ಬೆಳಗಾವಿ: ಕೈಗಾರಿಕಾ ಸಚಿವರಾಗಿ ಸುದೀರ್ಘ 10 ವರ್ಷ ಸೇವೆ ಸಲ್ಲಿಸಿದ ಕೀರ್ತಿ ಆರ್.ವಿ.ದೇಶಪಾಂಡೆ ಅವರಿಗೆ ಸಲ್ಲುತ್ತಿದೆ. ರಾಜ್ಯದಲ್ಲಿ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಳಗಾವಿ ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ಹಿರಿಯ ಶಾಸಕ ಆರ್ ವಿ ದೇಶಪಾಂಡೆ ಅವರಿಗೆ 2022ರ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕೈಗಾರೀಕರಣ ಹಾಗೂ ಕೈಗಾರಿಕಾ ನೀತಿ ರೂಪಿಸುವುದರಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಆರ್ಥಿಕತೆ ಬದಲಾವಣೆ, ಉದಾರೀಕರಣ ಹಾಗೂ ಜಾಗತೀಕರಣದ ಲಾಭವನ್ನು ರಾಜ್ಯಕ್ಕೆ ಲಭಿಸುವಂತೆ ಪ್ರಾಮಾಣಿಕವಾಗಿ ಪರಿಶ್ರಮ ವಹಿಸುವಲ್ಲಿ ಅವರ ಪಾತ್ರವಿದೆ ಎಂದರು.
ಸರಳ ಸಜ್ಜನ ವ್ಯಕ್ತಿತ್ವ: ಆರ್.ವಿ. ದೇಶಪಾಂಡೆಯವರೊಂದಿಗೆ ಹಳೆಯ ನೆನಪುಗಳಿವೆ. ಸರಳ, ಸಜ್ಜನ ವ್ಯಕ್ತಿತ್ವ, ರಾಜ್ಯ ಹಾಗೂ ದೇಶದ ಹಿತಕ್ಕೆ ಚಿಂತನೆ ಮಾಡುವವರು. ರಾಜ್ಯದ ರಾಜಕಾರಣದಲ್ಲಿ ಗುರುತಿಸಲ್ಪಟ್ಟವರು. 1980ರಲ್ಲಿ ಎಪಿಎಂಸಿ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಸ್ಆರ್ ಬೊಮ್ಮಾಯಿ ಅವರ ಬಳಿಗೆ ಒಂದು ತಂಡವನ್ನು ಕರೆತಂದಿದ್ದರು. ಕೆಲವೇ ದಿನಗಳಲ್ಲಿ ಎಪಿಎಂಸಿ ಅಧ್ಯಕ್ಷರಾದರು. ಜನತಾ ಪಕ್ಷದ ಅಧ್ಯಕ್ಷರು, ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ನಂತರ 1983ರ ಚುನಾವಣೆಯಲ್ಲಿ ಹಳಿಯಾಳ ಕ್ಷೇತ್ರಕ್ಕೆ ಆಯ್ಕೆಯಾದರು ಎಂದು ನೆನಪು ಮಾಡಿಕೊಂಡರು.