ಕರ್ನಾಟಕ

karnataka

ETV Bharat / state

ರಕ್ಷಣಾ ಇಲಾಖೆಯ 750 ಎಕರೆ ಜಾಗ ಹಸ್ತಾಂತರಿಸುವಂತೆ ರಕ್ಷಣಾ ಸಚಿವರಿಗೆ ಮನವಿ - ಡಿಸಿಎಂ ಅಶ್ವತ್ಥ್ ನಾರಾಯಣ್

ಈ ಹಿಂದೆಯೇ 10 ಸಾವಿರ ಎಕರೆಯಷ್ಟು ಭೂಮಿಯನ್ನು ರಕ್ಷಣಾ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಪ್ರತೀ 10 ವರ್ಷಕ್ಕೊಮ್ಮೆ ಗುತ್ತಿಗೆ ನವೀಕರಣ ಮಾಡಲಾಗುತ್ತಿದೆ. ಇಷ್ಟು ಪ್ರಮಾಣದ ಭೂಮಿಯನ್ನು ರಕ್ಷಣಾ ಇಲಾಖೆ ಬಳಸುತ್ತಿಲ್ಲ. ಹೀಗಾಗಿ ಈ ಜಾಗದ 750 ಎಕರೆ ಪ್ರದೇಶದಲ್ಲಿ ಮಾಹಿತಿ ತಂತ್ರಜ್ಞಾನ ಪಾರ್ಕ್‌ ಸ್ಥಾಪನೆಗೆ ನಿರ್ಧರಿಸಲಾಗಿದೆ ಎನ್ನಲಾಗಿದೆ.

DCM appeals to Defense Minister
ರಕ್ಷಣ ಸಚಿವರಿಗೆ ಡಿಸಿಎಂ ಮನವಿ

By

Published : Jan 16, 2021, 4:54 PM IST

ಬೆಂಗಳೂರು: ಬೆಳಗಾವಿಯಲ್ಲಿ ಐಟಿ ಪಾರ್ಕ್‌ ಸ್ಥಾಪನೆಗಾಗಿ ರಕ್ಷಣಾ ಇಲಾಖೆ ವಶದಲ್ಲಿರುವ ರಾಜ್ಯದ 10,639 ಎಕರೆ ಭೂಮಿಯ ಪೈಕಿ 750 ಎಕರೆ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ಬಿಟ್ಟುಕೊಡುವಂತೆ ಐಟಿ-ಬಿಟಿ ಸಚಿವರೂ ಆದ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್​​​ ನಾರಾಯಣ್​ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಬಳಿ ಮನವಿ ಸಲ್ಲಿಸಿದ್ದಾರೆ.

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಶುಕ್ರವಾರ ಸಂಜೆ ರಕ್ಷಣಾ ಸಚಿವರನ್ನು ಭೇಟಿಯಾಗಿ ಮನವಿ ಪತ್ರ ನೀಡಿದ ಡಿಸಿಎಂ, ರಾಜನಾಥ್‌ ಸಿಂಗ್‌ ಅವರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ತಿಳಿಸಿದರು.

ಈ ಹಿಂದೆಯೇ 10 ಸಾವಿರ ಎಕರೆಯಷ್ಟು ಭೂಮಿಯನ್ನು ರಕ್ಷಣಾ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಪ್ರತೀ 10 ವರ್ಷಕ್ಕೊಮ್ಮೆ ಗುತ್ತಿಗೆ ನವೀಕರಣ ಮಾಡಲಾಗುತ್ತಿದೆ. ಇಷ್ಟು ಪ್ರಮಾಣದ ಭೂಮಿಯನ್ನು ರಕ್ಷಣಾ ಇಲಾಖೆ ಬಳಸುತ್ತಿಲ್ಲ. ಹೀಗಾಗಿ ಈ ಜಾಗದ 750 ಎಕರೆ ಪ್ರದೇಶದಲ್ಲಿ ಮಾಹಿತಿ ತಂತ್ರಜ್ಞಾನ ಪಾರ್ಕ್‌ ಸ್ಥಾಪನೆ ಮಾಡುವ ಬಗ್ಗೆ ಪ್ರಸ್ತಾವನೆ ಬಂದಿದೆ ಎಂದಿದ್ದಾರೆ.

ಈ ಪಾರ್ಕ್​​​ನಿಂದಾಗಿ ಬೆಳಗಾವಿ ಹಾಗೂ ಉತ್ತರ ಕರ್ನಾಟಕ ಪ್ರದೇಶದಲ್ಲಿ 60 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತವೆ. ಜತೆಗೆ ಧಾರವಾಡದ ಐಐಟಿ ಮತ್ತು ಐಐಐಟಿ ಹಾಗೂ ಕೆಎಲ್‌ಇ ಶೈಕ್ಷಣಿಕ ಸಂಸ್ಥೆಗಳಿಂದ ಹೊರಬರುವ ಸ್ಥಳೀಯ ಪ್ರತಿಭೆಗಳಿಗೆ ಉದ್ಯೋಗವಕಾಶ ಕಲ್ಪಿಸುವ ಉದ್ದೇಶವಿದೆ ಎಂಬ ವಿಷಯವನ್ನು ರಾಜನಾಥ್‌ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಅವರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಆದಷ್ಟು ಬೇಗ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ ಎಂದು ಡಿಸಿಎಂ ತಿಳಿಸಿದರು.

ಈ ಭೂಮಿ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲೇ ಇದ್ದು, ಐಟಿ ಪಾರ್ಕ್‌ ಸ್ಥಾಪನೆಗೆ ಅತ್ಯುತ್ತಮ ಜಾಗವಾಗಿದೆ. ಸ್ಥಳೀಯ ಆಡಳಿತ, ಮಾಹಿತಿ ತಂತ್ರಜ್ಞಾನ ಇಲಾಖೆ ಅಧಿಕಾರಿಗಳು, ಐಟಿ-ಬಿಟಿ ವಿಷನ್‌ ಗ್ರೂಪ್‌ ಸೇರಿದಂತೆ ಎಲ್ಲರೂ ಈ ಜಾಗವೇ ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಎಲ್ಲ ಸಂಗತಿಗಳನ್ನು ರಾಜನಾಥ್‌ ಸಿಂಗ್‌ ಅವರಿಗೆ ತಿಳಿಸಲಾಗಿದೆ ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.

ಇದನ್ನೂ ಓದಿ:ಸಿಡಿ ಆರೋಪ, ಆಪರೇಷನ್ ಕಮಲದಲ್ಲಿ ಹಣದ ಪ್ರಭಾವದ ಬಗ್ಗೆ ತನಿಖೆಯಾಗಲಿ: ಸಿದ್ದರಾಮಯ್ಯ ಒತ್ತಾಯ

ABOUT THE AUTHOR

...view details