ಕರ್ನಾಟಕ

karnataka

ETV Bharat / state

ಕರ್ತವ್ಯ ಲೋಪದ ಹಿನ್ನೆಲೆ ಇಬ್ಬರು ವಿಚಾರಣಾಧೀನ ಕೈದಿಗಳ ಸಾವು: ಅಧಿಕಾರಿಗೆ ವಿಧಿಸಿದ್ದ ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್

ಕರ್ತವ್ಯ ಲೋಪದ ಹಿನ್ನೆಲೆ ಇಬ್ಬರು ವಿಚಾರಣಾಧೀನ ಕೈದಿಗಳ ಸಾವು- ಕಾರಾಗೃಹದ ವಾರ್ಡರ್​ಗೆ ವಿಧಿಸಿದ್ದ ಶಿಕ್ಷೆಯನ್ನು ಎತ್ತಿಹಿಡಿದ ಹೈಕೋರ್ಟ್.

High Court
ಹೈಕೋರ್ಟ್

By

Published : Mar 22, 2023, 8:12 PM IST

ಬೆಂಗಳೂರು:ಕರ್ತವ್ಯ ಲೋಪದಿಂದ ತನ್ನ ಅಧೀನದಲ್ಲಿದ್ದ ಕಾರಾಗೃಹಕ್ಕೆ ಕೈದಿಗಳು ಮಾರಕಾಸ್ತ್ರಗಳನ್ನು ತಂದು, ಇಬ್ಬರು ಸಹ ಕೈದಿಗಳ ಕೊಲೆಗೆ ಕಾರಣರಾಗಿದ್ದ ಕಾರಾಗೃಹದ ವಾರ್ಡರ್​ಗೆ ಒಂದು ವರ್ಷದ ವೇತನ ಹೆಚ್ಚಳವನ್ನು(ಇಂನ್ಕ್ರಿಮೆಂಟ್) ಕಡಿತಗೊಳಿಸಿ ವಿಧಿಸಿದ್ದ ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಕರ್ತವ್ಯ ಲೋಪದ ಅಡಿಯಲ್ಲಿ ಇಂಕ್ರಿಮೆಂಟ್ ಕಡಿತಗೊಳಿಸಿ ಆದೇಶಿಸಿದ್ದ ಸರ್ಕಾರದ ಕ್ರಮ ಎತ್ತಿ ಹಿಡಿದಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ ಆದೇಶ ಪ್ರಶ್ನಿಸಿ, ಕೋಲಾರ ಜಿಲ್ಲಾ ಕಾರಾಗೃಹದ ಮುಖ್ಯ ವಾರ್ಡರ್ ಆಗಿರುವ ಜಿ.ಬಿ.ಮುಲ್ಕಿ ಪಾಟೀಲ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ನರೇಂದರ್ ಮತ್ತು ನ್ಯಾಯಮೂರ್ತಿ ವೆಂಕಟೇಶ್ ನಾಯಕ್ ಅವರಿಂದ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿದೆ.

ಅಲ್ಲದೆ, ತನಿಖಾಧಿಕಾರಿಗಳು ಮತ್ತು ನ್ಯಾಯಾಧೀಕರಣ ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಆದೇಶ ನೀಡಿದೆ. ಈ ಆದೇಶದಲ್ಲಿ ಯಾವುದೇ ಉಲ್ಲಂಘನೆಯಾಗಿರುವ ಅಂಶ ಕಾಣಿಸುತ್ತಿಲ್ಲ. ಹೀಗಾಗಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿ, ಅರ್ಜಿಯನ್ನು ವಜಾ ಮಾಡಿದೆ.

ಪ್ರಕರಣದ ಹಿನ್ನೆಲೆ ಏನು?:ಅರ್ಜಿದಾರ ಪಾಟೀಲ್ ಅವರು ಬೆಂಗಳೂರು ಕೇಂದ್ರ ಕಾರಾಗೃಹದ ವಾರ್ಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆ ಸಂದರ್ಭದಲ್ಲಿ ಅವರ ನಿರ್ಲಕ್ಷ್ಯ ಮತ್ತು ಸರಿಯಾಗಿ ನಿಗಾ ವಹಿಸದ ಹಿನ್ನೆಲೆಯಲ್ಲಿ ಜೈಲಿನಲ್ಲಿ ಕೈದಿಗಳು ಮೊಬೈಲ್ ಫೋನ್ ಬಳಸುತ್ತಿದ್ದರು. ಜೊತೆಗೆ, ಕೈದಿಗಳ ಸಹಕಾರದಿಂದ ಅವರ ಆತ್ಮೀಯರು ಹೊರ ಭಾಗದಿಂದ ಜೈಲಿನಲ್ಲಿ ಮಾರಕಾಸ್ತ್ರಗಳನ್ನು ಎಸೆದಿದ್ದರು. ಇವುಗಳಿಂದ ಆರೋಪಿ ಕೈದಿಗಳು ಅವರ ಪರಸ್ಪರ ದ್ವೇಷ ಹೊಂದಿದ್ದ ಇಬ್ಬರು ಸಹ ಕೈದಿಗಳನ್ನು ಕೊಲೆ ಮಾಡಿದ್ದರು.

