ಬೆಂಗಳೂರು: ದಿನೇ ದಿನೆ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆಯಿಂದ ರಾಜ್ಯದಲ್ಲಿರುವ ಬಹುತೇಕ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳು ಸಾಕಾಗುತ್ತಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಈ ಪರಿಸ್ಥಿತಿಯನ್ನು "ಆರೋಗ್ಯ ತುರ್ತು ಪರಿಸ್ಥಿತಿ" (Health Emergency Situation) ಎಂದು ಘೋಷಿಸಿ ಸಮರೋಪಾದಿಯಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಕೋವಿಡ್ ಹಾಸಿಗೆಗಳನ್ನು ವಿಸ್ತರಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರಿಗೆ ಪತ್ರ ಬರೆದಿರುವ ಗೌಡರು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ವೈದ್ಯಕೀಯ ಆಕ್ಸಿಜನ್‌ಯುಕ್ತ ಹಾಸಿಗೆಗಳನ್ನು ವಿಸ್ತರಿಸಲು ತುರ್ತು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೊಂಕಿನ 2ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಕೊರೊನಾ ಸೋಂಕಿತರಲ್ಲಿ ಹಲವಾರು ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುವುದು ಅತ್ಯವಶ್ಯಕವಾಗಿದೆ. ಅಲ್ಲದೇ ಸೋಂಕಿತರಲ್ಲಿ ಹಲವರಿಗೆ ವೈದ್ಯಕೀಯ ಆಕ್ಸಿಜನ್‌ಯುಕ್ತ ಹಾಸಿಗೆಗಳು ಹಾಗೂ ವೆಂಟಿಲೇಟರ್‌ಗಳ ಅವಶ್ಯವಿದೆ. ಅದರಂತೆ, ಪ್ರತಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಮುಖೇನ ವೈದ್ಯಕೀಯ ಆಕ್ಸಿಜನ್ ನೀಡಲು ಅಗತ್ಯವಿರುವ ವೆಂಟಿಲೇಟರ್ ಸರಬರಾಜು ಕೂಡಲೇ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಸುದ್ದಿ ಮಾಧ್ಯಮಗಳ ಇತ್ತೀಚಿನ ವರದಿ ಪ್ರಕಾರ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೊನಾ ಸೊಂಕಿನ 1ನೇ ಅಲೆಯನ್ನು ನಿಯಂತ್ರಿಸಲು ಖರೀದಿಸಿದ ಸಾವಿರಾರು ವೆಂಟಿಲೇಟರ್‌ಗಳನ್ನು ಬಳಸದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಉಗ್ರಾಣದಲ್ಲಿ ಉಳಿದಿರುವುದಾಗಿ ತಿಳಿದು ಬಂದಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಈ ಬಗ್ಗೆ ಕಾರ್ಯೋನ್ಮುಖವಾಗಿ ಬಳಸದೇ ಇರುವ ವೆಂಟಿಲೇಟರ್‌ಗಳನ್ನು ತಜ್ಞರಿಂದ ಪರಿಶೀಲಿಸಿ ಆಸ್ಪತ್ರೆಗಳಲ್ಲಿ ಬಳಸಲು ತುರ್ತು ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಮುಂದುವರಿದು ಈ ವೆಂಟಿಲೇಟರ್‌ಗಳನ್ನು ಆಸ್ಪತ್ರೆಗಳಲ್ಲಿ ನಿಗಾ ವಹಿಸಲು ಅಗತ್ಯವಿರುವ ನುರಿತ ತಂತ್ರಜ್ಞರುಗಳ ಕೊರತೆ ಇದ್ದು, ರಾಜ್ಯ ಸಕಾರ ಇಂತಹ ತಂತ್ರಜ್ಞರುಗಳನ್ನು ಹೊರ ಗುತ್ತಿಗೆ ಸೇವೆ ಅಥವಾ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡು ಕಾರ್ಯ ನಿರ್ವಹಿಸಬೇಕು. ಈ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ಜಿಲ್ಲಾ ಆಸ್ಪತ್ರೆ ಮುಖ್ಯಾಧಿಕಾರಿಗಳಿಗೆ ನಿರ್ವಹಿಸಲು ಅಗತ್ಯವಿರುವ ಅಧಿಕಾರ ತುರ್ತಾಗಿ ನೀಡಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಅಗತ್ಯ ಅವಶ್ಯಕ ಇರುವ ತುರ್ತು ಕ್ರಮಗಳನ್ನು ಕೈಗೊಳ್ಳುವುದಾಗಿ ಭಾವಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.