ಬೆಂಗಳೂರು:ರಾಜ್ಯದ ಜನ ವಿಶ್ವಾಸ ಇಟ್ಟು ನಮಗೆ ಅಧಿಕಾರ ಕೊಟ್ಟಿದ್ದಾರೆ. ನಾವು ಬಸವಣ್ಣ, ಕುವೆಂಪು, ಶಿಶುನಾಳ ಶರೀಫರು, ಕನಕದಾಸರ ನಾಡಿನವರು. ಕೊಟ್ಟ ಮಾತಿಗೆ ಬದ್ಧರಾಗಿರುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆ ನಂತರ ಗ್ಯಾರಂಟಿ ಯೋಜನೆ ಕುರಿತ ಸಂಪುಟ ತೀರ್ಮಾನಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 5 ಗ್ಯಾರಂಟಿಗಳನ್ನು ನೀಡಲು ತೀರ್ಮಾನ ಮಾಡಿ, ದಿನಾಂಕ ನಿಗದಿ ಮಾಡಿದ್ದೇವೆ ಎಂದರು.
ಗೃಹಜ್ಯೋತಿ: 200 ಯೂನಿಟ್ ಉಚಿತ ವಿದ್ಯುತ್. ಜುಲೈ ತಿಂಗಳ ವಿದ್ಯುತ್ ಬಳಕೆ ಉಚಿತವಾಗಲಿದ್ದು, ಆಗಸ್ಟ್ ತಿಂಗಳಿನಿಂದ ಬಿಲ್ ಕಟ್ಟುವಂತಿಲ್ಲ. ಸ್ವಂತ ಮನೆ ಹಾಗೂ ಬಾಡಿಗೆದಾರರಿಗೂ ಈ ಯೋಜನೆ ಅನ್ವಯ. ಯೋಜನೆ ದುರ್ಬಳಕೆ ತಡೆಯಲು 12 ತಿಂಗಳ ಸರಾಸರಿ ಆಧರಿಸಿ, ಅದಕ್ಕೆ ಶೇ. 10 ರಷ್ಟು ಸೇರಿಸಿ, ಅದಕ್ಕೆ ಸಂಪೂರ್ಣ ಶುಲ್ಕ ವಿನಾಯಿತಿ. ಇಷ್ಟು ದಿನಗಳ ಕಾಲ 100 ಯೂನಿಟ್ ಬಳಸುತ್ತಿದ್ದವರು ಏಕಾಏಕಿ 200 ಯುನಿಟ್ ಬಳಕೆಗೆ ಅವಕಾಶವಿಲ್ಲ. ಇದುವರೆಗೂ ಅವರ ದೈನಂದಿನ ಜೀವನದಲ್ಲಿ ಬಳಸಲಾಗುತ್ತಿದ್ದಷ್ಟು ವಿದ್ಯುತ್ ಉಚಿತವಾಗಿ ಬಳಸಬಹುದಾಗಿದೆ ಎಂದು ಹೇಳಿದರು.
ಗೃಹಲಕ್ಷ್ಮಿ:ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ ಮೂಲಕ ಆನ್ಲೈನ್ ಹಾಗೂ ಆಫ್ಲೈನ್ ಅರ್ಜಿ ಆಧರಿಸಿ ಆಗಸ್ಟ್ 15 ರಿಂದ ಜಾರಿ ಮಾಡಲಾಗುತ್ತದೆ. ಜೂನ್ 15 ರಿಂದ ಜುಲೈ 15 ರೊಳಗೆ ದಾಖಲೆಗಳ ಜೊತೆ ಅರ್ಜಿ ಸಲ್ಲಿಸಬೇಕು. ನಂತರ ಅರ್ಜಿ ಹಾಗೂ ದಾಖಲೆ ಪರಿಶೀಲಿಸಿ ಯೋಜನೆ ಜಾರಿಗೆ ಬರುತ್ತದೆ. ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹೊಂದಿದವರಿಗೂ ಈ ಯೋಜನೆ ಸಿಗುತ್ತದೆ. ಮನೆ ಯಜಮಾನಿಯನ್ನು ಕುಟುಂಬದವರೇ ತೀರ್ಮಾನ ಮಾಡಬೇಕು. ಅಂಗವಿಕಲ, ವಿಧವಾ ವೇತನ, ವೃದ್ಧಾಪ್ಯ ವೇತನ ಸೇರಿದಂತೆ ಸಾಮಾಜಿಕ ಭದ್ರತೆ ಪಿಂಚಣಿದಾರರಿಗೂ ಈ 2000 ರೂ. ಕೊಡಲಾಗುವುದು ಎಂದು ತಿಳಿಸಿದರು.
ಅನ್ನಭಾಗ್ಯ:ಜುಲೈ 1 ರಿಂದ ಎಲ್ಲ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿದವರಿಗೆ ತಲಾ 10 ಕೆಜಿ ಆಹಾರ ಧಾನ್ಯ ಕೊಡುತ್ತೇವೆ. ಈ ತಿಂಗಳ ಪಡಿತರ ಆಹಾರ ಸಾಮಗ್ರಿ ರವಾನೆ ಆಗಿದ್ದು, ಈ ತಿಂಗಳಿಂದ ಅಕ್ಕಿ ಹಾಗೂ ಆಹಾರ ಧಾನ್ಯ ಸಂಗ್ರಹಣೆ ಮಾಡಲಾಗುವುದು. ಹೀಗಾಗಿ ಈ ಯೋಜನೆಯನ್ನು ಮುಂದಿನ ತಿಂಗಳಿನಿಂದ ಜಾರಿ ಮಾಡಲಾಗುವುದು ಎಂದು ಹೇಳಿದರು.
ಶಕ್ತಿ: ವಿದ್ಯಾರ್ಥಿನಿಯರು ಸೇರಿದಂತೆ ಕರ್ನಾಟಕದ ಎಲ್ಲ ಮಹಿಳೆಯರಿಗೆ ಜೂನ್ 11 ರಿಂದ ಕರ್ನಾಟಕ ರಾಜ್ಯದೊಳಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ. ರಾಜ್ಯದೊಳಗೆ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ ಸೇವೆಯನ್ನು ಬಳಸಬಹುದು. ಎಸಿ ಮತ್ತು ಐಶಾರಾಮಿ ಬಸ್ ಹೊರತುಪಡಿಸಿ ಸಾಮಾನ್ಯ ಬಸ್ಗಳಿಗೆ ಮಾತ್ರ ಅನ್ವಯ. ಕೆಎಸ್ಆರ್ಟಿಸಿಯಲ್ಲಿ 50% ಸೀಟು ಪುರುಷರಿಗೆ ಮೀಸಲು.