ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ 41.8 ಸಾವಿರ ಹೆಕ್ಟೇರ್ ಭೂಮಿ ಸವಳು ಜವಳು: ಮಣ್ಣಿನ ಆರೈಕೆಗೆ ಮುಂದಾದ ಕೃಷಿ ಇಲಾಖೆ

ಈ ಬಾರಿ 2.9 ಕೋಟಿ ವೆಚ್ಚದಲ್ಲಿ 350 ಹೆಕ್ಟೇರ್ ಪ್ರದೇಶದಲ್ಲಿ ಸವಳು ಜವಳು ಭೂಮಿ ಉಪಚರಿಸಲು ಕೇಂದ್ರ ಪುರಸ್ಕೃತ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ

KN_BNG
ಕೃಷಿ ಭೂಮಿ

By

Published : Oct 12, 2022, 4:53 PM IST

ಬೆಂಗಳೂರು: ರಾಜ್ಯದಲ್ಲಿ ವ್ಯಾಪಕ ಮಳೆಯಾಗಿ ಕರೆ ಕಟ್ಟೆಗಳು ತುಂಬಿದ್ದರೂ ಫಲವತ್ತತೆ ಕೊರತೆಯಿಂದ ಭೂಮಿ ಸವಳು ಜವಳಾಗುತ್ತಿದ್ದು ಕೃಷಿ ಉತ್ಪಾದನೆಯಲ್ಲಿ ಕುಂಠಿತವಾಗುವ ಆತಂಕ ಎದುರಾಗಿದೆ.

ಇದರಿಂದ ಆತಂಕಕ್ಕೆ ಸಿಲುಕಿರುವ ರೈತರ ನೆರವಿಗೆ ಸರ್ಕಾರ ಧಾವಿಸಿದ್ದು, ಹಸಿರು ಗೊಬ್ಬರ ಬಳಕೆ ಸವಳು ಜವಳು ಭೂಮಿ ಉಪಚಾರದಂತಹ ಯೋಜನೆ ಜಾರಿಗೊಳಿಸಿದ್ದು, ಈ ಬಾರಿ 2.9 ಕೋಟಿ ವೆಚ್ಚದಲ್ಲಿ 350 ಹೆಕ್ಟೇರ್ ಪ್ರದೇಶದಲ್ಲಿ ಸವಳು ಜವಳು ಭೂಮಿ ಉಪಚರಿಸಲು ಕೇಂದ್ರ ಪುರಸ್ಕೃತ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ನಗರೀಕರಣದ ವೇಗದಿಂದಾಗಿ ಒಂದು ಕಡೆ ಕೃಷಿ ಭೂಮಿ ಕಡಿಮೆಯಾಗುತ್ತಿದ್ದರೆ ಮತ್ತೊಂದು ಕಡೆ ಇರುವ ಭೂಮಿಯ ಫಲವತ್ತತೆ ಕಡಿಮೆಯಾಗುತ್ತಾ ಸಾಗುತ್ತಿದೆ. ಇದಕ್ಕೆ ಬಹುಮುಖ್ಯ ಕಾರಣ ನಮ್ಮ ಕೃಷಿ ಪದ್ದತಿ. ಅತಿಯಾದ ಗಡಸು ನೀರು ಬೋರ್​ವೆಲ್ ಗಳ ಮೂಲಕ ಮೇಲೆತ್ತಿ ನೀರಾವರಿಗೆ ಬಳಸಿಕೊಳ್ಳುತ್ತಿರುವುದು, ರಾಸಾಯನಿಕ ಗೊಬ್ಬರ ಬಳಕೆ ಪ್ರಮಾಣ ಹೆಚ್ಚಿಸಿರುವುದು, ಮಳೆಯ ಪ್ರಮಾಣಕ್ಕಿಂತ ನೀರಿನ ಆವಿಯಾಗುವ ಪ್ರಮಾಣ ಹೆಚ್ಚಾಗುತ್ತಿರುವುದು ಕೃಷಿ ಭೂಮಿಯು ಸವಳು ಜವಳಾಗಿ ನಿರುಪಯುಕ್ತವಾಗಲು ಪ್ರಮುಖ ಕಾರಣವಾಗಿದೆ.

ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದಿಂದ ಪಡೆಯಲಾಗಿರುವ ಮಾಹಿತಿ ಅನ್ವಯ ರಾಜ್ಯದಲ್ಲಿ 41,816.80 ಹೆಕ್ಟೇರ್ ಪ್ರದೇಶವು ಸವಳು ಜವಳು ಪ್ರದೇಶವಾಗಿದೆ ಎನ್ನುವ ಮಾಹಿತಿಯನ್ನು ಕೃಷಿ ಇಲಾಖೆ ಅಧಿಕೃತವಾಗಿ ತಿಳಿಸಿದ್ದು, ಜಿಲ್ಲಾವಾರು ತಾಲ್ಲೂಕುವಾರು ಅಂಕಿ-ಅಂಶಗಳನ್ನು ಕಲೆಹಾಕಿ ಕಾರಣಗಳ ಅಧ್ಯಯನ ನಡೆಸಿದೆ. ಒಣ ಭೂಮಿ/ಶುಷ್ಕ ಪ್ರದೇಶಗಳಲ್ಲಿ, ನೀರು ಆವಿಯಾಗುವಿಕೆಯು ಬೀಳುವ ಮಳೆಯ ಪ್ರಮಾಣವನ್ನು ಮೀರಿದರೆ ಮಣ್ಣಿನಲ್ಲಿರುವ ಲವಣಗಳು ಮಣ್ಣಿನ ಮೇಲೆ/ ಬೇರಿನ ಬಳಿ ಸಂಗ್ರಹಗೊಳ್ಳುತ್ತದೆ.

ನೀರಿನ ಗುಣಮಟ್ಟ:ನೀರಾವರಿಯ ಅತಿಯಾದ ಬಳಕೆ, ಕಾಲುವೆಗಳು ಹಾಗೂ ಟ್ಯಾಂಕ್‌ಗಳಿಂದ ನೀರಿನ ಸೋರಿಕೆಯಿಂದ ಅಂತರ್ಜಲ ಮಟ್ಟವು ಹೆಚ್ಚುತ್ತದೆಯಾದರೂ, ನೀರಿನ ಗುಣಮಟ್ಟ ಲವಣಯುಕ್ತವಾಗಿದ್ದರೆ ಕ್ಯಾಪಿಲ್ಲರಿ ಕ್ರಿಯೆ ಮತ್ತು ಆವಿಯಾಗುವಿಕೆಯಿಂದ ನಿರಂತರವಾಗಿ ಮಣ್ಣಿನ ಮೇಲ್ ಭಾಗದಲ್ಲಿ ಉಪ್ಪು ಶೇಖರಣೆಯನ್ನು ಕಾಣಬಹುದು. ಅದರಲ್ಲೂ ಕೆಳಭಾಗದ ಮಣ್ಣಿನಲ್ಲಿ (sub surface) ಶೇಖರಣೆ ಪ್ರಮಾಣವು ಹೆಚ್ಚು ವೇಗವಾಗಿರುತ್ತದೆ ಎಂದು ಕೃಷಿ ಇಲಾಖೆ ತಿಳಿಸಿದೆ. ಒಣ ಭೂಮಿ/ಶುಷ್ಕ, ಪುದೇಶಗಳಲ್ಲಿ, ಅಂತರ್ಜಲವು ಸಾಮಾನ್ಯವಾಗಿ ಗಣನೀಯ ಪ್ರಮಾಣದಲ್ಲಿ ಕರಗುವ ಲವಣಗಳನ್ನು (soluble salts) ಹೊಂದಿರುತ್ತದೆ.

ಮಣ್ಣಿಗೆ ಹಾನಿ:ಇಂತಹ ನೀರನ್ನು ನೀರಾವರಿಗಾಗಿ ಬಳಸುವುದರಿಂದ ಮಣ್ಣು ಹಾನಿಗೊಳಗಾಗುತ್ತದೆ. ಅಲ್ಲದೆ ನೀರಾವರಿ ನೀರಿನಲ್ಲಿ ಲವಣಗಳ ಸ್ವರೂಪ ಮತ್ತು ಮಣ್ಣಿನ ವಿಧ ಕೂಡ ಪ್ರಮುಖ ಕಾರಣವಾಗಿರುತ್ತದೆ. ರೈತರು ತಮ್ಮ ಬಾವಿ, ಕೂಳವೆ ಬಾವಿಗಳಲ್ಲಿ ಸಿಗುತ್ತಿರುವ ನೀರನ್ನು ಪರೀಕ್ಷಿಸದೇ ಜಮೀನುಗಳಿಗೆ ನೀರಾವರಿಯನ್ನು ಒದಗಿಸುವ ಕಾರಣ ಉತ್ಪಾದಕತೆಯಲ್ಲಿ ನಷ್ಟ ಅನುಭವಿಸುತ್ತಾರೆ.

