ಬೆಂಗಳೂರು : ವೃದ್ಧಾಪ್ಯ ವೇತನ, ವಿಧವಾ ವೇತನ, ಖಾತೆ ಸಮಸ್ಯೆ, ತೆರಿಗೆ ಹೊರೆ ಹೆಚ್ಚಾಗಿದೆ ಎಂಬ ದೂರುಗಳು ಹೆಚ್ಚಾಗಿ ಕೇಳಿ ಬಂದಿವೆ. ಜನರ ತೆರಿಗೆ ಹೊರೆ ಇಳಿಸುವ ವಿಚಾರದಲ್ಲಿ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಪರಿಶೀಲಿಸಿ ಕಾನೂನಿಗೆ ತಿದ್ದುಪಡಿ ತರಬೇಕಾಗಿದೆ. 2020ರಲ್ಲಿ ಜಾರಿಗೆ ತಂದಿರುವ ಕಾಯ್ದೆಯಲ್ಲಿ ದುಪ್ಪಟ್ಟು ದಂಡ ಕಟ್ಟುವಂತಾಗಿದೆ. ಇದನ್ನು ಕಡಿಮೆ ಮಾಡಲು ಚರ್ಚೆ ಮಾಡುತ್ತಿದ್ದೇವೆ. ಈ ವಿಚಾರವಾಗಿ ಜನರಿಗೆ ಕಾಲಾವಕಾಶ ನೀಡಿ ಪರಿಹಾರವನ್ನು ನೀಡಬೇಕಿದೆ ಎಂದು ಡಿ.ಸಿ.ಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ, ಜರಗನಹಳ್ಳಿ ಸರ್ಕಾರಿ ಶಾಲಾ ಆಟದ ಮೈದಾನದಲ್ಲಿ ನಡೆದ 'ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ' ಕಾರ್ಯಕ್ರಮಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು. ಈ ವೇಳೆ ಮಾತನಾಡಿದ ಅವರು, ವಸತಿ ಪಡೆಯಲು ಹಣ ಕಟ್ಟಿದ್ದರೂ ಹಲವರಿಗೆ ಮನೆ ಸಿಕ್ಕಿಲ್ಲ. ಮತ್ತೆ ಕೆಲವರು ವೈಯಕ್ತಿಕ ಸಮಸ್ಯೆಗಳನ್ನು ಹೇಳಿಕೊಂಡು ಬರುತ್ತಿದ್ದಾರೆ. ಇವರೆಲ್ಲರನ್ನು ಭೇಟಿ ಮಾಡಿ ಅವರ ಅಹವಾಲು ಸ್ವೀಕಾರ ಮಾಡುತ್ತೇನೆ ಎಂದು ತಿಳಿಸಿದರು.
110 ಹಳ್ಳಿಗಳ ಅಭಿವೃದ್ಧಿ ವಿಚಾರವಾಗಿ ಸ್ಥಳೀಯ ಶಾಸಕರು ಹಾಗೂ ಸಂಸದರು ಬೇಡಿಕೆ ಇಟ್ಟಿರುವ ಬಗೆಗಿನ ಪ್ರಶ್ನೆಗೆ ಈ ಭಾಗದಲ್ಲಿ ಸಂಪರ್ಕ ಹಾಗೂ ಕುಡಿಯುವ ನೀರಿನ ಯೋಜನೆಗೆ ಆದ್ಯತೆ ನೀಡುತ್ತೇವೆ. ವಿಧವಾ ವೇತನ ನೀಡಲು ವೃದ್ಧೆ ಬಳಿ 4 ಸಾವಿರ ಲಂಚ ಕೇಳಿದ ಅಧಿಕಾರಿ ವಿರುದ್ಧ ಕ್ರಮಜರುಗಿಸಲಾಗಿದೆ. ಸರ್ಕಾರಿ ಪ್ರೌಢಶಾಲಾ ಶಾಲೆ ಕಟ್ಟಿಸಿಕೊಡಿ, ನಮ್ಮ ಏರಿಯಾ ಜನರಿಗೆ ಕುಡಿಯುವ ನೀರು, ಸ್ಮಶಾನಕ್ಕೆ ಜಾಗ ಬೇಕು. ಅಂಗನವಾಡಿ, ಸಂಚಾರ ದಟ್ಟಣೆ, ಪಾರ್ಕ್ ಸಮಸ್ಯೆ ಬಗೆಹರಿಸಿ ಎಂದು ಸಲ್ಲಿಸಿದ ಸಾವಿರಾರು ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇದಕ್ಕೆ ಕಾನೂನಾತ್ಮಕ ಪರಿಹಾರ ನೀಡಲಾಗುವುದು. ಒಂದಷ್ಟು ಹೊತ್ತು ವೇದಿಕೆಯ ಮೇಲೆ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲಾಗಿದೆ. ಅಪಾರ ಸಂಖ್ಯೆಯಲ್ಲಿ ಜನರು ಅಹವಾಲು ಸಲ್ಲಿಸಲು ಬಂದಿದ್ದನ್ನು ಕಂಡು ವೇದಿಕೆಯಿಂದ ಇಳಿದು ಜನರು ಇದ್ದಲಿಯೇ ತೆರಳಿ ಅವರ ಮನವಿಗಳನ್ನು ಆಲಿಸಿ ಪರಿಹಾರ ಸೂಚಿಸಿದ್ದೇನೆ ಎಂದರು.
ಅಮಾನತಿಗೆ ಸೂಚಿಸಿದ್ದೇನೆ- ಶಿವಕುಮಾರ್:ಬನಶಂಕರಿ ತಾಲೂಕು ಕಚೇರಿಯಲ್ಲಿ ಪಿಂಚಣಿ ಪಡೆಯಲು ಗೊಟ್ಟಿಗೆರೆಯ ಮಣಿಯಮ್ಮ ಅವರು ಹೋದಾಗ ಅಧಿಕಾರಿಗಳೇ ಏಜೆಂಟರ ಬಳಿ ಕಳುಹಿಸಿದ್ದಾರೆ. ಗೇಟ್ ಬಳಿ ರಮೇಶ್ ಎಂಬುವವರು ಹಾಗು ಕೊಠಡಿ ಸಂಖ್ಯೆ 24 ರಲ್ಲಿರುವ ಅಧಿಕಾರಿ ನಾಲ್ಕು ಸಾವಿರ ಲಂಚ ಕೇಳುತ್ತಾರೆ ಎಂದು ದೂರು ನೀಡಿದಾಗ, ಬನಶಂಕರಿ ಉಪ ತಹಶೀಲ್ದಾರಿಗೆ ಕೂಡಲೇ ಆ ಮಹಿಳೆಯಿಂದ ಲಂಚ ಕೇಳಿದ ಅಧಿಕಾರಿ ಮಾಹಿತಿ ಪಡೆದು ಆತನನ್ನು ಅಮಾನತು ಮಾಡಿ ಎಂದು ಸೂಚಿಸಿದ್ದೇನೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.