ಬೆಂಗಳೂರು:ಸ್ವಾತಂತ್ರ್ಯ ಸೇನಾನಿಯಾಗಿದ್ದ ವೀರ ಸಾವರ್ಕರ್ ಅವರ ಹೆಸರನ್ನು ಬೆಂಗಳೂರಿನ ಮೇಲ್ಸೇತುವೆಯೊಂದಕ್ಕೆ ನಾಮಕರಣ ಮಾಡುವ ಸಂಬಂಧ ನಮ್ಮ ಸರ್ಕಾರ ಸೂಕ್ತವಾದ ನಿರ್ಧಾರ ಕೈಗೊಂಡಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಸಮರ್ಥನೆ ಮಾಡಿಕೊಂಡಿದ್ದಾರೆ.
ಸ್ವಾತಂತ್ರ್ಯ ವೀರರ ಹೆಸರನ್ನಿಡದೇ ಸೋನಿಯಾ ಗಾಂಧಿ ಹೆಸರನ್ನಿಡಬೇಕಿತ್ತೆ: ಸವದಿ ಪ್ರಶ್ನೆ - Yelahanka flyover
ಬೆಂಗಳೂರಿನಲ್ಲಿರುವ ಮೇಲ್ಸೇತುವೆಯೊಂದಕ್ಕೆ ವೀರ ಸಾವರ್ಕರ್ ಅವರ ಹೆಸರನ್ನಿಡುವ ಸಂಬಂಧ ಕೈ ನಾಯಕರ ವಿರುದ್ಧ ವಾಗ್ದಾಳಿ ನಡೆಸಿರುವ ಡಿಸಿಎಂ ಲಕ್ಷ್ಮಣ ಸವದಿ, ಇಂತಹ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನಿಡದೇ ಸೋನಿಯಾ ಗಾಂಧಿ ಅವರ ಹೆಸರನ್ನಿಡಬೇಕಿತ್ತೇ? ಎಂದು ಪ್ರಶ್ನಿಸಿದ್ದಾರೆ.
ಈ ನಿರ್ಧಾರವನ್ನು ವಾಸ್ತವವಾಗಿ ಎಲ್ಲ ಪಕ್ಷಗಳೂ ಸ್ವಾಗತಿಸಬೇಕಾಗಿತ್ತು. ಆದರೆ, ದುರದೃಷ್ಟವಶಾತ್ ಪ್ರತಿಪಕ್ಷಗಳು ಇದರಲ್ಲಿಯೂ ರಾಜಕೀಯದ ಅಪಸ್ವರ ಎತ್ತುತ್ತ ಮೊಸರಲ್ಲಿ ಕಲ್ಲು ಹುಡುಕುವ ಯತ್ನ ನಡೆಸುತ್ತಿರುವುದು ಖಂಡನೀಯ. ವೀರ ಸಾವರ್ಕರ್ ಬ್ರಿಟಿಷರ ವಿರುದ್ಧ ಹೋರಾಡಿ ಸೆರೆವಾಸ ಅನುಭವಿಸಿದ ರಾಷ್ಟ್ರ ಭಕ್ತರಾಗಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಓದಿದ್ದರೆ ಸಾವರ್ಕರ್ ಅವರು ಎಷ್ಟೊಂದು ಧೀರ, ಅಪ್ರತಿಮ ಹೋರಾಟಗಾರ ಎಂಬುದು ಇವರಿಗೆ ಅರ್ಥವಾಗುತ್ತಿತ್ತು. ಇಂತಹ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನಿಡದೇ ಮತ್ತೆ ಸೋನಿಯಾ ಗಾಂಧಿಯವರ ಹೆಸರನ್ನಿಡಬೇಕಿತ್ತೇ? ಎಂದು ಪ್ರಶ್ನಿಸಿದ್ದಾರೆ.
ಪ್ರತಿಪಕ್ಷದವರಿಗೆ ರಾಜಕೀಯ ಮಾಡಲು ಬೇಕಾದಷ್ಟು ಇತರ ವಿಷಯಗಳಿವೆ. ಆದರೆ, ಸ್ವಾತಂತ್ರ ಹೋರಾಟಗಾರರ ವಿಷಯದಲ್ಲೂ ರಾಜಕೀಯ ಬೆರೆಸುತ್ತಿರುವುದು ಯಾರ ಓಲೈಕೆಗೆ? ಇನ್ನಾದರೂ ರಾಷ್ಟ್ರಭಕ್ತರ ವಿಚಾರದಲ್ಲಿ, ಸ್ವಾತಂತ್ರ್ಯ ಹೋರಾಟಗಾರರ ವಿಚಾರದಲ್ಲಿ ಪ್ರತಿಪಕ್ಷಗಳ ಮುಖಂಡರು ರಾಜಕೀಯ ಮಾಡದೇ ಗೌರವಪೂರ್ವಕವಾಗಿ ನಡೆದುಕೊಳ್ಳುವುದನ್ನು ಕಲಿಯುತ್ತಾರೆ ಎಂದು ನಿರೀಕ್ಷಿಸಬಹುದೇ? ಎಂದು ಪತ್ರಿಕಾ ಹೇಳಿಕೆ ಮೂಲಕ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ.