ಬೆಂಗಳೂರು : ಶಿವಮೊಗ್ಗದ ಅನುದಾನಿತ ಶಿಕ್ಷಣ ಸಂಸ್ಥೆಯಾದ ನ್ಯಾಷನಲ್ ಎಜುಕೇಷನ್ ಟ್ರಸ್ಟ್‌ನಲ್ಲಿ ಸೇವಕನಾಗಿ ಸೇವೆ ಸಲ್ಲಿಸುತ್ತಿದ್ದ ಸಿಬ್ಬಂದಿಯೊಬ್ಬರಿಗೆ ಪದೋನ್ನತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 3 ವರ್ಷ ವಿಳಂಬ ಮಾಡುವುದರ ಜೊತೆಗೆ ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಕಾಲೇಜು ಶಿಕ್ಷಣ ಇಲಾಖೆಯ ಕ್ರಮಕ್ಕೆ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೆ, ಕಾಲೇಜು ಶಿಕ್ಷಣ ಇಲಾಖೆ ಅನಗತ್ಯವಾಗಿ ಅರ್ಜಿ ಸಲ್ಲಿಸಿದೆ. ಇದಕ್ಕೆ ದೊಡ್ಡ ಮಟ್ಟದ ದಂಡ ವಿಧಿಸಬೇಕಾಗುತ್ತದೆ. ಅಧಿಕಾರಿಗಳು ನಿದ್ದೆ ಮಾಡುತ್ತಿದ್ದಾರೆ ಎಂದು ಸರ್ಕಾರದ ಪರ ವಕೀಲರಿಗೆ ತರಾಟೆ ತೆಗೆದುಕೊಂಡಿತು.
ನ್ಯಾಷನಲ್ ಎಜುಕೇಷನ್ ಟ್ರಸ್ಟ್‌ನಲ್ಲಿ ಸೇವಕನಾಗಿದ್ದ ಬೆಂಗಳೂರಿನ ಜಿ.ಬೈರಪ್ಪ ಅವರಿಗೆ ದ್ವಿತಿಯ ದರ್ಜೆ ಸಹಾಯಕ ಹುದ್ದೆಗೆ ಪದೋನ್ನತಿ ನೀಡಿ ಕಡತವನ್ನು ಕಾಲೇಜು ಶಿಕ್ಷಣ ಇಲಾಖೆಗೆ ರವಾನಿಸಲಾಗಿತ್ತು. ಇದಕ್ಕೆ ಅನುಮತಿ ನೀಡಲು ಕಾಲೇಜು ಶಿಕ್ಷಣ ಇಲಾಖೆ ಮೂರು ವರ್ಷ ವಿಳಂಬ ದೋರಣೆ ಅನುಸರಿಸಿತ್ತು. ಜತೆಗೆ, ಪದೋನ್ನತಿ ನೀಡಲಾಗದು ಎಂದು ದೃಢೀಕರಣ ನೀಡಿತ್ತು. ಇದನ್ನು ಪ್ರಶ್ನಿಸಿ ಬೈರಪ್ಪ ಸಲ್ಲಿಸಿದ್ದ ಅರ್ಜಿಯನ್ನು ಏಕ ಸದಸ್ಯ ಪೀಠ ಮಾನ್ಯ ಮಾಡಿತ್ತು. ಜತೆಗೆ, ದೃಢೀಕರಣ ಪತ್ರವನ್ನು ವಜಾ ಮಾಡಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕಾಲೇಜು ಶಿಕ್ಷಣ ಇಲಾಖೆ ಮೇಲ್ಮನವಿ ಸಲ್ಲಿಸಿತ್ತು.ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ಪೀಠವು ಏಕ ಸದಸ್ಯ ಪೀಠದ ಆದೇಶವನ್ನು ಮಾನ್ಯ ಮಾಡಿದೆ.
ಅಲ್ಲದೆ, ಕಾಲೇಜು ಶಿಕ್ಷಣ ಇಲಾಖೆ ಸಕಾರಣದಿಂದ ನಿರ್ದಿಷ್ಟ ಕಾಲದಲ್ಲಿ ಕ್ರಮ ಕೈಗೊಂಡಿದ್ದರೆ ಮೇಲ್ಮನವಿ ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಬೈರಪ್ಪ ನ್ಯಾಯಾಲಯದ ಮೆಟ್ಟಿಲೇರುವ ಅವಶ್ಯತೆ ಇರುತ್ತಿರಲಿಲ್ಲ. ಸರ್ಕಾರದ ಪ್ರಾಧಿಕಾರಗಳ ಇಂತಹ ನಡೆಯಿಂದ ಪ್ರತಿವಾದಿ ಅತ್ತಿಂದಿತ್ತ ಸುತ್ತುವಂತಾಗಿದೆ. ಅಂತಿಮವಾಗಿ ತಮ್ಮ ಅಮೂಲ್ಯ ಸಮಯ ಹಾಳು ಮಾಡಿಕೊಂಡು, ಹಣ ಖರ್ಚು ಮಾಡಿಕೊಂಡು ನ್ಯಾಯಾಲಯದ ಮೆಟ್ಟಿಲೇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿತು.