ಬೆಂಗಳೂರು: ಪ್ರಭಾವಿ ಅಪಾರ್ಟ್ಮೆಂಟ್ ಮಾಲೀಕರಿಗೆ ಅನುಕೂಲ ಮಾಡಿಕೊಡಲು ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ನಿರ್ಮಾಣ ಯೋಜನೆ ರೂಪಿಸಿದ ಮತ್ತು ಯೋಜನೆಯನ್ನು ಅನುಷ್ಠಾನಕ್ಕೆ ತಂದ ಎಲ್ಲ ಅಧಿಕಾರಿಗಳು, ಇಂಜಿನಿಯರ್ಗಳನ್ನು ಇಂದು ಸಂಜೆಯೊಳಗೆ ಸೇವೆಯಿಂದ ಅಮಾನತು ಮಾಡುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಮಿಷನರ್ ತುಷಾರ್ ಗಿರಿನಾಥ್ ಅವರಿಗೆ ಸೂಚನೆ ಕೊಟ್ಟರು.
ವಿಧಾನಸೌಧದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಅವರು, ಈ ಕೆರೆ ಮಧ್ಯೆ ರಸ್ತೆ ನಿರ್ಮಾಣ ಮಾಡುವ ಐಡಿಯಾ ಕೊಟ್ಟವರು ಯಾರು?, ಯೋಜನೆ ರೂಪಿಸಿದವರು ಯಾರು?, ಅನುಷ್ಠಾನಕ್ಕೆ ತಂದವರು ಯಾರು?, ಯಾಕಾಗಿ ಇದನ್ನು ಮಾಡಿದಿರಿ?, ಯಾರಿಗೆ ಅನುಕೂಲ ಮಾಡಿಕೊಡಲು ಮಾಡಿದಿರಿ?, ಯಾರ್ಯಾರು ಇದರಲ್ಲಿ ಭಾಗಿಯಾಗಿದ್ದೀರಿ ಎಂದು ಪ್ರಶ್ನಿಸಿದರು. ಡಿಕೆಶಿ ಪ್ರಶ್ನೆಗೆ ಅಧಿಕಾರಿಗಳು ಉತ್ತರಿಸಲು ತಡಬಡಾಯಿಸಿದರು. ಹೀಗಾಗಿ ತಕ್ಷಣವೇ ಹೊಸಕೆರೆಹಳ್ಳಿ ಕೆರೆ ಭಾಗ ಮಾಡಿ ರಸ್ತೆ ನಿರ್ಮಾಣ ಮಾಡಿದ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಡಿಕೆಶಿ ಸೂಚನೆ ನೀಡಿದರು.
ಈಜಿಪುರ ಮೇಲ್ಸೇತುವೆ ಶೀಘ್ರ ಪೂರ್ಣಗೊಳಿಸಿ:ಇದೇ ವೇಳೆ ಈಜಿಪುರ ಮೇಲ್ಸೇತುವೆ ಯೋಜನೆಯನ್ನು ತಕ್ಷಣವೇ ಪೂರ್ಣಗೊಳಿಸಬೇಕು. ಈ ಬಗ್ಗೆ ಅಗತ್ಯವಿರುವ ಆಡಳಿತಾತ್ಮಕ ನಿರ್ಣಯಗಳನ್ನು ಕೈಗೊಳ್ಳಬೇಕು ಎಂದು ಡಿ.ಕೆ. ಶಿವಕುಮಾರ್ ಅವರು ತುಷಾರ್ ಗಿರಿನಾಥ್ ಅವರಿಗೆ ತಿಳಿಸಿದರು. ಬೆಂಗಳೂರಿನ ಮುಂದಿನ 20 ವರ್ಷಗಳ ಅಗತ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದರ ಜೊತೆಗೆ ಬೆಂಗಳೂರು ಬಗ್ಗೆ ದೂರದೃಷ್ಟಿ ಯೋಜನೆಗಳನ್ನು ರೂಪಿಸದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.