ಅಸಮರ್ಪಕ ಮತ್ತು ನೀರಿನ ದುರ್ಬಲ ಬಸಿಯುವಿಕೆಯ ಕಾರಣದಿಂದ ಅನೇಕ ಲವಣಯುಕ್ತ ಮಣ್ಣುಗಳನ್ನು ಅಚ್ಚುಕಟ್ಟು ಪ್ರದೇಶಗಳಲ್ಲಿ ಕಾಣಬಹುದಾಗಿದೆ. ನೀರಿನ ಇಂಗುವಿಕ ಕಡಿಮೆಯಿದ್ದಲ್ಲಿ. ಮಣ್ಣಿನ ಮೇಲ್ಪದರದಲ್ಲಿ ಲವಣಗಳು ಶೇಖರಣೆಯಾಗುವುದು, ಅಲ್ಲದೇ ಬೇರುಗಳು ಸಹ ಲವಣಗಳು ಕೆಳಗೆ ಬಸಿಯುವುದನ್ನು ತಡೆಯುತ್ತದೆ. ಬಂಡೆಗಳ ರಾಸಾಯನಿಕ ಕ್ರಿಯೆಯಿಂದ ಲವಣಗಳು ನೇರವಾಗಿ ಬಿಡುಗಡೆಗೊಳ್ಳುತ್ತವೆ.

ಅದರಲ್ಲಿಯೂ, ಸೋಡಿಯಂ ಲವಣ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಲವಣಗಳಿಗಿಂತ ಹೆಚ್ಚು ಹಾನಿಕಾರಕವಾಗಿವೆ. ಇವೆಲ್ಲ ಭೂಮಿ ಸವಳು ಜವಳಾಗಲು ಕಾರಣವಾಗಲಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.

ಪರಿಹಾರ:ಸಮಸ್ಯಾತ್ಮಕ ಮಣ್ಣಿನ ಪುದೇಶಗಳಲ್ಲಿ ಅಂತರ ಬಸಿ ಕಾಲುವೆ ನಿರ್ಮಾಣ ಮೂಲಕ ಸವಳು ಜವಳು ಮಣ್ಣಿನ ಸುಧಾರಣೆ ಮತ್ತು ಮಣ್ಣು ಸುಧಾರಣಾ ಪರಿಕರಗಳು ಮತ್ತು ಹಸಿರು ಗೊಬ್ಬರಗಳ ಬಳಕ ಮೂಲಕ ಆಮ್ಲೀಯ ಮಣ್ಣುಗಳ ಸುಧಾರಣಾ ಕ್ರಮಗಳನ್ನು ಕೈಗೊಂಡು ರೈತರಲ್ಲಿ ಮಣ್ಣು ಸಮಸ್ಯೆ ಕುರಿತು ಅರಿವು ಮೂಡಿಸಿ, ಸುಧಾರಿತ ಬೇಸಾಯ ಕ್ರಮಗಳನ್ನು ಅಳವಡಿಸಲು ಉತ್ತೇಜಿಸಲಾಗುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಲಾನಯನ ಅಭಿವೃದ್ಧಿ ಇಲಾಖೆ ವತಿಯಿಂದ ಮಳೆಯಾಶ್ರಿತ ಜಲಾನಯನ ಪ್ರದೇಶದಲ್ಲಿ (ಅಚ್ಚುಕಟ್ಟು ಪದೇಶವನ್ನು ಹೊರತುಪಡಿಸಿ) ಕೇಂದ್ರ ಪುರಸ್ಕೃತ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಉಪ ಯೋಜನೆ- ಸಮಸ್ಯಾತ್ಮಕ ಮಣ್ಣುಗಳ ಸುಧಾರಣೆ ಅಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಶೇ.60:40ರ ಅನುಪಾತದಲ್ಲಿ ಆಯ್ಕೆ ಜಿಲ್ಲೆಗಳಲ್ಲಿ ಸವಳು - ಜವಳು ಜಮೀನು ಉಪಚರಿಸುವ ಕಾರ್ಯಕ್ರಮವನ್ನು 2016-17 ರಿಂದ 2021-22 ರವರೆಗೆ ಅನುಷ್ಠಾನಗೊಳಿಸಲಾಗಿದೆ.

ಈ ಕಾರ್ಯಕ್ರಮದಡಿ ಮಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಲವಣಾಂಶಗಳನ್ನು ಅಂತರ ಬಸಿಕಾಲುವೆ (sub surface drainage) ಮೂಲಕ ಹೊರಹಾಕಿ ಮಣ್ಣಿನ ಗುಣಧರ್ಮವನ್ನು ಸುಧಾರಿಸುವ ಚಟುವಟಿಕೆಯನ್ನು ಒಳಗೊಂಡಿರುತ್ತದೆ. ಪ್ರತಿ ಹೆಕ್ಟೇರಿಗೆ 60,000 ರೂ.ಗಳ ವೆಚ್ಚದಲ್ಲಿ ಅಂತರ ಬಸಿ ಕಾಲುವೆ ನಿರ್ಮಿಸುವ ಘಟಕವಿದ್ದು, ಇದರೊಂದಿಗೆ ಮಣ್ಣಿನ ಗುಣ ಧರ್ಮ ಸುಧಾರಿಸಲು ಇತರೆ ಯೋಜನೆಗಳ ಸಹಯೋಗದೊಂದಿಗೆ ರಿಯಾಯಿತಿ ದರದಲ್ಲಿ ಮಣ್ಣು ಸುಧಾರಣಾ ಪರಿಕರಗಳು, ಹಸಿರೆಲೆ ಗೊಬ್ಬರ ಬೀಜಗಳ ವಿತರಣೆಯಂತಹ ಘಟಕಗಳನ್ನೂ ಒಗ್ಗೂಡಿಸಲಾಗುತ್ತದೆ ಎಂದು ತಿಳಿಸಿದೆ.

13 ಕೋಟಿ ಅನುದಾನ ಬಿಡುಗಡೆ:ಕೃಷಿ ವಿಕಾಸ ಯೋಜನೆಯಡಿ 2016-17 ನೇ ಸಾಲಿನಿಂದ 2021-22 ನೇ ಸಾಲಿನವರೆಗೆ ಒಟ್ಟು ರೂ. 13.77 ಕೋಟಿ ಅನುದಾನ ಬಿಡುಗಡೆಯಾಗಿದ್ದು ಆಯ್ದ ಜಿಲ್ಲೆಗಳಲ್ಲಿ ಸಮಸ್ಯಾತ್ಮಕ ಮಣ್ಣಿನ ಪ್ರದೇಶಗಳಲ್ಲಿ ಅಂತರ ಬಸಿ ಕಾಲುವೆ ನಿರ್ಮಾಣ ಮೂಲಕ ಸವಳು ಜವಳು ಮಣ್ಣಿನ ಸುಧಾರಣೆ ಉಪಚಾರವನ್ನು ಒಟ್ಟು 2435.68 ಹಕ್ಟೇರ್ ಪ್ರದೇಶದಲ್ಲಿ ಉಪಚಾರ ಕೈಗೊಳ್ಳಲಾಗಿದೆ.

2022-23 ನೇ ಸಾಲಿನಲ್ಲಿ ರೂ. 2.9 ಕೋಟಿ ವೆಚ್ಚದಲ್ಲಿ 350 ಹೆಕ್ಟೇರ್ ಪುದೇಶದಲ್ಲಿ ಸವಳು ಜವಳು ಭೂಮಿಯನ್ನು ಉಪಚರಿಸಲು ರಾಷ್ಟ್ರೀಯ ಕೃಷಿ ವಿಕಾಸ ಉಪಯೋಜನೆಯಡಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಮಾಹಿತಿ ನೀಡಿದ್ದಾರೆ.

ಈವರೆಗೂ 13.7 ಕೋಟಿ ಹಣ ಕೇಂದ್ರದಿಂದ ಬಂದಿದ್ದು, ಈ ಬಾರಿ ಮತ್ತೆ 3 ಕೋಟಿ ಕೇಳಲಾಗಿದೆ. ಮಣ್ಣಿನ ಫಲವತ್ತತೆ ಹೆಚ್ಚಿಸಲು ರಾಜ್ಯ ಸರ್ಕಾರ ಬದ್ದವಾಗಿದೆ. ಕೃಷಿಕರ ನೆರವಿಗೆ ನಮ್ಮ ಸರ್ಕಾರ ಸದಾ ಸಿದ್ದವಾಗಿರಲಿದೆ. ಈ ಬಾರಿ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಆರಂಭಗೊಂಡಿವೆ. ಕೃಷಿಗೆ ಬೇಕಾದ ಬೀಜ,ಗೊಬ್ಬರ ಪೂರೈಕೆ ಜೊತೆಗೆ ಮಣ್ಣಿನ ಸವಳು ಕಡಿಮೆ ಮಾಡಲು ಅಗತ್ಯ ಎಲ್ಲ ಕ್ರಮವನ್ನೂ ಕೈಗೊಳ್ಳಲಾಗುತ್ತದೆ ಎಂದು ಸಚಿವ ಬಿಸಿ ಪಾಟೀಲ್ ತಿಳಿಸಿದ್ದಾರೆ.

ಇದನ್ನೂ ಓದಿ:ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಅಕ್ರಮ: ಕಡಿವಾಣಕ್ಕೆ ಸರ್ಕಾರದ ಹೊಸ ಅಸ್ತ್ರವೇನು?

ABOUT THE AUTHOR

...view details