ಕರ್ನಾಟಕ

karnataka

ಶರಾವತಿ ಸಂತ್ರಸ್ತರ ಪುನರ್ವಸತಿ ಅರಣ್ಯ ಭೂಮಿ ಡಿನೋಟಿಫೈಗೆ ಅನುಮತಿಸಿ: ಕೇಂದ್ರಕ್ಕೆ ಬಿಎಸ್ವೈ ಮನವಿ

ಶರಾವತಿ ಕಣಿವೆ ಯೋಜನೆಯ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಅರಣ್ಯಭೂಮಿ ಡಿನೋಟಿಫಿಕೇಶನ್​ಗೆ ಅನುಮತಿ ನೀಡುವಂತೆ ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್​ ಅವರಿಗೆ ಮನವಿ ಸಲ್ಲಿಸಿದರು.

By

Published : Oct 19, 2022, 7:41 PM IST

Published : Oct 19, 2022, 7:41 PM IST

denotification-of-forest-land-for-rehabilitation-of-sharavati-valley-victims
ಶರಾವತಿ ಕಣಿವೆ ಸಂತ್ರಸ್ತರ ಪುನರ್ವಸತಿ ಅರಣ್ಯ ಭೂಮಿ ಡಿನೋಟಿಫಿಕೇಷನ್ ಗೆ ಅನುಮತಿ ನೀಡಿ: ಕೇಂದ್ರಕ್ಕೆ ಬಿಎಸ್ವೈ ಮನವಿ

ಬೆಂಗಳೂರು: ಶರಾವತಿ ಕಣಿವೆ ಜಲವಿದ್ಯುತ್ ಯೋಜನೆಯ ಸಂತ್ರಸ್ತ ಕುಟುಂಬಗಳ ಪುನರ್ವಸತಿಗಾಗಿ ಅರಣ್ಯ ಭೂಮಿಯ ಡಿನೋಟಿಫಿಕೇಷನ್ ಸಂಬಂಧ ರಾಜ್ಯದ ಪ್ರಸ್ತಾವನೆಗೆ ಅನುಮತಿ ನೀಡುವಂತೆ ಕೇಂದ್ರ ಪರಿಸರ, ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಸಲ್ಲಿಸಿದರು.

ನವದೆಹಲಿ ಪ್ರವಾಸದಲ್ಲಿರುವ ಯಡಿಯೂರಪ್ಪ ಇಂದು ಮಧ್ಯಾಹ್ನ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ, ಸಾಗರ ಶಾಸಕ ಹರತಾಳು ಹಾಲಪ್ಪ ಜೊತೆ ಕೇಂದ್ರ ಪರಿಸರ, ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿದರು. ಶರಾವತಿ ಕಣಿವೆ ಸಂತ್ರಸ್ತರ ಕಷ್ಟಗಳನ್ನು ವಿವರಿಸಿ ಶರಾವತಿ ಕಣಿವೆ ಹೈಡ್ರೋ ಪ್ರಾಜೆಕ್ಟ್ ಪೀಡಿತ ಕುಟುಂಬಗಳ ಪುನರ್ವಸತಿ ಉದ್ದೇಶಕ್ಕಾಗಿ ಎಫ್‌ಸಿ ಕಾಯ್ದೆ 1980 ರ ಮೊದಲು ಬಿಡುಗಡೆಯಾದ 9272.11 ಎಕರೆ ಅರಣ್ಯ ಭೂಮಿಯನ್ನು ಬೇರೆಡೆಗೆ ತಿರುಗಿಸಲು ಅನುಮತಿ ಕೋರಿದರು.

ಶರಾವತಿ ಕಣಿವೆ ಹೈಡ್ರೋ ಎಲೆಕ್ಟ್ರಿಕ್ ಯೋಜನೆಯನ್ನು 1958ರ ಫೆಬ್ರವರಿಯಲ್ಲಿ ಪ್ರಾರಂಭಿಸಿದ್ದು, ಅದೇ ಸಮಯದಲ್ಲಿ ಯೋಜನೆಯ ಪೀಡಿತ ಕುಟುಂಬಗಳನ್ನು (PAFS) ಅರಣ್ಯ ಭೂಮಿಯಲ್ಲಿ ಪುನರ್ವಸತಿ ಮಾಡಲು ನಿರ್ಧರಿಸಲಾಯಿತು. ಅದರಂತೆ 27 ವಿವಿಧ ಸರ್ಕಾರಿ ಆದೇಶಗಳ ಮೂಲಕ 1958 ರಿಂದ 1969ರ ಅವಧಿಯಲ್ಲಿ ಅವರನ್ನು ಅರಣ್ಯಗಳಲ್ಲಿ ಸುರಕ್ಷಿತ ಸ್ಥಳಗಳಲ್ಲಿ ಪುನರ್ವಸತಿ ಮಾಡಲಾಯಿತು. ಆಗಿನ ಮೈಸೂರು ಅರಣ್ಯ ಕಾಯಿದೆ-1900 ರ ಸೆಕ್ಷನ್-30 ರ ಪ್ರಕಾರ ಅಧಿಕೃತ ಗೆಜೆಟ್‌ನಲ್ಲಿ ಡಿ-ನೋಟಿಫಿಕೇಶನ್ ಆದೇಶವನ್ನು ಹೊರಡಿಸುವ ಮತ್ತು ಪ್ರಕಟಿಸುವ ಔಪಚಾರಿಕತೆಯನ್ನು ಹೊರತುಪಡಿಸಿ ಕಂದಾಯ ದಾಖಲೆಗಳಲ್ಲಿ ಜಮೀನುಗಳ ಸ್ಥಿತಿಯನ್ನು ಬದಲಾಯಿಸುವುದು.

