ಕರ್ನಾಟಕ

karnataka

ETV Bharat / state

ನಾವು ಗಂಡಸರಲ್ಲ, ಅವರೋಬ್ಬರೇ ಗಂಡಸರು. ಹೀಗಾಗಿ ನಮಗೆ ಭಯ ಆಗುತ್ತಿದೆ: ಡಿಕೆಶಿ

ಕುಂಬಳಕಾಯಿ ಕಳ್ಳ ಅಂದ್ರೆ ಅಶ್ವಥ್ ನಾರಾಯಣ್ ಹೆಗಲು ಮುಟ್ಟಿ ನೋಡಿಕೊಂಡಿದ್ದೇಕೆ?. ಅವರು ದೊಡ್ಡವರು, ದೊಡ್ಡವರಾಗಬೇಕು ಎಂದುಕೊಂಡಿರುವವರು. ಅವರ ವಿಚಾರವನ್ನು ನಾನು ಬಿಚ್ಚಿಡಲಿಲ್ಲ..

D. K. Shivakumar
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

By

Published : May 2, 2022, 3:34 PM IST

Updated : May 2, 2022, 7:05 PM IST

ಬೆಂಗಳೂರು: ನನಗೆ ಬಂದಿರುವ ಮಾಹಿತಿ ಪ್ರಕಾರ ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಸಚಿವರ ತಮ್ಮ ಅಂತಾ ಅಲ್ಲ, ಸಚಿವರ ಸಂಬಂಧಿ ಭಾಗಿಯಾಗಿದ್ದಾರೆ ಅನ್ನೋದು ಗೊತ್ತಾಗಿದೆ. ಇದು ಸತ್ಯವಿರಬಹುದು, ಇಲ್ಲದಿರಬಹುದು. ಒಂದೇ ತಾಲೂಕಿನ ಮೂವರು ಈ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದು, ಅವರು ಆಸ್ತಿ ಮಾರಿ ಹಣ ನೀಡಿರುವುದು ಇಡೀ ಊರಿಗೆ ಗೊತ್ತಿರುವ ವಿಚಾರ. ಈ ವಿಚಾರವಾಗಿ ನಾನು ನೊಟೀಸ್ ಪಡೆಯುವ ಅಗತ್ಯವಿರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನನಗೆ ಸಾಕಷ್ಟು ಕರೆಗಳು ಬರುತ್ತಿದ್ದು, ಆಯ್ಕೆಯಾಗಿದ್ದ ಅಭ್ಯರ್ಥಿ ತಂದೆ ಈ ರೀತಿ ಆಯ್ತಲ್ಲಾ ಎಂದು ಹಾಸಿಗೆ ಹಿಡಿದಿದ್ದಾರೆ. ಮತ್ತೊಬ್ಬರನ್ನು ಪ್ರಭಾವಿ ವ್ಯಕ್ತಿಗಳ ಪ್ರಭಾವ ಬಳಸಿ ಪೊಲೀಸರ ತನಿಖೆಯಿಂದ ಬಿಡಿಸಲಾಗಿದೆ. ಆ ಪ್ರಭಾವ ಬೀರಿದವರು ಯಾರು ಎಂಬುದು ನನಗೆ ಗೊತ್ತಿಲ್ಲ. ಈ ವಿಚಾರವಾಗಿ ನಾನು ಮಾತನಾಡುವುದಿಲ್ಲ ಎಂದು ಹೇಳಿದರು.

ನಾವು ಗಂಡಸರಲ್ಲ, ಅವರೋಬ್ಬರೇ ಗಂಡಸರು. ಹೀಗಾಗಿ ನಮಗೆ ಭಯ ಆಗುತ್ತಿದೆ

ಸಿಐಡಿಯವರು ಎಷ್ಟು ಪ್ರಾಮಾಣಿಕವಾಗಿ ಈ ಪ್ರಕರಣದ ತನಿಖೆ ಮಾಡುತ್ತಾರೆ ಎಂಬುದು ಈಗ ಬಹಳ ಮುಖ್ಯ. ನಾವು ಸರ್ಕಾರದ ವೈಫಲ್ಯಗಳ ಬಗ್ಗೆ ಮಾತನಾಡಿದರೆ, ಮುಖ್ಯಮಂತ್ರಿಗಳು ನಾವು ರಭಸವಾಗಿ ಆಡಳಿತ ಮಾಡಿದರೆ ಶಿವಕುಮಾರ್ ಉಸಿರು ನಿಂತು ಹೋಗುತ್ತದೆ ಎಂದು ಹೇಳುತ್ತಾರೆ. ಮತ್ತೊಂದು ಕಡೆ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರು, ಇಲ್ಯಾರೂ ಗಂಡಸರಿಲ್ಲ ಎಂದು ಸವಾಲು ಹಾಕುತ್ತಾರೆ. ನಾವು ಗಂಡಸರಲ್ಲ, ಅವರೊಬ್ಬರೇ ಗಂಡಸರು. ಹೀಗಾಗಿ ನಮಗೆ ಭಯ ಆಗುತ್ತಿದೆ ಎಂದು ವ್ಯಂಗ್ಯವಾಡಿದರು.

ಪ್ರಭಾವಿಗಳನ್ನು ರಕ್ಷಿಸುವ ಹುನ್ನಾರ: ಸರ್ಕಾರ ತನಿಖೆ ಮಾಡಿ ಇದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂದು ಪ್ರಕಟಿಸುವ ಮುನ್ನವೇ ಪರೀಕ್ಷೆ ರದ್ದು ಮಾಡಿ ಮರು ಪರೀಕ್ಷೆಗೆ ಆದೇಶಿಸಿದ್ದಾರೆ. ಈ ನಿರ್ಧಾರದ ಮೂಲಕ ಸರ್ಕಾರ ಕಾನೂನು ವ್ಯಾಜ್ಯಕ್ಕೆ ದಾರಿ ಮಾಡಿಕೊಡುತ್ತಿದೆ. ಜತೆಗೆ ಪ್ರಭಾವಿಗಳನ್ನು ರಕ್ಷಿಸುವ ಹುನ್ನಾರವಿದೆ. ಪೊಲೀಸ್ ಇಲಾಖೆಗೆ ಮುಖ್ಯಸ್ಥರಾಗಿರುವ ಪೊಲೀಸ್ ಮಹಾನಿರ್ದೇಶಕರೇ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಪೊಲೀಸ್ ಮಹಾನಿರ್ದೇಶಕರು, ಗೃಹ ಸಚಿವರ ಹೇಳಿಕೆಗಳು ಭಿನ್ನವಾಗಿರುವುದು ಉತ್ತಮ ಆಡಳಿತವೇ? ಯಾರೋ ಕರೆ ಮಾಡಿದರು ಎಂದು ವಿಚಾರಣೆ ಮಾಡದೇ ಆರೋಪಿಗಳನ್ನು ಬಿಟ್ಟು ಕಳುಹಿಸುವುದು ಎಷ್ಟು ಸರಿ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.

ಆರೋಪಿಗಳು ಯಾರೇ ಆಗಿದ್ದರೂ ಕ್ರಮಕೈಗೊಳ್ಳಲಿ: ಮುಖ್ಯಮಂತ್ರಿಗಳಿಗೆ ಬದ್ಧತೆ ಇದ್ದಲ್ಲಿ ಈ ಪ್ರಕರಣದಲ್ಲಿ ಯಾರೆ ಭಾಗಿಯಾಗಿದ್ದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅದು ಬಿಜೆಪಿ ಶಾಸಕರು, ನಾಯಕರು, ಮಂತ್ರಿಗಳಾಗಿರಲಿ, ಕಾಂಗ್ರೆಸ್, ಜೆಡಿಎಸ್ ನವರಾಗಿರಲಿ, ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು.ಅಭ್ಯರ್ಥಿಯಿಂದ ಹಣ ಪಡೆದವರ ವಿಚಾರಣೆ ಮಾಡದಂತೆ ಒತ್ತಡ ಹಾಕಿದವರು ಯಾರು? ಎಂಬ ವಿಚಾರವಾಗಿ ಮುಖ್ಯಮಂತ್ರಿಗಳು ಮಾಹಿತಿ ಪಡೆಯಬೇಕು ಎಂದು ಒತ್ತಾಯಿಸಿದರು.

