ಬೆಂಗಳೂರು: ಮುಂದಿನ ಬಜೆಟ್ ನಲ್ಲಿ ಕೇಂದ್ರ ಮಾದರಿಯಂತೆ ರಾಜ್ಯದ 1,745 ಯೋಜನೆಗಳನ್ನು ಸಮೀಕರಿಸಲು ರಾಜ್ಯ ಯೋಜನಾ ಮಂಡಳಿ ಶಿಫಾರಸು ಮಾಡಿದೆ ಎಂದು ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ತಿಳಿಸಿದರು.
ಸಿಎಂ ನೇತೃತ್ವದಲ್ಲಿ ರಾಜ್ಯ ಯೋಜನಾ ಮಂಡಳಿಯ ಪ್ರಥಮ ಸಭೆ ನಡೆಸಿ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಜತೆಗೂಡಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 2020-21ನೇ ಸಾಲಿನ ಬಜೆಟ್ ನಲ್ಲಿ 1863 ಯೋಜನೆಗಳನ್ನು ಘೋಷಿಸಲಾಗಿದೆ. ಇದರಲ್ಲಿ ಒಂದು ಕೋಟಿಗೂ ಹೆಚ್ಚಿನ ಅನುದಾನಿತ 368 ಯೋಜನೆಗಳಿವೆ. 1-10 ಕೋಟಿ ರೂ. ಅನುದಾನಿತ 616 ಯೋಜನೆಗಳು, 10-100 ಕೋಟಿ ರೂ. ಅನುದಾನಿತ 612 ಯೋಜನೆಗಳು ಮತ್ತು 100 ಕೋಟಿ ರೂ.ಮೇಲ್ಪಟ್ಟು ಅನುದಾನಿತ 267 ಯೋಜನೆಗಳಿವೆ ಎಂದು ವಿವರಿಸಿದರು.
ಒಂದು ಕೋಟಿ ರೂ. ಗಿಂತ ಕಡಿಮೆ ಇರುವ ಎಲ್ಲಾ ಯೋಜನೆಗಳನ್ನು ದೊಡ್ಡ ಯೋಜನೆಗಳೊಂದಿಗೆ ವಿಲೀನಗೊಳಿಸಲು ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಒಂದೇ ರೀತಿಯ ಉದ್ದೇಶ ಇದ್ದರೆ ರಾಜ್ಯದ ಯೋಜನೆಗಳಿಗೆ ಸಮೀಕರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
17 ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸಲು ಕಾರ್ಯ ಯೋಜನೆ:
2030 ರೊಳಗೆ ಎಲ್ಲಾ 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಸೂಕ್ತ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಅವರು, 17 ಸುಸ್ಥಿರ ಅಭಿವೃದ್ಧಿಯಲ್ಲಿ ಕರ್ನಾಟಕ 100 ಕ್ಕೆ 66 ಅಂಕಗಳೊಂದಿಗೆ ದೇಶದಲ್ಲಿ 6 ನೇ ಸ್ಥಾನದಲ್ಲಿದೆ. ಬಡತನ ಮುಕ್ತ, ಹಸಿವು ಮುಕ್ತ, ಲಿಂಗ ಸಮಾನತೆ, ಕೈಗಾರಿಕೆ, ನಾವೀನ್ಯತೆ ಮತ್ತು ಮೂಲಸೌಕರ್ಯ ಹಾಗೂ ಸುಸ್ಥಿರ ನಗರಗಳು ಮತ್ತು ಸಮುದಾಯಗಳು- ಈ ಆರು ಗುರಿಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಬೇಕಿದೆ. ಈ ಗುರಿಗಳ ಪೈಕಿ ವಿಷಯವಾರು ತಜ್ಞರ ಅಧ್ಯಯನ ಮತ್ತು ಸಲಹೆಗಳನ್ನು ಆಧರಿಸಿ ವರದಿ ನೀಡಲು ರಾಜ್ಯ ಯೋಜನಾ ಮಂಡಳಿ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಸಿಎಂ ಡ್ಯಾಶ್ ಬೋರ್ಡ್ ಅಭಿವೃದ್ಧಿಪಡಿಸಲು ನಿರ್ಣಯ:
ಇದೇ ವೇಳೆ ಮಾತನಾಡಿದ ಮಂಡಳಿ ಉಪಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ, ಕರ್ನಾಟಕ ರಾಜ್ಯ ಯೋಜನಾ ಮಂಡಳಿಯನ್ನು“ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನೆ ಆಯೋಗ” ಎಂದು ಮರುನಾಮಕರಣ ಮಾಡುವುದರೊಂದಿಗೆ ಬಲವರ್ಧನೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. 5 ತಾಂತ್ರಿಕ ವಿಭಾಗಗಳಿಗೆ ಅನುಮೋದನೆ ಹಾಗೂ ಯೋಜನಾ ಮಂಡಳಿಯಲ್ಲಿ 2 ರಿಸರ್ಚ್ ಆಫೀಸರ್ ಹುದ್ದೆಗಳು ಇದ್ದು, ಹೆಚ್ಚುವರಿಯಾಗಿ 3 ರಿಸರ್ಚ್ ಆಫೀಸರ್ ಹುದ್ದೆಗಳ ಮಂಜೂರಾತಿಗೆ ತೀರ್ಮಾನಿಸಲಾಗಿದೆ ಎಂದರು.