ಈ ಸಂಬಂಧ ವಿಚಾರಣೆ ನಡೆಸಿದ್ದ ಇಲಾಖೆ ಅಧಿಕಾರಿಗಳು, ಕೈದಿಗಳು ಮೊಬೈಲ್ ಫೋನ್ ಮತ್ತು ಮಾರಕಾಸ್ತ್ರಗಳನ್ನು ಹೊಂದಿದ್ದು, ಅರ್ಜಿದಾರರ ನಿರ್ಲಕ್ಷ್ಯವೇ ಕಾರಣ ಎಂದು ವರದಿ ನೀಡಿದ್ದರು. ಈ ವರದಿ ಆಧಾರದಲ್ಲಿ ಸರ್ಕಾರ ಅರ್ಜಿದಾರರಿಗೆ ಒಂದು ವರ್ಷದ ಇಂಕ್ರಿಂಮೆಟ್ ಕಡಿತಗೊಳಿಸಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಅರ್ಜಿದಾರರು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಪ್ರಶ್ನೆ ಮಾಡಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಕರಣ ತನಿಖಾಧಿಕಾರಿ ಆದೇಶವನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದ ಹೈಕೋರ್ಟ್:ಹೊಸಪೇಟೆ-ವಾಸ್ಕೊ ಹಾಗೂ ಲೋಂಡ-ಮಿರ್ಜಾ ರೈಲ್ವೆ ಮಾರ್ಗವಿರುವ ದಟ್ಟ ಅರಣ್ಯ ಪ್ರದೇಶಗಳಲ್ಲಿ ವನ್ಯ ಜೀವಿಗಳಿಗೆ ತೊಂದರೆಯಾಗುವುದನ್ನು ತಡೆಯಲು ರೈಲುಗಳ ವೇಗ ಕಡಿಮೆ ಮಾಡುವಂತೆ ಸೂಚನೆ ನೀಡಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯ ಸಂಬಂಧ ಹೈಕೋರ್ಟ್ ಆಕ್ಷೇಪಣೆ ಸಲ್ಲಿಸುವಂತೆ ಅರಣ್ಯ ಇಲಾಖೆಗೆ ನಿರ್ದೇಶನ ನೀಡಿತ್ತು.

ಈ ಸಂಬಂಧ ಗಿರಿಧರ ಕುಲಕರ್ಣಿ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ ಎಸ್.ಕಿಣಗಿ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿತ್ತು. ಅಲ್ಲದೆ, ಬೆಳಗಾವಿ, ಹಳಿಯಾಳ ಮತ್ತು ಧಾರವಾಡ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರು ಪ್ರಕರಣ ಸಂಬಂಧ ಮುಂದಿನ ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿತ್ತು.

ವನ್ಯಜೀವಿಗಳನ್ನು ರಕ್ಷಿಸಲು ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಇದು ಕೇವಲ ಅಸ್ಸೋಂ, ಕರ್ನಾಟಕ ಮಾತ್ರವಲ್ಲದೇ ಇಡೀ ದೇಶಕ್ಕೆ ಅನ್ವಯವಾಗಲಿದೆ. ಅಲ್ಲದೆ, ಅರಣ್ಯದ ಮೂಲಕ ಸಂಚರಿಸುವ ರೈಲುಗಳ ವೇಗದ ಮಿತಿ ಕಡಿತಗೊಳಿಸುವಂತೆ ಸುಪ್ರೀಂಕೋರ್ಟ್ ರೈಲ್ವೆ ಇಲಾಖೆಗೆ ನಿರ್ದೇಶನ ನೀಡಿದೆ. ಈ ಆದೇಶವನ್ನು ಅನುಸರಿಸದಿದ್ದಲ್ಲಿ ತಪ್ಪಿತಸ್ಥ ಲೋಕೋ ಪೈಲೆಟ್‌ಗಳು ಮತ್ತು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು.

ಇದನ್ನೂ ಓದಿ:ಕೈ ಹಿಡಿದ ಮಾಜಿ ಸಚಿವ ಬಾಬುರಾವ್ ಚಿಂಚನಸೂರು; ಮನೆಯಲ್ಲೇ ಬರಮಾಡಿಕೊಂಡ ಡಿಕೆಶಿ

ABOUT THE AUTHOR

...view details