ಬೆಂಗಳೂರು:ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ಜಿ.ವಿ.ಸಿದ್ದಾರ್ಥ್ ನಿಧನಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀವ್ರ ಸಂತಾಪ ಸೂಚಿಸಿದ್ದಾರೆ.
ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಸಿದ್ದಾರ್ಥ್ ಮೃತದೇಹ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯಂಮತ್ರಿ ಬಿ.ಎಸ್.ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ. ಧವಳಗಿರಿ ನಿವಾಸದಲ್ಲಿ ಮಾತನಾಡಿದ ಅವರು, ಮೀನುಗಾರರ ಪರಿಶ್ರಮದಿಂದ ಸಿದ್ದಾರ್ಥ ಅವರ ಮೃತದೇಹ ಸಿಕ್ಕಿದೆ. ಎಸ್.ಎಂ.ಕೃಷ್ಣ ಅವರ ಕುಟುಂಬದವರಿಗೆ ಸಾಂತ್ವನ ಹೇಳೋದಕ್ಕೆ ಶಬ್ದ ಸಿಗುತ್ತಿಲ್ಲ. ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವುದು ನನ್ನ ಕರ್ತವ್ಯ ಎಂದರು.
ಅಲ್ಲದೇ ಆಗರ್ಭ ಶ್ರೀಮಂತ ಸಿದ್ದಾರ್ಥ್ ಆತ್ಮಹತ್ಯೆ ಮಾಡಿಕೊಂಡಿರೋದು ದುರ್ದೈವ, ಗ್ರಹಚಾರ. ಕಾಫಿ ಡೇ ಇಡೀ ಪ್ರಪಂಚದಲ್ಲೇ ಪರಿಚಯವಾಗಿತ್ತು. ಕಾಫಿ ಡೇ ಮಾರಾಟ ಮಾಡಿ ಸಾಲ ತೀರಿಸುವ ಪ್ರಯತ್ನ ಮಾಡಿದ್ದರು. ಮೊನ್ನೆ ತಾನೆ 3,500 ಕೋಟಿಯಷ್ಟು ಶೇರು ಮಾರಾಟ ಮಾಡಿ ಸಾಲ ತೀರಿಸಿದ್ದರು. ಸಾಲಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದರು. ಆದ್ರೆ ದುಡುಕಿ ಆತ್ಮಹತ್ಯೆ ಮಾಡಿಕೊಂಡ್ರು. ಅದೇ ದುರ್ದೈವ. ಆ ಸಂದರ್ಭದಲ್ಲಿ ಅವರ ಜೊತೆ ಒಬ್ಬರು ಇದ್ದಿದ್ದರೂ ಈ ಘಟನೆ ನಡೆಯುತ್ತಿರಲಿಲ್ಲ. ಈಗ ದಾರುಣ ಘಟನೆ ನಡೆದಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಧೈರ್ಯ ಕೊಡಲಿ ಎಂದಿದ್ದಾರೆ.
ಸಿದ್ದಾರ್ಥ ಆತ್ಮಹತ್ಯೆಗೆ ಐಟಿ ಕಿರುಕುಳ ಕಾರಣ ಎಂಬ ಮಾತು ಕೇಳಿ ಬರುತ್ತಿದೆ ಎಂಬ ಪಶ್ನೆಗೆ ಪ್ರತಿಕ್ರಿಯೆ ನೀಡಲು ಬಿಎಸ್ವೈ ನಿರಾಕರಿಸಿದ್ದಾರೆ. ಐಟಿ ಡಿಜಿ ಪತ್ರದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಕೇಳುತ್ತಿದ್ದಂತೆ ಏನು ಮಾತನಾಡದೇ ಹೊರಟು ಹೋಗಿದ್ದಾರೆ.
ಸಿದ್ಧಾರ್ಥ್ ಸಾವಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡ ಸಂತಾಪ ಸೂಚಿಸಿದ್ದಾರೆ. ಕಾಫಿಯನ್ನು ಲೋಕದೆಲ್ಲೆಡೆ ಪಸರಿಸಿದ ಯಶಸ್ವಿ ಉದ್ಯಮಿ ಎಂದು ಹೆಸರು ಮಾಡಿದ್ದ ವಿ.ಜಿ.ಸಿದ್ದಾರ್ಥ್ ಅಕಾಲಿಕ ಮರಣದ ಸುದ್ದಿ ನಿಜಕ್ಕೂ ತುಂಬಾ ದುಃಖ ತಂದಿದೆ. ವಿಧಿವಶರಾದ ಸಿದ್ಧಾರ್ಥ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬದ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುವೆ ಎಂದು ಟ್ವೀಟ್ ಮಾಡಿದ್ದಾರೆ.