ಕರ್ನಾಟಕ

karnataka

ETV Bharat / state

ಬಿಬಿಎಂಪಿ ಶಾಲೆಗಳಲ್ಲಿ ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ನಮ್ಮ ಆದ್ಯತೆ: ಡಿ.ಕೆ.ಶಿವಕುಮಾರ್

ಬಿಬಿಎಂಪಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕುಸಿದಿದೆ ಎಂಬ ಕಾರಣಕ್ಕೆ ಶಿಕ್ಷಣ ಇಲಾಖೆಯ ಸುಪರ್ದಿಗೆ ಈ ಶಾಲೆಗಳನ್ನು ನೀಡಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್​ ತಿಳಿಸಿದರು.

dcm-dk-shivakumar-reaction-on-bbmp-schools
ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ನಮ್ಮ ಆದ್ಯತೆ: ಡಿ.ಕೆ. ಶಿವಕುಮಾರ್

By ETV Bharat Karnataka Team

Published : Dec 25, 2023, 3:37 PM IST

Updated : Dec 25, 2023, 3:49 PM IST

ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ

ಬೆಂಗಳೂರು: "ಬೆಂಗಳೂರಿನಲ್ಲಿ ಬಡವರ ಮಕ್ಕಳು ಬಿಬಿಎಂಪಿ ಶಾಲೆಗಳಲ್ಲಿ ಓದುತ್ತಿದ್ದು, ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡುವುದು ನಮ್ಮ ಆದ್ಯತೆಯಾಗಿದೆ. ಹಾಗಾಗಿ ಬಿಬಿಎಂಪಿ ಶಾಲೆಗಳನ್ನು ಶಿಕ್ಷಣ ಇಲಾಖೆಯ ಸುಪರ್ದಿಗೆ ನೀಡುವ ನಿರ್ಧಾರ ಕೈಗೊಂಡಿದ್ದೇವೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಬಳಿ ಇಂದು ಅತಿಥಿ ಉಪನ್ಯಾಸಕರ ಅಹವಾಲು ಸ್ವೀಕರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಬೆಂಗಳೂರಿನ ಅತಿಥಿ ಉಪನ್ಯಾಸಕರು ನನ್ನನ್ನು ಭೇಟಿ ಮಾಡಿ, ನಮ್ಮನ್ನು ಸೇವೆಯಲ್ಲಿ ಮುಂದುವರಿಸಬೇಕು ಎಂದು ಕೇಳಿಕೊಂಡಿದ್ದಾರೆ. ಸೆಕ್ಯುರಿಟಿ ಏಜೆನ್ಸಿಯವರು ಶಿಕ್ಷಕರನ್ನು ನೇಮಿಸುತ್ತಾರೆ ಎಂಬ ದೂರು ಬಂದಿದೆ. ಯಾರು ಯಾವ ಕೆಲಸ ಮಾಡಬೇಕೋ ಅವರು ಅದನ್ನೇ ಮಾಡಬೇಕು" ಎಂದರು.

"ಇಂದು ಆಗಮಿಸಿದವರಲ್ಲಿ ಉತ್ತಮವಾಗಿ ಬೋಧನೆ ಮಾಡುವ ಶಿಕ್ಷಕರಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಈ ವಿಚಾರವಾಗಿ ಮತ್ತೆ ಪರಿಶೀಲನೆ ಮಾಡುತ್ತೇನೆ. ನಮಗೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು ಬಹಳ ಮುಖ್ಯ. ಬಿಬಿಎಂಪಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕುಸಿದಿದೆ ಎಂಬ ಕಾರಣಕ್ಕೆ ಶಿಕ್ಷಣ ಇಲಾಖೆ ಸುಪರ್ದಿಗೆ ಈ ಶಾಲೆಗಳನ್ನು ನೀಡಿದ್ದೇವೆ. ಸರಿಯಾಗಿ ತರಬೇತಿ ಹೊಂದಿರುವ ಶಿಕ್ಷಕರನ್ನು ನೇಮಿಸಬೇಕಿದೆ. ಬಿಬಿಎಂಪಿ ವತಿಯಿಂದ ಎಲ್ಲಾ ಮೂಲಸೌಕರ್ಯ ಒದಗಿಸಲಾಗುವುದು, ಶಿಕ್ಷಣದ ಜವಾಬ್ದಾರಿಯನ್ನು ಇಲಾಖೆಗೆ ವಹಿಸಲಾಗಿದೆ" ಎಂದು ಹೇಳಿದರು.

