ಬೆಂಗಳೂರು : ಬೆಳಗ್ಗೆಯಿಂದ ಸುಮಾರು 4 ಸಾವಿರ ಅರ್ಜಿಗಳನ್ನು ಈಗಾಗಲೇ ದಾಖಲು ಮಾಡಿಕೊಂಡಿದ್ದೇವೆ. ಇನ್ನೂ ಕೆಲವರು ಕಾಯುತ್ತಿದ್ದಾರೆ, ಅವರಿಂದ ಮತ್ತೆ ಅರ್ಜಿ ಸ್ವೀಕರಿಸಲಾಗುವುದು. ಜನರ ಅಹವಾಲುಗಳನ್ನು ತ್ವರಿತ ವಿಲೇವಾರಿ ಮಾಡಲು ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಕೆ. ಆರ್ ಪುರದ ಐಟಿಐ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಲ್ಲ ಅರ್ಜಿಗಳನ್ನು ಒಂದೇ ದಿನ ಪರಿಹರಿಸಲು ಸಾಧ್ಯವಾಗುವುದಿಲ್ಲ. ಕುಡಿಯುವ ನೀರು, ರಸ್ತೆ, ಒಳಚರಂಡಿ, ಸ್ವಚ್ಛತೆ ಕುರಿತ ದೂರುಗಳನ್ನು ಆದ್ಯೆತಯ ಮೇರೆಗೆ ಬಗೆಹರಿಸಲಾಗುವುದು. ಈ ನಿಟ್ಟಿನಲ್ಲಿ ಮೇಲ್ವಿಚಾರಣೆಗಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು. ವೈಯಕ್ತಿಕ ಅಹವಾಲುಗಳನ್ನು ಸಂಬಂಧಿಸಿದ ಇಲಾಖೆಗೆ ಕಳುಹಿಸಿ ಸಮಸ್ಯೆಯನ್ನು ಪರಿಹರಿಸಲಾಗುವುದು. ಕೇವಲ ನಾನು ಮಾತ್ರ ಈ ಜನರ ಮನೆ ಬಾಗಿಲಿಗೆ ಬಂದಿಲ್ಲ. ಸಂಬಂಧಪಟ್ಟ ಎಲ್ಲ ಇಲಾಖೆ ಅಧಿಕಾರಿಗಳ ಸಮೇತ, ಪಕ್ಷಾತೀತವಾಗಿ ಜನಪ್ರತಿನಿಧಿಗಳ ಸಮೇತ ಇಡೀ ಸರಕಾರವನ್ನೇ ಜನರ ಮನೆ ಬಾಗಿಲಿಗೆ ಕರೆತರಲಾಗಿದೆ ಎಂದು ಭರವಸೆ ನೀಡಿದರು.
ಕೆಲವರು ಭ್ರಷ್ಟಾಚಾರದ ಬಗ್ಗೆ ದೂರು ನೀಡಿದ್ದಾರೆ. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ವ್ಯಾಪ್ತಿಯಲ್ಲಿ ಪಡಿತರ ವಿತರಣೆಗೆ ಲಂಚ ಪಡೆಯುತ್ತಿರುವ ಬಗ್ಗೆ ಹಾಗೂ ಖಾತೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ದೂರು ಬಂದಿದೆ. ಈ ಬಗ್ಗೆ ಕೂಡಲೇ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಡಿಕೆಶಿ ತಿಳಿಸಿದರು.