ಬೆಂಗಳೂರು: ದೇಶದಲ್ಲಿ ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಜಕೀಯ ನಾಯಕರು ಭರ್ಜರಿ ಮತಬೇಟೆಗೆ ಮುಂದಾಗಿದ್ದಾರೆ. ಆದ್ರೆ ಈ ಬಾರಿ ಯುವ ಸಮುದಾಯ ಕೂಡಾ ಮತದಾನದ ದಿನ ಟ್ರಿಪ್, ಮೋಜು ಮಸ್ತಿ ಅನ್ನದೇ ಕಾತುರರಾಗಿದ್ದಾರೆ. ಮೊದಲ ಬಾರಿ ವೋಟು ಹಾಕಲು ತುದಿಗಾಲಲ್ಲಿ ನಿಂತಿದ್ದಾರೆ.
ದೇಶದ 17 ನೇ ಲೋಕಸಭಾ ಚುನಾವಣೆ ಎಲ್ಲೆಡೆ ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೇ ರಾಜ್ಯದಲ್ಲಿಯೂ ರಾಜಕೀಯ ಪಕ್ಷಗಳು ಚುನಾವಣಾ ಸಿದ್ಧತೆ ಶುರು ಮಾಡಿಕೊಂಡಿವೆ. ಈ ಬಾರಿಯ ಚುನಾವಣೆಯಲ್ಲಿ ಮೊದಲ ಬಾರಿಗೆ 1.5 ಕೋಟಿಯಷ್ಟು ಯುವ ಮತದಾರರು ತಮ್ಮ ಹಕ್ಕು ಚಲಾವಣೆ ಮಾಡುತ್ತಿದ್ದಾರೆ. ಈ ಹಿನ್ನಲೆ ಯುವ ಮತದಾರರು ಲೋಕಸಭಾ ಚುನಾವಣೆಯ ಟ್ರಂಪ್ ಕಾರ್ಡ್. ಈ ಕಾರಣಕ್ಕಾಗೇ ಇಂದು ನಗರದ ಆನಂದ್ ರಾವ್ ಸರ್ಕಲ್ ನಲ್ಲಿರುವ ಎಸ್ಜೆಆರ್ಸಿ ಕಾಲೇಜ್ನಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮೊದಲ ಮತದಾರರ ಜೊತೆ ಸಂವಾದ ನಡೆಸಿದ್ರು.
ಯುವ ಮತದಾರರೊಂದಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಸಂವಾದ ಥಿಂಕರ್ಸ್ ಪೌರಂ ವತಿಯಿಂದ ನಡೆದ ಈ ಸಂವಾದ ಕಾರ್ಯಕ್ರಮದಲ್ಲಿ ಕಾಲೇಜ್ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗಿಯಾಗಿದ್ರು. ಸಂವಾದದಲ್ಲಿ ಚುನಾವಣೆಯ ಮಹತ್ವ ದೇಶದ ರಕ್ಷಣಾ ವಿಚಾರ ಹಾಗೆ ಯುವ ಸಮುದಾಯದ ಪ್ರಶ್ನೆಗೆ ಉತ್ತರ ನೀಡಿದ್ರು. ಹಾಗೆ ಚುನಾವಣೆ ಮುಂಚಿನ ದಿನ, ಮರು ದಿವಸ ಸರ್ಕಾರಿ ರಜೆ ಇದೆ. ಆದರೆ ಚುನಾವಣೆ ವೇಳೆ ಮೋಜು ಮಸ್ತಿ ಅನ್ನದೆ ಮತದಾನ ಮಾಡಿ ಎಂದು ಕಿವಿಮಾತು ಹೇಳಿದ್ರು. ಇನ್ನು ನಿರ್ಮಲಾ ಸೀತಾರಾಮನ್ರ ಒಂದೊಂದು ಸಂದೇಶಕ್ಕೂ ಯುವ ಸಮುದಾಯ ಮತ್ತೊಮ್ಮೆ ಮೋದಿ ಮೋದಿ ಎಂದು ಜೈಕಾರ ಕೂಗಿದ್ರು.
ಅಂಬೇಡ್ಕರ್ ನೆನೆಯದ ಸೀತಾರಾಮನ್:
ನಿರ್ಮಲಾ ಸೀತಾರಾಮನ್ ಕಾರ್ಯಕ್ರಮದಲ್ಲಿ ಸುದೀರ್ಘ 25 ನಿಮಿಷಗಳವರೆಗೆ ಭಾಷಣ ಮಾಡಿದ್ರು, ಆದರೆ ಇಂದು ಸಂವಿಧಾನ ಶಿಲ್ಫಿ ಅಂಬೇಡ್ಕರ್ ಜಯಂತ್ಯುತ್ಸವ ಇದ್ದರೂ ಕೂಡ ಅವರ ಬಗ್ಗೆ ಒಂದೂ ಮಾತನಾಡಲಿಲ್ಲ. ಕೇವಲ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ತಮ್ಮ ರಾಜಕೀಯ ಭಾಷಣ ಮುಂದುವರೆಸಿದರು ಎಂದು ತಿಳಿದುಬಂದಿದೆ.