ಸಚಿವ ಬೈರತಿ ಸುರೇಶ್ ಭೇಟಿ ವಿಚಾರವಾಗಿ ಪ್ರತಿಕ್ರಿಯಿ, "ನಮ್ಮಲ್ಲಿ ಕೆಲವು ಯೋಜನಾ ಪ್ರಾಧಿಕಾರಗಳಿವೆ. ಅವುಗಳಿಗೆ ಕಾರ್ಯಕರ್ತರನ್ನು ನೇಮಕ ಮಾಡಬೇಕು. ನಾಲ್ವರು ಸದಸ್ಯರನ್ನು ನೇಮಿಸಿ, ಎಲ್ಲರಿಗೂ ಅವಕಾಶ ಮಾಡಿಕೊಡಬೇಕು. ಈ ದೃಷ್ಟಿಯಿಂದ ಮಾರ್ಗದರ್ಶನ ನೀಡಿದ್ದೇನೆ" ಎಂದರು.

"ಲೋಕಸಭೆ ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳ ಹೆಸರು ಸೂಚನೆ ಜವಾಬ್ದಾರಿ ಸಚಿವರಿಗೆ ನೀಡಿದ್ದು, ಸಚಿವರ ಜೊತೆ ಚರ್ಚೆ ಮಾಡುತ್ತಿದ್ದೇವೆ" ಎಂದು ತಿಳಿಸಿದರು. ನಿಗಮ, ಮಂಡಳಿಗಳಿಗೆ ಯಾವಾಗ ನೇಮಕಾತಿ ಆಗಲಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, "ಯಾವುದೇ ಕ್ಷಣದಲ್ಲಿ ಬೇಕಾದರೂ ಆಗಬಹುದು" ಎಂದು ಹೇಳಿದರು.

ಕನ್ನಡ ನಾಮಫಲಕ ಬಗ್ಗೆ ಕನ್ನಡಪರ ಸಂಘಟನೆಗಳ ಹೋರಾಟದ ಬಗ್ಗೆ ಕೇಳಿದಾಗ, "ಕನ್ನಡ ಪರ ಸಂಘಟನೆಗಳು ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ಮಾಡಬೇಕು. ಹೋರಾಟದ ಹೆಸರಿನಲ್ಲಿ ಯಾರ ಆಸ್ತಿಪಾಸ್ತಿಗೂ ಹಾನಿ ಮಾಡಬಾರದು. ಬೆಂಗಳೂರಿಗೆ ಬಂದು ವ್ಯಾಪಾರ ಮಾಡಿ ಬದುಕುತ್ತಿರುವವರು ತಮ್ಮ ಮಳಿಗೆ ಬೋರ್ಡ್​ನಲ್ಲಿ ಶೇ 60ರಷ್ಟು ಕನ್ನಡ ಇರಬೇಕು ಎಂಬ ಕಾನೂನು ಇದ್ದು, ಯಾರು ಎಷ್ಟೇ ದೊಡ್ಡ ವ್ಯಾಪಾರಸ್ಥರಾದರೂ ಎಲ್ಲರೂ ಅದನ್ನು ಪಾಲನೆ ಮಾಡಬೇಕು" ಎಂದರು.

ಹಿಜಾಬ್ ವಿಚಾರವಾಗಿ ಕೇಳಿದಾಗ, "ನಾವು ಆ ವಿಚಾರವಾಗಿ ಆಲೋಚಿಸಿಲ್ಲ. ಮಾಧ್ಯಮಗಳೇ ಇದನ್ನು ದೊಡ್ಡ ವಿಷಯ ಮಾಡುತ್ತಿವೆ. ಹಿಜಾಬ್ ವಿಚಾರವಾಗಿ ಚರ್ಚೆಗೆ ಬರುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಸರ್ಕಾರದ ಮುಂದೆ ಪ್ರಸ್ತಾವನೆ ಎಲ್ಲಿದೆ" ಎಂದು ಪ್ರಶ್ನಿಸಿದರು. ಇದೇ ಸಂದರ್ಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ರಾಜ್ಯದ ಜನತೆಗೆ ಕ್ರಿಸ್​ಮಸ್​ ಹಬ್ಬದ ಶುಭಾಶಯಗಳನ್ನು ಕೋರಿದರು.

ಇದನ್ನೂ ಓದಿ:'ಸಚಿವ ಶಿವಾನಂದ ಪಾಟೀಲರಿಗೆ ರೈತರನ್ನು ನಿಂದಿಸಿ ಅವಹೇಳನ ಮಾಡುವ ಉಸ್ತುವಾರಿ ವಹಿಸಿಕೊಟ್ಟಂತಿದೆ': ಬಿವೈ ವಿಜಯೇಂದ್ರ

Last Updated : Dec 25, 2023, 3:49 PM IST

ABOUT THE AUTHOR

...view details