ಕರ್ನಾಟಕ

karnataka

ETV Bharat / state

ಅಶೋಕ್ ತಮ್ಮ ತಟ್ಟೆಯಲ್ಲಿರುವ ಹೆಗ್ಗಣವನ್ನು ಮೊದಲು ತೆಗೆಯಲಿ, ಡಿ.ಕೆ.ಸುರೇಶ್​​ಗೆ ರಾಜಕೀಯ ವೈರಾಗ್ಯವಿಲ್ಲ: ಡಿ.ಕೆ.ಶಿವಕುಮಾರ್ - ಈಟಿವಿ ಭಾರತ ಕನ್ನಡ

ಕೇಂದ್ರ ಸರ್ಕಾರ ಊಹೆಗೂ ಮೀರಿದ ರಾಜ್ಯ ವಿರೋಧಿ ಧೋರಣೆ ತಾಳುತ್ತಿದೆ. ಈ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

dcm-d-k-shivakumar-slams-r-ashok-and-central-govt
ಡಿಸಿಎಂ ಡಿ.ಕೆ. ಶಿವಕುಮಾರ್

By

Published : Jun 19, 2023, 5:31 PM IST

ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ರಾಜ್ಯಕ್ಕೆ ಅಕ್ಕಿ ನೀಡದೇ ಇರುವುದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ಇದರ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.

ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ತೊಂದರೆ ಕೊಡಲು, ಬಡವರಿಗೆ ಅಕ್ಕಿ ನೀಡದಿರಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಪುಕ್ಕಟೆಯಾಗಿ ಅಕ್ಕಿ ನೀಡಿ ಎಂದು ನಾವು ಅವರಿಗೆ ಕೇಳಿರಲಿಲ್ಲ. ಭಾರತೀಯ ಆಹಾರ ಪ್ರಾಧಿಕಾರ ದೇಶದಲ್ಲಿ ರೈತರಿಂದ ದವಸ- ಧಾನ್ಯಗಳನ್ನು ಖರೀದಿ ಮಾಡಿ ದಾಸ್ತಾನು ಮಾಡುವ ವ್ಯವಸ್ಥೆ ಇದೆ. ಸದ್ಯ ದಾಸ್ತಾನಿನಲ್ಲಿ ಅಕ್ಕಿ ಇದ್ದು, ಆರಂಭದಲ್ಲಿ ನೀಡಲು ಒಪ್ಪಿದವರು, ನಂತರ ಅದನ್ನು ನಿರಾಕರಿಸಿದ್ದಾರೆ ಎಂದರು.

ಹೀಗಾಗಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪಕ್ಷದಿಂದ ನಾಳೆ ಪ್ರತಿಭಟನೆ ಮಾಡಲಾಗುತ್ತಿದೆ. ಪಕ್ಷದ ಎಲ್ಲಾ ನಾಯಕರು ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ನಾನು ಕೂಡ ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದೇನೆ ಎಂದು ತಿಳಿಸಿದರು.

ಅಶೋಕ್ ತಮ್ಮ ತಟ್ಟೆಯಲ್ಲಿರುವ ಹೆಗ್ಗಣ ತೆಗೆಯಲಿ :ಆರ್. ಅಶೋಕ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಅಶೋಕ್ ಅವರು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಮೊದಲು ತೆಗೆದುಹಾಕಲಿ. ಅವರ ಪಕ್ಷದಲ್ಲಿನ ನಾಯಕರ ಹೇಳಿಕೆ ಕುರಿತು ಗೊಂದಲ ಬಗೆಹರಿಸಿಕೊಳ್ಳಲಿ. ಮೊದಲು ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲಿ. ನಂತರ ನಮ್ಮ ಪಕ್ಷ, ಮುಖ್ಯಮಂತ್ರಿ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳಲಿ. ಜನ ನಮಗೆ 5 ವರ್ಷಗಳ ಕಾಲ ಅಧಿಕಾರ ನೀಡಿದ್ದು, ಅವರ ನಂಬಿಕೆ ಉಳಿಸಿಕೊಳ್ಳುವುದು ನಮ್ಮ ಗುರಿ ಎಂದರು.

ಸುರೇಶ್ ಅವರ ಹೇಳಿಕೆ ವೈರಾಗ್ಯದ್ದಲ್ಲ :ಡಿ.ಕೆ. ಸುರೇಶ್ ಅವರು ರಾಜಕೀಯ ವೈರಾಗ್ಯದ ಕುರಿತು ಮಾತನಾಡಿರುವ ಬಗ್ಗೆ ಪ್ರತಿಕ್ರಿಯಿಸಿ, ಡಿ.ಕೆ. ಸುರೇಶ್ ಬಹಳ ಪ್ರಜ್ಞಾವಂತ ಹಾಗೂ ಅನುಭವವಿರುವ ನಾಯಕರು. ಅವರಿಗೆ ಹೊಸ ನಾಯಕತ್ವ ಬೆಳೆಸಬೇಕು ಎಂಬ ಆಲೋಚನೆಗಳಿರುತ್ತವೆ. ಅವರಿಗೆ ಯಾವುದೇ ರೀತಿಯ ವೈರಾಗ್ಯವಿಲ್ಲ. ನಿಮ್ಮಷ್ಟಕ್ಕೆ ನೀವೇ ಕಲ್ಪನೆಗಳನ್ನು ಮಾಡಿಕೊಂಡರೆ ಹೇಗೆ? ಎಂದರು.

ಸಂಪುಟ ಸಚಿವರ ದೆಹಲಿ ಪ್ರವಾಸ ಕುರಿತು ಪ್ರತಿಕ್ರಿಯಿಸಿ, ಪಕ್ಷದ ಪ್ರಣಾಳಿಕೆ ಜಾರಿ, ನಾವು ಕೊಟ್ಟ ಮಾತು ಉಳಿಸಿಕೊಳ್ಳಬೇಕು, ಎಚ್ಚರಿಕೆಯಿಂದ ಜನರ ಸೇವೆ ಮಾಡಬೇಕು. ಸಂಸತ್ ಚುನಾವಣೆಯಲ್ಲಿ ಕಾರ್ಯಕರ್ತರ ಸಂಘಟನೆ ಮಾಡಲು ಜಿಲ್ಲಾ ಉಸ್ತುವಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಮತ್ತೆ ಕೆಲವರಿಗೆ ಜವಾಬ್ದಾರಿ ನೀಡಬೇಕಿದೆ. ಉತ್ತಮ ಆಡಳಿತ ನೀಡುವುದು ಸೇರಿದಂತೆ ಅನೇಕ ವಿಚಾರವಾಗಿ ಚರ್ಚೆ ಮಾಡಲಾಗುವುದು. ನಮ್ಮ ನಾಯಕರುಗಳು ನಮ್ಮ ಅಧ್ಯಕ್ಷರು ಹಾಗೂ ಹೈಕಮಾಂಡ್ ಭೇಟಿಗೆ ಕಾಲವಕಾಶ ಕೇಳುತ್ತಿದ್ದರು. ಹೀಗಾಗಿ ಎಲ್ಲರನ್ನು ಒಟ್ಟಿಗೆ ಕರೆಸಲು ನಮ್ಮ ನಾಯಕರು ತೀರ್ಮಾನಿಸಿದ್ದಾರೆ. ಅವರು ಒಂದು ದಿನಾಂಕ ನೀಡಿದ್ದು, ಇನ್ನು ಅಂತಿಮವಾಗಿಲ್ಲ. ಇಂದು ಅಂತಿಮ ದಿನಾಂಕದ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.

ಪರಿಷತ್ ಸ್ಥಾನಗಳ ಆಯ್ಕೆ ವಿಚಾರವಾಗಿ ಮಾತನಾಡಿ, ನಾಮಪತ್ರ ಸಲ್ಲಿಸಲು ನಾಳೆಯವರೆಗೂ ಕಾಲಾವಕಾಶವಿದೆ. ನಮ್ಮ ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳುತ್ತದೆಯೋ ಅದರಂತೆ ಅವಕಾಶ ನೀಡಲಾಗುವುದು. ನಾಮಪತ್ರ ಸಲ್ಲಿಕೆ ಮಾಡುವಾಗ ಯಾರು ನಾಮಪತ್ರ ಸಲ್ಲಿಸಲಿದ್ದಾರೆ ಎಂಬುದು ತಿಳಿಯಲಿದೆ ಎಂದು ತಿಳಿಸಿದರು.

ಮುಖಂಡರ ಭೇಟಿ

ಮುಖಂಡರ ಭೇಟಿ :ರಾಜ್ಯ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷ ಕೆಂಚಪ್ಪಗೌಡ ಮತ್ತು ಪದಾಧಿಕಾರಿಗಳು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಸದಾಶಿವನಗರದ ಗೃಹಕಚೇರಿಯಲ್ಲಿ ಸೋಮವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಖ್ಯಾತ ಉದ್ಯಮಿ ಬಾಬಾ ಕಲ್ಯಾಣಿ ಅವರು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಸೋಮವಾರ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಸಂಸದ ಡಿ.ಕೆ. ಸುರೇಶ್, ಮಾಜಿ ಶಾಸಕ ಅಶೋಕ್ ಖೇಣಿ ಉಪಸ್ಥಿತರಿದ್ದರು.

ಇದನ್ನೂ ಓದಿ :ಅನ್ನಭಾಗ್ಯ ಯೋಜನೆ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್​ ನಾಯಕರ ವಾಗ್ದಾಳಿ

ABOUT THE AUTHOR

...view details