ಬೆಂಗಳೂರು :ಕೋವಿಡ್ನಿಂದಾಗಿ ಇದೀಗ ಶೈಕ್ಷಣಿಕ ಕ್ಷೇತ್ರವೂ ಡಿಜಿಟಲ್ ಮಯವಾಗಿರುವುದು ಗೊತ್ತಿರುವ ವಿಷಯ. ಇದಕ್ಕೆ ಪೂರಕವಾಗಿ ಉನ್ನತ ಶಿಕ್ಷಣ ಇಲಾಖೆ ಸ್ಮಾರ್ಟ್ ಕ್ಲಾಸ್ನತ್ತ ಮುಖ ಮಾಡ್ತಿದೆ. ಕೋವಿಡ್ ಕಾರಣಕ್ಕೆ ಸದ್ಯಕ್ಕೆ ಭೌತಿಕ ತರಗತಿಗಳು ಆರಂಭವಾಗಿಲ್ಲ. ಇತ್ತ ವಿದ್ಯಾರ್ಥಿಗಳ ಆರೋಗ್ಯದ ಜತೆಗೆ ಕಲಿಕೆಯು ಮುಖ್ಯವಾಗಿದ್ದು, ಇದರ ಮೇಲೆ ದುಷ್ಪರಿಣಾಮ ಉಂಟಾಗದಂತೆ ರಾಜ್ಯ ಸರ್ಕಾರ ಡಿಜಿಟಲ್ ಕಲಿಕೆಗೆ ಹೆಚ್ಚು ಒತ್ತು ನೀಡಿದೆ.
ಈ ನಿಟ್ಟಿನಲ್ಲಿ ಇಂದು ನಗರದ ಮಲ್ಲೇಶ್ವರಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಡಿಸಿಎಂ ಅಶ್ವತ್ಥ್ ನಾರಾಯಣ ಉಚಿತ ಟ್ಯಾಬ್ಲೆಟ್ ಪಿಸಿಗಳನ್ನು ವಿತರಿಸಿ ಬಳಿಕ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿದರು. ಈ ವೇಳೆ ಮಾತಾನಾಡಿದ ಅವರು, ಕೆಲ ದಿನಗಳಲ್ಲೇ ರಾಜ್ಯದ ಉನ್ನತ ಶಿಕ್ಷಣ ವಿಭಾಗದಲ್ಲಿರುವ 8,500 ತರಗತಿ ಕೊಠಡಿಗಳನ್ನು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲೇ ಸ್ಮಾರ್ಟ್‌ಕ್ಲಾಸ್ ರೂಂಗಳನ್ನಾಗಿ ಪರಿವರ್ತಿಸಲಾಗುತ್ತದೆ.
ಈ ಪೈಕಿ 2,500 ಕೊಠಡಿಗಳನ್ನು ಈಗಾಗಲೇ ಸ್ಮಾರ್ಟ್‌ಕ್ಲಾಸ್ ರೂಂಗಳನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಜತೆಗೆ ಮಲ್ಲೇಶ್ವರಂ ಸರ್ಕಾರಿ ಕಾಲೇಜಿನಲ್ಲಿಯೂ ಎಲ್ಲ ತರಗತಿ ಕೊಠಡಿಗಳನ್ನು ಸ್ಮಾರ್ಟ್‌ಕ್ಲಾಸ್ ರೂಂಗಳನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದರು. ಕಳೆದ ಶೈಕ್ಷಣಿಕ ವರ್ಷದಲ್ಲಿ 1.10 ಲಕ್ಷ ಲ್ಯಾಪ್ ಟಾಪ್‌ಗಳನ್ನು ಎಲ್ಲ ಪದವಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗಿತ್ತು.