ಬೆಂಗಳೂರು :ನಗರದ ಬಿಡಿಎ ಬಡಾವಣೆಗಳಲ್ಲಿ ಇನ್ಮುಂದೆ ಉದ್ಯಾನವನಕ್ಕೆ ಬದಲಾಗಿ ಕಿರು ಅರಣ್ಯ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಹಸಿರೀಕರಣಕ್ಕೆ ಒತ್ತು ನೀಡಲು ರಾಜ್ಯ ಸರ್ಕಾರದ ವಿಷನ್ 2022ಕ್ಕೆ ಪೂರಕವಾಗಿ ಇನ್ನು ಮುಂದೆ ಬಿಡಿಎ ತನ್ನ ಸ್ವಂತ ಬಡಾವಣೆಗಳು ಮತ್ತು ಬಿಡಿಎ ಅನುಮೋದಿತ ಬಡಾವಣೆಗಳಲ್ಲಿ ಕಿರು ಅರಣ್ಯ ಬೆಳೆಸುವುದನ್ನು ಕಡ್ಡಾಯಗೊಳಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ನೇತೃತ್ವದ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಹಲವು ಅಕ್ರಮ ಪ್ರಕರಣಗಳ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ಒಪ್ಪಿಸುವುದು, ಬಿಡಿಎ ಸ್ವಾಧೀನಪಡಿಸಿಕೊಂಡಿರುವ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಸ್ವಲ್ಪ ರಿಲೀಫ್ ನೀಡುವುದು.
ಈ ಹಿಂದೆ ಸರ್ಕಾರ ನಿರ್ಧಾರ ಮಾಡಿರುವಂತೆ 12 ವರ್ಷಗಳ ಹಿಂದಿಗಿಂತಲೂ ಮುನ್ನ ನಿರ್ಮಾಣ ಮಾಡಿಕೊಂಡಿರುವ ಮನೆಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ ಎಂಬ ವಿಚಾರ ಸೇರಿದಂತೆ ಇನ್ನಿತರೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಸಭೆಯ ನಂತರ ಮಾತನಾಡಿದ ಬಿಡಿಎ ಅಧ್ಯಕ್ಷ, ರಾಜ್ಯ ಸರ್ಕಾರ ಹಸಿರು ಪರಿಸರಕ್ಕೆ ಒತ್ತು ನೀಡಿ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಯೋಜನೆಯೊಂದನ್ನು ವಿಷನ್ 2022ರಲ್ಲಿ ಪ್ರಸ್ತಾಪ ಮಾಡಿದೆ. ಇದಕ್ಕೆ ಮೊದಲ ಹೆಜ್ಜೆಯಾಗಿ ಬಿಡಿಎ ಇನ್ನು ಮುಂದೆ ಅನುಮೋದನೆ ನೀಡುವ ಮತ್ತು ತನ್ನದೇ ಆದ ಬಡಾವಣೆಗಳಲ್ಲಿ ಕಿರು ಅರಣ್ಯ ಬೆಳೆಸುವುದನ್ನು ಕಡ್ಡಾಯಗೊಳಿಸಲಿದೆ ಎಂದರು.
ಕಿರು ಅರಣ್ಯ ಯೋಜನೆ ಹೇಗಿರಲಿದೆ?:ಈವರೆಗೆ ಬಡಾವಣೆಗಳಲ್ಲಿ ಉದ್ಯಾನಗಳನ್ನು ನಿರ್ಮಿಸಿ ಅದರ ನಿರ್ವಹಣೆಗೆಂದು ಪ್ರತಿವರ್ಷ ಪ್ರತ್ಯೇಕ ಸಿಬ್ಬಂದಿ ಮತ್ತು ಹಣವನ್ನು ವೆಚ್ಚ ಮಾಡಬೇಕಿತ್ತು. ಉದ್ಯಾನಗಳಿಗೆ ಲಾನ್, ಅಲಂಕಾರಿಕ ಗಿಡಗಳಿಗೆ ಹೆಚ್ಚಿನ ಹಣ ಭರಿಸುವುದು, ಪ್ರತಿದಿನ ನೀರು, ಗೊಬ್ಬರ ಆರೈಕೆ ಮಾಡಲೆಂದು ಲಕ್ಷಾಂತರ ರೂಪಾಯಿ ಖರ್ಚಾಗುತ್ತಿತ್ತು. ಇದನ್ನು ತಪ್ಪಿಸುವುದು ಮತ್ತು ಸಾರ್ವಜನಿಕರಲ್ಲಿ ಪರಿಸರ ಕಾಳಜಿ ಮೂಡಿಸುವ ಸಲುವಾಗಿ ಕಿರು ಅರಣ್ಯ ಅಭಿವೃದ್ಧಿಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದರು.