ಬೆಂಗಳೂರು: ಆದಷ್ಟು ಬೇಗ ಕಠಿಣ ಕ್ರಮ ತೆಗೆದುಕೊಂಡ ಕಾರಣ ಕೊರೊನಾ ಸೋಂಕು ದೇಶ ಹಾಗೂ ನಮ್ಮ ರಾಜ್ಯದಲ್ಲಿ ನಿಯಂತ್ರಣದಲ್ಲಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ತಮ್ಮ ಗೃಹ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸಂಘಟಿತ ಕಾರ್ಮಿಕರಿಗೆ, ಬಡವರಿಗೆ ಊಟಕ್ಕೆ ತೊಂದರೆ ಆದ ಕಾರಣ ಸರ್ಕಾರ ಮೂರು ತಿಂಗಳು ಉಚಿತ ರೇಷನ್ ಕೊಡುತ್ತಿದೆ. 1,26,78,000 ಪಡಿತರ ಚೀಟಿದಾರರಿಗೆ ರೇಷನ್ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಹಾಪ್ ಕಾಮ್ಸ್ ಮೂಲಕ ಪ್ರತಿದಿನ 400 ಟನ್ ತರಕಾರಿ, ಹಣ್ಣು ಮಾರಾಟ ಆಗುತ್ತಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಒಂದು ತಂಡ ರಚಿಸಲಾಗಿದೆ. ಬಿಹಾರ, ಮಧ್ಯಪ್ರದೇಶ, ಮಿಜೋರಾಂ ಸೇರಿದಂತೆ ಬೇರೆ ಬೇರೆ ರಾಜ್ಯಗಳ ಕೂಲಿ ಕಾರ್ಮಿಕರು ಬೆಂಗಳೂರಲ್ಲಿ ಬಹಳ ಕಷ್ಟ ಅನುಭವಿಸುತ್ತಿದ್ದಾರೆ. ಸುಮಾರು ಐದು ಸಾವಿರ ಕಾರ್ಮಿಕರಿಗೆ ಮಾಸ್ಕ್, ಆರೋಗ್ಯ ತಪಾಸಣೆ, ಊಟ, ದಿನ ಬಳಕೆ ವಸ್ತುಗಳನ್ನು ಕೊಟ್ಟಿದ್ದೇವೆ. ಯಾರಾದರೂ ಊಟ, ವಸತಿ ಇಲ್ಲದವರಿಗೆ ರಾಜ್ಯಾದ್ಯಂತ ಹಾಸ್ಟೆಲ್ಗಳಲ್ಲಿ ಎಲ್ಲಾ ವ್ಯವಸ್ಥೆ ಮಾಡುತ್ತಿದ್ದೇವೆ. ಆಹಾರ ಪದಾರ್ಥಗಳು, ಧಾನ್ಯಗಳು ನಮ್ಮ ಬಳಿ ಸ್ಟಾಕ್ ಇವೆ. ಯಾರೊಬ್ಬರೂ ಉಪವಾಸ ಮಲಗಬಾರದು ಅನ್ನುವುದು ಮುಖ್ಯಮಂತ್ರಿಗಳ ಉದ್ದೇಶ ಎಂದರು.