ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಸಾಮಾಜಿಕ ನ್ಯಾಯಕ್ಕೆ ದೊಡ್ಡ ಪೆಟ್ಟಾಗುವುದರಿಂದ ಎನ್‌ಇಪಿ ಜಾರಿಯ ನಿರ್ಧಾರವನ್ನು ಕೈಬಿಡಬೇಕು ಎಂದು ಕಾಂಗ್ರೆಸ್ ಹಿರಿಯ ಸದಸ್ಯ ಎಚ್.ಕೆ.ಪಾಟೀಲ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಣವನ್ನು ಖಾಸಗೀಕರಣಗೊಳಿಸಲು ಎನ್‌ಇಪಿ ಪೂರಕವಾಗಿದೆ. ಬೇರೆ ಯಾವುದೇ ರಾಜ್ಯ ಎನ್‌ಇಪಿ ಜಾರಿಗೆ ಮುಂದಾಗಿಲ್ಲ. ಕರ್ನಾಟಕ ಮಾತ್ರ ಮುಂದಾಗಿದೆ. ಆದರೆ, ಇದು ಸಾಮಾಜಿಕ ನ್ಯಾಯಕ್ಕೆ ದೊಡ್ಡ ಪೆಟ್ಟು ಬೀಳುವುದರಿಂದ ಇದನ್ನು ಹಿಂಪಡೆಯ ಬೇಕು ಎಂದು ಆಗ್ರಹಿಸಿದರು.
ಉದ್ಯೋಗ ವಿಚಾರದಲ್ಲಿ ಹೊರಗುತ್ತಿಗೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದರಿಂದ ಮೀಸಲಾತಿ ಮತ್ತು ಮೆರಿಟ್ ಆಧಾರದ ಮೇಲಿನ ನೇಮಕಾತಿಗೆ ಅಗೌರವ ಸೂಚಿಸಿದಂತಾಗಿದೆ. ಹೊರಗುತ್ತಿಗೆ ನೇಮಕಾತಿಯು ಸರ್ಕಾರದ ವ್ಯವಸ್ಥೆಯನ್ನು ಅಣಕಿಸುವಂತಿದೆ.