ಕರ್ನಾಟಕ ಅರಣ್ಯ ಕಾಯಿದೆ 1963, ಕರ್ನಾಟಕ ಅರಣ್ಯ ನಿಯಮ 1969, ವನ್ಯಜೀವಿ (ರಕ್ಷಣೆ) ಕಾಯಿದೆ 1972, ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ ಘೋಷಣೆ 1974, ಕರ್ನಾಟಕ ಅರಣ್ಯ ಕಾಯಿದೆ 1978, ಅರಣ್ಯ (ಸಂರಕ್ಷಣೆ) ಕಾಯಿದೆ 1980 ಮತ್ತು 1980 ರ ಆದೇಶಗಳನ್ನು ಜಾರಿಗೊಳಿಸುವ ಮೊದಲು ಬಿಡುಗಡೆಯಾದ ಭೂಮಿಯನ್ನು ಡಿ-ನೋಟಿಫಿಕೇಶನ್ ಮಾಡುವ ಉದ್ದೇಶವನ್ನು ಭೂ ಬಿಡುಗಡೆ ಆದೇಶಗಳಲ್ಲಿ ಸ್ಪಷ್ಟವಾಗಿ ಹೇಳಿದ್ದರೂ, ಅಚಾತುರ್ಯದಿಂದ ತಕ್ಷಣವೇ ಮಾಡಲಾಗಿಲ್ಲ. ಪರಿಣಾಮವಾಗಿ, ಜಮೀನುಗಳನ್ನು ರೂಪಾಂತರಿಸಲಾಗಿಲ್ಲ ಮತ್ತು ಪುನರ್ವಸತಿದಾರರ ಹೆಸರನ್ನು ಕಂದಾಯ ದಾಖಲೆಗಳಲ್ಲಿ ಸೇರಿಸಲಾಗಿಲ್ಲ. ಇದರಿಂದಾಗಿ ಎಲ್ಲಾ ರೀತಿಯ ಸರ್ಕಾರಿ ಸವಲತ್ತುಗಳು, ಸಬ್ಸಿಡಿಗಳು, ಸಾಲಗಳು, ಪರಿಹಾರಗಳು ಪುನರ್ವಸತಿದಾರರಿಗೆ ಸಿಗದೆ ಭೂಮಿಯ ಮೇಲಿನ ಮಾಲೀಕತ್ವದ ಭಾವನೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎನ್ನುವುದನ್ನು ಕೇಂದ್ರ ಸಚಿವರ ಗಮನಕ್ಕೆ ತಂದರು.

ಕರ್ನಾಟಕ ಸರ್ಕಾರ 1958 ರಿಂದ 1969 ರ ಅವಧಿಯಲ್ಲಿ 27 ಸರ್ಕಾರಿ ಆದೇಶಗಳ ಮೂಲಕ ಹಂಚಿಕೆ ಮಾಡಿರುವ 9272.11 ಎಕರೆ ಭೂಮಿಯನ್ನು ಡಿನೋಟಿಫಿಕೇಶನ್ ಮಾಡುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಅರಣ್ಯ ಸಂರಕ್ಷಣಾ ಕಾಯ್ದೆ, 1980 ರ ಸೆಕ್ಷನ್ 2 ರ ಅಡಿಯಲ್ಲಿ ಕಡ್ಡಾಯವಾಗಿ ಪೂರ್ವಾನುಮತಿ ಪಡೆದು ಸಲ್ಲಿಸಲಾಗುತ್ತಿದ್ದು, ಪ್ರಸ್ತಾವನೆಯನ್ನು ಮತ್ತೊಮ್ಮೆ ಪರಿಶೀಲಿಸಿ ರಾಜ್ಯದ ಮನವಿಗೆ ಸ್ಪಂದಿಸುವಂತೆ ಕೋರಿದರು.

ಇದನ್ನೂ ಓದಿ :ಕಲಬುರಗಿಯಲ್ಲಿ ಜನ ಸಂಕಲ್ಪ ಸಮಾವೇಶ: ಮಳೆ ನಡುವೆ ಕಾಂಗ್ರೆಸ್ ವಿರುದ್ಧ ಸಿಎಂ ಗುಡುಗು

ABOUT THE AUTHOR

...view details