ಬೆಂಗಳೂರು:ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 5ನೇ ದಿನ ಹಾಗೂ ಕೊನೆಯ ದಿನದಂದು ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಾಗಾರದ ಸಮಾರೋಪ ಸಮಾರಂಭ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಭಾಗಿಯಾಗಿದ್ದು, ಕೊನೆ ದಿನವಾದ ಇಂದು ಶಿಕ್ಷಣದಲ್ಲಿ ಉದಾರ ಕೊಡುಗೆ ಎಂಬ ವಿಷಯದ ಕುರಿತಂತೆ ಕಾರ್ಯಾಗಾರ ನಡೆಸಲಾಯಿತು.
ಈ ವೇಳೆ ಸಚಿವರು ಮಾತನಾಡಿ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೂರದೃಷ್ಟಿಯನ್ನು ಇಟ್ಟುಕೊಂಡು ರಚಿಸಿರುವುದು ಭಾರತ ದೇಶದ ಶಿಕ್ಷಣ ವಲಯದಲ್ಲಿ ಇತಿಹಾಸ ಸೃಷ್ಟಿಸಿದೆ. ಆಧುನಿಕ ಶಿಕ್ಷಣಕ್ಕೆ ಪೂರಕವಾಗಿ ಹೊಸ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿ ಜಾರಿಗೊಳಿಸಿರುವುದು ನಿಜಕ್ಕೂ ಶ್ಲಾಘನೀಯ. ಬಹುಮುಖ್ಯವಾಗಿ ಈ ಹೊಸ ಶಿಕ್ಷಣ ನೀತಿ ದೇಶದ ನೆಲದ ಮೌಲ್ಯವನ್ನು ಹಾಗೂ ನೀತಿಯನ್ನು ಎತ್ತಿಹಿಡಿದಿದೆ ಹಾಗೂ ಆಂಗ್ಲ ಶಿಕ್ಷಣ ಪದ್ಧತಿಗೆ ತಿಲಾಂಜಲಿ ಹಾಡಿದ್ದು, ಶಿಕ್ಷಣ ಕ್ರಾಂತಿಯನ್ನೇ ಸೃಷ್ಟಿಸಿರುವುದು ನಿಜಕ್ಕೂ ಸಂತಸದ ವಿಚಾರ ಎಂದು ತಿಳಿಸಿದರು.
ಮಕ್ಕಳು ಚಿಕ್ಕವಯಸ್ಸಿನಲ್ಲಿಯೇ ಅವರ ಕೌಶಲ್ಯ ಹಾಗೂ ಬುದ್ಧಿವಂತಿಕೆಯನ್ನು ಗಮನಿಸಿ ಈ ಒಂದು ಶಿಕ್ಷಣ ನೀತಿಯನ್ನು ರಚಿಸಲಾಗಿದೆ. ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಲಭ್ಯ ಕೊಡುವುದರ ಮೂಲಕ ಎಲ್ಲಾ ವರ್ಗದ ವಿಶೇಷವಾಗಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರಿಗೂ ಹೆಚ್ಚಿನ ಒತ್ತನ್ನು ನೀಡಿರುವುದು ಇದರ ವಿಶೇಷ ಮುಖ್ಯಾಂಶಗಳಾಗಿದೆ ಎಂದು ತಿಳಿಸಿದರು.
ಬಳಿಕ ಪ್ರೊ.ಕೆ.ಆರ್. ವೇಣುಗೋಪಾಲ್ ಮಾತನಾಡಿ, ಬೆಂಗಳೂರು ವಿಶ್ವವಿದ್ಯಾಲಯ 5 ದಿನಗಳಿಂದ ಸತತವಾಗಿ ಅರ್ಥಪೂರ್ಣ ಕಾರ್ಯಾಗಾರವನ್ನು ಹಲವಾರು ತಜ್ಞರನ್ನು ಕರೆಸಿ ನಡೆಸುವುದರ ಮೂಲಕ ಶೈಕ್ಷಣಿಕ ಜವಾಬ್ದಾರಿಯನ್ನು ಎತ್ತಿಹಿಡಿಯುವಲ್ಲಿ ತನ್ನದೇ ಪಾತ್ರವನ್ನು ವಹಿಸಿದೆ. ಈ ಒಂದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಜಾಗತಿಕ ಮಟ್ಟದಲ್ಲಿ ಭಾರತ ವಿಶ್ವಗುರು ಆಗುವುದರಲ್ಲಿ ಸಂದೇಹವೇ ಇಲ್ಲ ಎಂದು ತಿಳಿಸಿದರು.
ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಬದ್ಧತೆ ಹಾಗೂ ನ್ಯಾಸ ಹಾಗೂ ದತ್ತಿಯನ್ನು ನೀಡುವ ಸಂಬಂಧ ಇಂಡಿಯನ್ ಟ್ರಸ್ಟ್ ಕಾಯ್ದೆಯ ಕೆಲವು ಮುಖ್ಯವಿಚಾರಗಳನ್ನು ತಮ್ಮ ಭಾಷಣದಲ್ಲಿ ತಿಳಿಸಿದರು.
ಈ ಹೊಸ ನೀತಿಯಿಂದ ಎಲ್ಲಾ ಬಗೆಯ ಶಿಕ್ಷಣ ಯೋಜನೆಗಳನ್ನು ಕ್ರೋಢೀಕರಿಸಿ ಸಮಗ್ರ ಅಧ್ಯಯನಕ್ಕೆ ಹೆಚ್ಚು ಒತ್ತನ್ನು ಕೊಡುವುದರ ಜೊತೆಗೆ 2025ರ ಒಳಗೆ ಸಂಪೂರ್ಣ ಅನುಷ್ಠಾನವನ್ನು ಮಾಡಲಾಗುತ್ತದೆ ಹಾಗೂ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಭಾರತದ ಉನ್ನತ ಶಿಕ್ಷಣ ಸಮಿತಿಯ ಹಲವಾರು ಯೋಜನೆಗಳನ್ನು ರೂಪಿಸಿ ದೇಶದ ಶಿಕ್ಷಣ ವ್ಯವಸ್ಥೆಯ ಗುಣಮಟ್ಟವನ್ನು ಹೆಚ್ಚಿಸುವುದರಲ್ಲಿ ಸಂದೇಹವಿಲ್ಲ ಎಂದು ತಿಳಿಸಿದರು.