೊಂಡು ಬಂದಿದ್ದು, ಇದೀಗಲೂ ಅವರ ಅಸಮಾಧಾನ ಶಮನಗೊಂಡಿಲ್ಲ. ಮಾಜಿ ಸಚಿವ ಸೋಮಣ್ಣ ಸಹ ಇದೇ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಹೈಕಮಾಂಡ್ ಸೂಚನೆಯಂತೆ ಸ್ವಕ್ಷೇತ್ರ ಬಿಟ್ಟು ಎರಡು ಕಡೆ ಸ್ಪರ್ಧಿಸಿ ಸಿದ್ದರಾಮಯ್ಯ ಎದುರಿಸಿದ್ದ ಸೋಮಣ್ಣ, ಎರಡರಲ್ಲಿಯೂ ಸೋತಿದ್ದರು. ನಂತರ ರಾಜ್ಯಾಧ್ಯಕ್ಷ ಸ್ಥಾನವನ್ನು ಕೇಳಿದ್ದರು. ಯಾವುದೇ ಹುದ್ದೆ ಸಿಗದೇ ಇರುವುದರಿಂದ ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದಾರೆ.
ಮೈತ್ರಿ:ಲೋಕಸಭೆಚುನಾವಣಾ ಪೂರ್ವ ಬಿಜೆಪಿ ಜೆಡಿಎಸ್ ಮೈತ್ರಿಗೆ ಹೈಕಮಾಂಡ್ ನಿರ್ಧಾರ ಕೈಗೊಂಡಿದೆ. ದೆಹಲಿಗೆ ಜೆಡಿಎಸ್ ನಾಯಕರನ್ನು ಕರೆಸಿಕೊಂಡಿದ್ದ ಹೈಕಮಾಂಡ್ ನಾಯಕರು ಮೈತ್ರಿಯ ಭಾಗವಾಗುವ ಕುರಿತು ಮಾತುಕತೆ ನಡೆಸಿ ಅದರಲ್ಲಿ ಸಫಲರಾಗಿದ್ದು, ಅದನ್ನು ದೇವೇಗೌಡರೇ ಸುದ್ದಿಗೋಷ್ಠಿ ನಡೆಸಿ ಬಹಿರಂಗಪಡಿಸಿದ್ದರು. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಎನ್ಡಿಎ ಭಾಗವಾಗಿಯೇ ಸ್ಪರ್ಧೆ ಮಾಡಲಿದೆ. ಇದನ್ನು ರಾಜ್ಯ ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ.
ಶಸ್ತ್ರಚಿಕಿತ್ಸೆ:ಯಡಿಯೂರಪ್ಪ ರಾಜೀನಾಮೆ ನಂತರ ಮುಖ್ಯಮಂತ್ರಿಯಾಗಿ ರಾಜ್ಯದ ಚುಕ್ಕಾಣಿ ಹಿಡಿದಿದ್ದ ಬಸವರಾಜ ಬೊಮ್ಮಾಯಿ ಮಂಡಿನೋವಿನಲ್ಲೇ ಆಡಳಿತ ನಡೆಸಿದ್ದರು. ಶಸ್ತ್ರಚಿಕಿತ್ಸೆಗೆ ವೈದ್ಯರು ಸಲಹೆ ನೀಡಿದ್ದರೂ ದೀರ್ಘಾವಧಿ ವಿಶ್ರಾಂತಿ ಪಡೆಯಬೇಕಾಗಲಿದೆ ಎನ್ನುವ ಕಾರಣಕ್ಕೆ ಶಸ್ತ್ರಚಿಕಿತ್ಸೆ ಮುಂದೂಡುತ್ತಲೇ ಬಂದಿದ್ದ ಬೊಮ್ಮಾಯಿ ಚುನಾವಣೆ ನಂತರ ಶಸ್ತ್ರಚಿಕಿತ್ಸೆಗೆ ಒಳಗಾದರು.
ಹೊಸ ನಾಯಕತ್ವ:ಚುನಾವಣೆ ಮುಗಿದು ಆರು ತಿಂಗಳು ಕಳೆದರೂ ಪ್ರತಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷರ ನೇಮಕ ಮಾಡಿರಲಿಲ್ಲ. ಬಜೆಟ್ ಅಧಿವೇಶನ ಹಾಗೂ ಮಳೆಗಾಲದ ಅಧಿವೇಶನದಲ್ಲಿ ಪ್ರತಿಪಕ್ಷ ನಾಯಕರಲ್ಲಿದೇ ಬಿಜೆಪಿ ಸದನದಲ್ಲಿ ಪಾಲ್ಗೊಂಡು ಆಡಳಿತ ಪಕ್ಷದ ಟೀಕೆಗೆ ಗುರಿಯಾಗಿ ಮುಜುಗರಕ್ಕೊಳಗಾಗಿತ್ತು. ವಿಧಾನಸಭಾ ಚುನಾವಣಾ ಕಾರಣಕ್ಕೆ ರಾಜ್ಯಾಧ್ಯಕ್ಷ ಸ್ಥಾನದಿಂದ ನಳಿನ್ ಕುಮಾರ್ ಕಟೀಲ್ ಅವರನ್ನು ಬದಲಾವಣೆ ಮಾಡದೇ ಹೆಚ್ಚಿನ ಅವಧಿಗೆ ಅಧಿಕಾರ ವಿಸ್ತರಣೆ ಮಾಡಿದ್ದ ಬಿಜೆಪಿ, ಹೈಕಮಾಂಡ್ ಕೊನೆಗೂ ಹೊಸ ರಾಜ್ಯಾಧ್ಯಕ್ಷರ ನೇಮಕ ಮಾಡಿದೆ. ವಿ.ಸೋಮಣ್ಣ ಸೇರಿದಂತೆ ಹಿರಿಯ ನಾಯಕರು ಆಕಾಂಕ್ಷಿಗಳಾಗಿದ್ದರೂ ಕಿರಿಯ ನಾಯಕ ಹಾಗೂ ಮೊದಲ ಬಾರಿಗೆ ಶಾಸಕರಾಗಿರುವ ಬಿ.ವೈ ವಿಜಯೇಂದ್ರಗೆ ಹೈಕಮಾಂಡ್ ಅವಕಾಶ ನೀಡಿದೆ. ಪ್ರತಿಪಕ್ಷದ ನಾಯಕರಾಗಿ ಆರ್ ಅಶೋಕ್ ಆಯ್ಕೆಯಾಗಿದ್ದಾರೆ. ಲೋಕಸಭಾ ಚುನಾವಣೆ ಸನಿಹದಲ್ಲಿರುವ ಕಾರಣ ನೂತನ ಪದಾಧಿಕಾರಿಗಳ ತಂಡವನ್ನು ಬಿಜೆಪಿ ರಚಿಸಿದೆ.
ಇದನ್ನೂ ಓದಿ:ಹಿನ್ನೋಟ: 2023ರ ಅಂತ್ಯದಲ್ಲಿ ಬಲ ಹೆಚ್ಚಿಸಿಕೊಂಡ ಬಿಜೆಪಿ... ಹಿಂದಿ ರಾಜ್ಯಗಳಲ್ಲಿ ’ಕೈ’ಕೊಟ್ಟ ಗ್ಯಾರಂಟಿ!