ಕರ್ನಾಟಕದಲ್ಲಿ ಸಿಎಂ ಡ್ಯಾಶ್ ಬೋರ್ಡ್ ಅಭಿವೃದ್ಧಿಪಡಿಸಲು ನಿರ್ಣಯಿಸಲಾಗಿದೆ. ಈ ಡ್ಯಾಶ್ ಬೋರ್ಡ್ ನಿಂದ ಏಕಕಾಲದಲ್ಲಿ ಆರ್ಥಿಕ ವ್ಯವಸ್ಥೆಯ ಮೇಲ್ವಿಚಾರಣೆ ಹಾಗೂ ನಿರ್ಧರಿತ ಸಮಯದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಲಿದೆ ಎಂದರು.
ಪ್ರಾದೇಶಿಕ ಸಮತೋಲನೆಗೆ ರಾಜ್ಯದ ಸರಾಸರಿಗಿಂತ ಕಡಿಮೆ ಇರುವ ತಾಲ್ಲೂಕುಗಳಿಗೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಲಾಗಿದೆ. ಬಡವರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಏಕಗವಾಕ್ಷಿ ವ್ಯವಸ್ಥೆ ಕಲ್ಪಿಸಲು ಶಿಫಾರಸು ಮಾಡಲಾಗಿದೆ. ಇದರ ಜೊತೆಗೆ ಗ್ರಾಮಮಟ್ಟದ “ಗ್ರಾಮ ಅಭಿವೃದ್ಧಿ ಯೋಜನೆ” ತಯಾರಿಸಲು ನಿರ್ಣಯಿಸಲಾಗಿದೆ. ಇನ್ನು ಆದಿವಾಸಿ ಬುಡಕಟ್ಟು ಜನಾಂಗದ ಅಭಿವೃದ್ಧಿ ಯೋಜನೆಗೆ 600 ಕೋಟಿ ರೂ. ಅನುದಾನ ಒದಗಿಸಲು ಸಿಎಂಗೆ ಮನವಿ ಮಾಡಿದ್ದೇವೆ ಎಂದರು.
ಸಭೆಯಲ್ಲಿ ಕೈಗೊಂಡ ನಿರ್ಣಯಗಳೇನು?:
- 2021-22ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಯೋಜನೆಗಳ ಸಮೀಕರಣ ಮಾಡುವುದು.
- ಕರಾವಳಿ ಜಿಲ್ಲೆಗಳ ಅಭಿವೃದ್ಧಿಗಾಗಿ ಸಮಗ್ರ ಯೋಜನೆ ರೂಪಿಸಿʼ ಮತ್ಸ್ಯಸಂಪದʼ ಯೋಜನೆಯಡಿ ಆತ್ಮನಿರ್ಭರ್ ಯೋಜನೆಯ ಅನುದಾನ ಪಡೆಯುವುದು.
- ಬೆಂಗಳೂರಿನಲ್ಲಿ ಕರ್ನಾಟಕ ವಿಜ್ಞಾನ ನಗರ ಪಿಪಿಪಿ ಅಡಿಯಲ್ಲಿ ಸ್ಥಾಪಿಸುವುದು.
- ಆಯವ್ಯಯದಲ್ಲಿ ಯೋಜನೆಗಳಿಗೆ ನಿಗದಿಪಡಿಸಿದ ಒಟ್ಟು ಅನುದಾನಕ್ಕೆ ಶೇ 1ರಷ್ಟು ಕರ್ನಾಟಕ ಇನ್ನೋವೇಷನ್ ಕಾರ್ಯಕ್ರಮಗಳಿಗೆ ಒದಗಿಸುವುದು.
- 100ಕೋಟಿ ರೂ. ಹಾಗೂ ಅಧಿಕ ಅನುದಾನ ಪಡೆದ ಎಲ್ಲಾ ಯೋಜನೆಗಳನ್ನುಕಡ್ಡಾಯವಾಗಿ ಮೌಲ್ಯಮಾಪನಕ್ಕೆ ಒಳಪಡಿಸುವುದು.
- ಪಿಪಿಪಿ ಮಾದರಿಯಲ್ಲಿ ರಾಜ್ಯಕ್ಕೆ ಒಂದು ಕೌಶಲ್ಯ ವಿಶ್ವವಿದ್ಯಾಲಯವನ್ನುಸ್ಥಾಪಿಸುವುದು.
- ಪ್ರತಿಯೊಂದು ಗ್ರಾಮ ಪಂಚಾಯತ್ ನಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ ಒಂದು ಸ್ಮಾರ್ಟ್ ಶಾಲೆಯನ್ನು ಸ್ಥಾಪಿಸಲಾಗುವುದು.
- ಸುಸ್ಥಿರ ಅಭಿವೃದ್ಧಿ ಗುರಿಗಳು ಸಾಧಿಸಲು ಹೊಸ ನೀತಿಗಳನ್ನು ರೂಪಿಸುವುದು.
- ಕರ್ನಾಟಕ ರಾಜ್ಯ ಪೋಷಣೆ ನೀತಿ ಜಾನುವಾರು ಅಭಿವೃದ್ಧಿಗಾಗಿ ಸಮಗ್ರ ನೀತಿ ಕರ್ನಾಟಕ ಮೇವು ಭದ್ರತೆ ನೀತಿ, ಕರ್ನಾಟಕ ಸಮಗ್ರ ಕುರಿ ಮತ್ತುಮೇಕೆ ಬೆಳವಣಿಗೆ ನೀತಿ ಹಾಗೂ ನಗರೀಕರಣ ನೀತಿ ರೂಪಿಸುವುದು.
- ನೀರಾವರಿ ಆಯೋಗ ಸ್ಥಾಪಿಸುವುದು.