ಕರ್ನಾಟಕ

karnataka

ETV Bharat / state

ಕೊರೊನಾ ಮಹಾಮಾರಿಯ ನಡುವೆ ಈ ವರ್ಷ ಡೆಂಘಿ ಹಾವಳಿ ಕಡಿಮೆ..!

ಬೆಂಗಳೂರಿನಲ್ಲಿ ಈ ಬಾರಿ ಜುಲೈ 22ರವರೆಗೆ 853 ಜನರಲ್ಲಿ ಡೆಂಘಿ ಕಾಣಿಸಿಕೊಂಡಿದೆ. ಕಳೆದ ವರ್ಷ ಜುಲೈ ವೇಳೆಗೆ, ಎರಡು ಸಾವಿರ ಡೆಂಘಿ ಪ್ರಕರಣಗಳು ನಗರದಲ್ಲಿ ಕಾಣಿಸಿಕೊಂಡಿದ್ದವು.

ಡೆಂಗ್ಯೂ ಹಾವಳಿ ಕಡಿಮೆ
ಡೆಂಗ್ಯೂ ಹಾವಳಿ ಕಡಿಮೆ

By

Published : Jul 24, 2020, 7:49 AM IST

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪ್ರತೀ ವರ್ಷ ಡೆಂಘಿ ಹಾವಳಿ ಹೆಚ್ಚಾಗುತ್ತಿತ್ತು.‌ ಆದರೆ, ಈ ಬಾರಿ ಕೊರೊನಾ ಆರ್ಭಟದ ನಡುವೆ ಡೆಂಘಿ ಜ್ವರ ಸಪ್ಪೆಯಾಗಿದೆ. ಹೌದು ಕಳೆದ ವರ್ಷ ಜುಲೈ ವೇಳೆಗೆ, ಎರಡು ಸಾವಿರ ಡೆಂಘಿ ಪ್ರಕರಣಗಳು ನಗರದಲ್ಲಿ ಕಾಣಿಸಿಕೊಂಡಿತ್ತು. ಆದ್ರೆ ಈ ಬಾರಿ ಜುಲೈ 22ರವರೆಗೆ 853 ಜನರಲ್ಲಿ ಡೆಂಘಿ ಪ್ರಕರಣಗಳು ವರದಿಯಾಗಿವೆ.

ಒಂದೆರಡು ಬಾರಿ ಮಳೆ ಬಂದು, ಬಿಸಿಲು ಬಂದ ಕೂಡಲೇ ನಿಂತ ನೀರಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಅಪಾಯಕಾರಿ ಮಟ್ಟದಲ್ಲಿ ಡೆಂಘಿ ಹರಡುತ್ತಿತ್ತು. ಆದರೆ ಜನ ಎಚ್ಚರಿಕೆಯಿಂದ ಇರುವ ಕಾರಣ ಡೆಂಘಿ ಪ್ರಕರಣ ಕಡಿಮೆಯಾಗಿರಬಹುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಕೊರೊನಾ ನಡುವೆ ನಿಧಾನಗತಿಯಲ್ಲಿ ಡೆಂಘಿ ಹೆಚ್ಚಳವಾಗುತ್ತಿದ್ದು, ಅದರ ನಿಯಂತ್ರಣದ ಕಡೆಗೂ ಗಮನಹರಿಸುವುದು ಅಗತ್ಯವಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಅಲ್ಲಲ್ಲಿ ನಿಂತಿರುವ ಮಳೆ ನೀರು

ಆದರೆ ಈಗಾಗಲೇ ನಗರದ ಹನ್ನೊಂದು ಸಾವಿರಕ್ಕೂ ಹೆಚ್ಚು ಕಂಟೇನ್ಮೆಂಟ್ ವಲಯಗಳಲ್ಲಿ ಬ್ಲೀಚಿಂಗ್ ಪೌಡರ್ ಸ್ಪ್ರೇಯನ್ನು ಸೋಂಕು ನಿವಾರಕ ದ್ರಾವಣವಾಗಿ ಸಿಂಪಡಿಸಲಾಗಿದೆ. ಆದ್ರೆ ಸೊಳ್ಳೆ ನಿಯಂತ್ರಣಕ್ಕೆ ಪವರ್ ಸ್ಪ್ರೇಯಿಂಗ್ ಅಥವಾ ಫಾಗಿಂಗ್ ಅಗತ್ಯವಾಗಿದೆ. ಫಾಗಿಂಗ್ ಹಾಗೂ ಪವರ್ ಸ್ಪ್ರೇಯಿಂದ ಜನರ ಆರೋಗ್ಯಕ್ಕೂ ಹಾನಿಯಾಗುವ ಸಾಧ್ಯತೆ ಇರುವುದರಿಂದ, ಡೆಂಘಿ ಪ್ರಮಾಣ ಹೆಚ್ಚಾದರೆ ಮಾತ್ರ ಸ್ಪ್ರೇ ಮಾಡಲಾಗುತ್ತದೆ. ಕಡಿಮೆ ಇರುವುದರಿಂದ ಸ್ಪ್ರೇಯಿಂಗ್ ಅಗತ್ಯವಿಲ್ಲವೆಂದು ಡಾ. ಸಂಧ್ಯಾ ತಿಳಿಸಿದ್ದಾರೆ

ಸಾಮಾನ್ಯವಾಗಿ ರಾಜಕಾಲುವೆಗಳ ಬಳಿ, ಸ್ಲಂಗಳಲ್ಲಿ ಫಾಗಿಂಗ್ ಅಥವಾ ಪವರ್ ಸ್ಪ್ರೇಯಿಂಗ್ ನಡೆಸಲಾಗುತ್ತದೆ. ಆದ್ರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಡೆಂಘಿ ಕಂಡುಬಾರದ ಕಾರಣ ಹಾಗೂ ಕೊರೊನಾ ತಡೆಗಟ್ಟುವಲ್ಲಿ ಅಧಿಕಾರಿ- ನೌಕರರು ನಿರತರಾಗಿರುವ ಕಾರಣ ಈ ಬಗ್ಗೆ ಹೆಚ್ಚು ತಲೆಕಡೆಸಿಕೊಂಡಿಲ್ಲ.

ಕೊರೊನಾ ನೆಗೆಟಿವ್ ಬಂದರೆ ಡೆಂಘಿ-ಮಲೇರಿಯಾ ಚೆಕಪ್:ಕೊರೊನಾ, ಡೆಂಘಿ ಹಾಗೂ ಮಲೇರಿಯಾ ಈ ಮೂರೂ ರೋಗಗಳ ಲಕ್ಷಣವೂ ಕೂಡಾ ಜ್ವರವೇ ಆಗಿರುವುದರಿಂದ, ಹೆಚ್ಚಿನವರು ಜ್ವರ-ಮೈಕೈ ನೋವು ಬಂದ ಕೂಡಲೇ ಚೆಕಪ್​ಗೆ ಹೋಗುತ್ತಿದ್ದಾರೆ. ಕೊರೊನಾ ನೆಗೆಟಿವ್ ಬಂದರೆ, ನಂತರ ಡೆಂಘಿ ಚೆಕಪ್ ಮಾಡಿಸುತ್ತಿದ್ದಾರೆ. ಆದ್ರೆ ಜನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವುದರಿಂದ ಡೆಂಗ್ಯೂಗೆ ತುತ್ತಾಗುತ್ತಿರುವುದೂ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ. ಆದರೆ ಸ್ಲಂ ಕಡೆಗಳಲ್ಲಿ, ಮ್ಯಾನ್ ಹೋಲ್, ಚರಂಡಿ ಬ್ಲಾಕ್ ಆಗಿ ರಸ್ತೆಯಲ್ಲಿ ನೀರು ನಿಲ್ಲುತ್ತಿವೆ. ಇದರಿಂದಲೂ ಡೆಂಘಿ ಹರಡುವ ಭೀತಿ ನಗರದಲ್ಲಿದೆ. ಆದರೆ ಪಾಲಿಕೆಯ ಪ್ರತೀ ಅಧಿಕಾರಿಗಳೂ ಕೊರೊನಾ ಮಹಾಮಾರಿ ತಡೆಗಟ್ಟಲು, ಸೋಂಕಿತರ ಪರೀಕ್ಷೆ, ಆಸ್ಪತ್ರೆ ವ್ಯವಸ್ಥೆ ಕಲ್ಪಿಸಿಕೊಡುವಲ್ಲಿ ನಿರತರಾಗಿರುವುದರಿಂದ ಡೆಂಘಿ , ಮಲೇರಿಯಾ ಚಿಕನ್ ಗುನ್ಯಾದ ಬಗ್ಗೆ ಗಮನವಹಿಸಿಲ್ಲ. ಕೇಂದ್ರ ಕಚೇರಿಯಲ್ಲಿ ಈ ಕುರಿತ ಅಂಕಿ- ಅಂಶಗಳೂ ಸದ್ಯಕ್ಕೆ ಲಭ್ಯವಿಲ್ಲ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಕೊರೊನಾ ಜೊತೆಗೆ ಡೆಂಘಿ ಕುರಿತೂ ಎಚ್ಚರಿಕೆ ಅಗತ್ಯವಾಗಿದೆ.

ABOUT THE AUTHOR

...view details