ಬೆಂಗಳೂರು :ಕೊರೊನಾ ಪಾಸಿಟಿವ್ ಸೋಂಕಿತ ಪತ್ರಕರ್ತರೊಬ್ಬರ ಪ್ರಾಥಮಿಕ ಸಂಪರ್ಕದ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್ನಲ್ಲಿದ್ದ ಐವರು ಸಚಿವರಿಗೆ ಕ್ವಾರಂಟೈನ್‌ನಿಂದ ಬಿಡುಗಡೆ ಭಾಗ್ಯ ಲಭಿಸಿದೆ. ಇದರಲ್ಲಿ ಇಬ್ಬರು ಸಚಿವರು ಮುಖ್ಯಮಂತ್ರಿಗಳ ಸುದ್ದಿಗೋಷ್ಠಿಗೆ ಹಾಜರಾಗುವ ಮೂಲಕ ಅಧಿಕೃತವಾಗಿ ಸಚಿವಾಲಯದ ಜವಾಬ್ದಾರಿ ನಿರ್ವಹಣೆ ಆರಂಭಿಸಿದ್ದಾರೆ.
ಏಪ್ರಿಲ್ 20ರಂದು ಖಾಸಗಿ ವಾಹಿನಿ ಪತ್ರಕರ್ತರೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವರಾದ ಸಿ ಟಿ ರವಿ, ಸೋಮಣ್ಣ ಹಾಗೂ ಡಾ.ಸುಧಾಕರ್ ಸ್ವಯಂ ಹೋಂ ಕ್ವಾರಂಟೈನ್ಗೊಳಗಾಗಿದ್ದರು. ಮನೆಯಿಂದಲೇ ಅಧಿಕಾರಿಗಳ ಜೊತೆ ವಿಡಿಯೋ ಸಂವಾದದ ಮೂಲಕ ಸಭೆ ನಡೆಸುತ್ತಿದ್ದರು. ತಮ್ಮ ಕಚೇರಿ ಕೆಲಸವೆಲ್ಲಾ ಹೋಂ ವರ್ಕ್ ರೀತಿ ನಿರ್ವಹಣೆ ಮಾಡಿದ್ದಾರೆ.
ಪತ್ರಕರ್ತನಿಗೆ ಸೋಂಕು ಕಾಣಿಸಿಕೊಂಡ ನಂತರದ 14 ದಿನಗಳ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಕ್ವಾರಂಟೈನ್ ಅವಧಿ ಮುಗಿಸಿದ ಸಚಿವರು, ಇಂದಿನಿಂದ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಮೊದಲ ಹಂತವಾಗಿ ಇಬ್ಬರು ಸಚಿವರು ವಿಧಾನಸೌಧದಲ್ಲಿ ಪ್ರತ್ಯಕ್ಷವಾಗಿ ಸಿಎಂ ನಡೆಸಿದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಆ ಮೂಲಕ ಅಧಿಕೃತವಾಗಿ ಮತ್ತೆ ಸಚಿವಾಲಯದಿಂದಲೇ ಕೆಲಸ ಆರಂಭಿಸಿದರು.
ಡಿಸಿಎಂ ಡಾ.ಅಶ್ವತ್ಥ್ ನಾರಾಯಣ್.. ಈ ಕುರಿತು ಈಟಿವಿ ಭಾರತ್ ಜೊತೆ ಎಕ್ಸ್ಕ್ಲೂಸಿವ್ ಆಗಿ ಮಾತನಾಡಿದ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ್, ನಾವು ಸಾಮಾಜಿಕ ಅಂತರ ಪಾಲಿಸಿಕೊಂಡೇ ಕೆಲಸ ಮಾಡುತ್ತಿದ್ದೇವೆ. ಆದರೂ ಇತರರಿಗೆ ನಾವೂ ಮಾದರಿಯಾಗಬೇಕು ಎನ್ನುವ ಕಾರಣಕ್ಕೆ ನಾವು ಸ್ವಯಂ ಕ್ವಾರಂಟೈನ್ ಆಗಿದ್ದೆವು. ಕ್ವಾರಂಟೈನ್‌ನಿಂದ ನನಗೂ ವರ್ಕ್ ಫ್ರಂ ಹೋಂ ಸಿಕ್ತು. ಕ್ವಾರಂಟೈನ್ ಒಳ್ಳೆಯ ಅನುಭವ ನೀಡಿತು ಎಂದರು.
ಅಲ್ಲದೇ ನಮಗೆ ಎಲ್ಲಿದ್ದರೂ ಕೆಲಸವೇ, ಮನೆಯಲ್ಲಿದ್ದೇ ಜವಾಬ್ದಾರಿ ನಿರ್ವಹಿಸಿದ್ದೇನೆ. ಏಪ್ರಿಲ್ 20ಕ್ಕೆ ಪಾಸಿಟಿವ್ ದೃಢಪಟ್ಟಿತ್ತು. ನಾವು 14 ದಿನ ಕಳೆಯುವವರೆಗೂ ಕ್ವಾರಂಟೈನ್ ಇದ್ದು ಈಗ ಕರ್ತವ್ಯಕ್ಕೆ ಹಾಜರಾಗಿದ್ದೇನೆ ಎಂದರು. ಸರ್ಕಾರ ಕೊರೊನಾ ವಾರಿಯರ್ಸ್ಗೆ ಮುಂಜಾಗ್ರತಾ ಕ್ರಮವಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ತೆಗೆದುಕೊಳ್ಳಲು ಹೇಳಿದೆ. ಕೋವಿಡ್-19 ಸೋಂಕಿತರ ಸಮೀಪದಲ್ಲಿ ಅಥವಾ ಮೊದಲ ಸಾಲಿನಲ್ಲಿ ಕೆಲಸ ಮಾಡುವವರು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದೆ. ಆದರೂ ನಾನು ಈ ಮಾತ್ರೆ ತೆಗೆದುಕೊಳ್ಳುತ್ತಿಲ್ಲ. ಅದರ ಅಗತ್ಯವಿಲ್ಲ, ಹಾಗಾಗಿ ಬೇರೆಯವರಿಗೂ ಅದನ್ನು ಶಿಫಾರಸು ಮಾಡಲ್ಲ ಎಂದರು.