ಬೆಂಗಳೂರು : "ಕಾವೇರಿ ಭಾಗದ ಪ್ರದೇಶದಲ್ಲಿ ನಮಗೆ 106 ಟಿಎಂಸಿ ನೀರಿನ ಅಗತ್ಯವಿದ್ದು, ಇದೀಗ 56 ಟಿಎಂಸಿ ನೀರು ಸಂಗ್ರಹವಿದೆ. ಎರಡು ದಿನಗಳ ಕಾಲ ಮಳೆ ಬಿದ್ದ ಕಾರಣ ಅಕ್ಬೋಬರ್ 1ರಂದು 13,000, 2ರಂದು 23,000, 3ರಂದು 20,000, 4ರಂದು 15,000, 5ರಂದು 10,000 ಕ್ಯೂಸೆಕ್ ನೀರು ಒಳಹರಿವಿನ ಮೂಲಕ ಸಂಗ್ರಹವಾಗಿದೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ನಮ್ಮ ರಾಜ್ಯದ ರೈತರ ಹಾಲಿ ಬೆಳೆಗಳನ್ನು ನಾವು ರಕ್ಷಿಸಿದ್ದೇವೆ. ಇದು ಸಮಾಧಾನದ ವಿಷಯ. ರಾಜ್ಯದಲ್ಲಿ ಬರ ಘೋಷಣೆಯಾಗಿದ್ದು, ಮುಂದೆ ಯಾವುದೇ ಬೆಳೆ ಹಾಕಬಾರದು ಎಂದು ರೈತರಿಗೆ ಸೂಚಿಸಿದ್ದೇವೆ. ಮುಂದಿನ ತಿಂಗಳು ಮತ್ತೆ ಮಳೆ ಬೀಳುವ ಸಾಧ್ಯತೆ ಇದೆ. ಈ ವರ್ಷ ಸಂಕಷ್ಟವಿದೆ. ನಾವು ದಿನನಿತ್ಯ ಮಳೆಗಾಗಿ ಪ್ರಾರ್ಥನೆ ಮಾಡುತ್ತಲೇ ಇದ್ದೇವೆ" ಎಂದರು.
ರಾಜ್ಯದಲ್ಲಿ ನೀರಾವರಿ ರಾಜಕೀಯದ ಬಗ್ಗೆ ಕೇಳಿದ ಪ್ರಶ್ನೆಗೆ, "ಮಾಡಲಿ ಬಿಡಿ. ಅವರು ಕೂಡ ಸಾರ್ವಜನಿಕವಾಗಿ ಗುರುತಿಸಿಕೊಳ್ಳಲು ಕೆಲಸ ಬೇಕಲ್ಲವೇ?, ಅವರ ಧ್ವನಿ ನಿಲ್ಲಿಸಲು ಆಗುತ್ತದೆಯೇ?, ನಮ್ಮ ಕೆಲಸ ನಾವು ಮಾಡೋಣ" ಎಂದು ಹೇಳಿದರು. ನದಿ ನೀರಿನ ವಿವಾದವನ್ನು ನಿಮ್ಮಷ್ಟು ಮುಖ್ಯಮಂತ್ರಿಗಳು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ ಎಂಬ ಪ್ರಶ್ನೆಗೆ, "ನೀರಾವರಿ ಸಚಿವನಾಗಿ ನಾನಿದ್ದೇನೆ. ನಾನು ಸಮರ್ಥನೆ ಮಾಡಿಕೊಳ್ಳುತ್ತಿದ್ದೇನೆ" ಎಂದು ತಿಳಿಸಿದರು.