ಆರೋಪಿಗಳು ಯಾರೇ ಆಗಿದ್ದರೂ ಕ್ರಮಕೈಗೊಳ್ಳಲಿ

ಮುಂದೆ ಮುಖ್ಯಮಂತ್ರಿ ಆಗುವವರು ಪ್ರಕರಣ ಮುಚ್ಚಿಹಾಕಿ: ಈ ಪ್ರಕರಣದಲ್ಲಿ ಸರ್ಕಾರ ಏನು ಮಾಡುತ್ತದೆ ಎಂದು ಕಾದು ನೋಡುತ್ತೇವೆ. ನಂತರ ನಾವು ಮಾತನಾಡುತ್ತೇವೆ. ನನಗೂ ಅನೇಕರು ಫೋನ್ ಕರೆ ಮಾಡಿ ಅವರು ಮುಂದೆ ಮುಖ್ಯಮಂತ್ರಿ ಆಗುವವರು, ಅವರ ಹೆಸರು ಎಳೆದು ತರಬೇಡಿ, ಮುಚ್ಚಿಹಾಕಿ ಎಂದು ಹೇಳುತ್ತಿದ್ದಾರೆ. ಬೇಕಾದರೆ ನನ್ನ ಫೋನ್ ಕರೆ ವಿವರ ಪರಿಶೀಲಿಸಿ. ಮಂಡ್ಯದ ನಾಯಕರೊಬ್ಬರು ನನಗೆ ಕರೆ ಮಾಡಿ ಈ ವಿಚಾರದ ಬಗ್ಗೆ ಮಾತನಾಡಬೇಡಿ ಎಂದು ಹೇಳುತ್ತಿದ್ದಾರೆ. ಬಿಜೆಪಿಯವರು ನಾಯಕತ್ವ ಬದಲಾವಣೆ ಮಾಡುವ ವಿಚಾರ ಅವರಿಗೆ ಬಿಟ್ಟದ್ದು, ಆ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ದೂರಿದರು.

ಕುಂಬಳಕಾಯಿ ಕಳ್ಳ ಅಂದ್ರೆ ಅಶ್ವತ್ಥ್​​ ನಾರಾಯಣ್ ಹೆಗಲು ಮುಟ್ಟಿ ನೋಡಿಕೊಂಡಿದ್ದೇಕೆ?

ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡು ನೋಡಿಕೊಂಡಿದ್ದೇಕೆ?:ಕುಂಬಳಕಾಯಿ ಕಳ್ಳ ಅಂದ್ರೆ ಅಶ್ವಥ್ ನಾರಾಯಣ್ ಹೆಗಲು ಮುಟ್ಟಿ ನೋಡಿಕೊಂಡಿದ್ದೇಕೆ?. ಅವರು ದೊಡ್ಡವರು, ದೊಡ್ಡವರಾಗಬೇಕು ಎಂದುಕೊಂಡಿರುವವರು. ಅವರ ವಿಚಾರವನ್ನು ನಾನು ಬಿಚ್ಚಿಡಲಿಲ್ಲ. ಮಾಧ್ಯಮಗಳು ಮಾಗಡಿಯ ಮೂವರು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಹೇಳಿದಾಗ ಸಂತೋಷವಾಗಿತ್ತು. ಆನಂತರ ನಮ್ಮ ಪಕ್ಷದಲ್ಲಿದ್ದ ಕಾರ್ಯಕರ್ತರ ಕುಟುಂಬದವರು ಆಗಿದ್ದಾರೆ ಎಂದು ಹೇಳಿದ್ದು ಕೇಳಿ ಖುಷಿ ಆಯ್ತು. ಪರಿಸ್ಥಿತಿ ಹೀಗಿರುವಾಗ ಅನುಮಾನಗಳೆಲ್ಲವೂ ತಮ್ಮ ವಿರುದ್ಧವೇ ತಿರುಗುತ್ತಿದೆ ಎಂದು ಸಚಿವರು ಯಾಕೆ ಭಾವಿಸುತ್ತಿದ್ದಾರೆ? ಎಂದು ಪ್ರಶ್ನಿಸಿದರು.

ಅಧಿಕಾರದ ದರ್ಪ ಹಾಗೂ ಭ್ರಷ್ಟಾಚಾರ ಡಿ.ಕೆ. ಶಿವಕುಮಾರ್ ಅವರ ಕುಟುಂಬದಲ್ಲಿದೆ ಎಂಬ ಹೇಳಿಕೆ ಬಗ್ಗೆ ಉತ್ತರಿಸಿದ ಅವರು, ಹೆಣದಲ್ಲಿ ಹಣ, ಸಹಾಯಕ ಪ್ರಾಧ್ಯಾಪಕ ಹುದ್ದೆ ಅಕ್ರಮ ಇವುಗಳನ್ನೆಲ್ಲಾ ನಾನು ಮಾಡಿದ್ದೀನಾ? ಈಗ ಸಾಲು ಸಾಲು ಹಗರಣಗಳು ಬೆಳಕಿಗೆ ಬಂದವಲ್ಲಾ? ಅದನ್ನು ನಾವು ಮಾಡಿದ್ದೇವಾ? ನಮ್ಮ ಸರ್ಕಾರದಲ್ಲಿ ಈ ರೀತಿ ಆಗಿದೆಯಾ? ನಾವು ಕೇಳುತ್ತಿರುವುದು ಪಿಎಸ್ಐ ಅಕ್ರಮದ ಬಗ್ಗೆ ತನಿಖೆ ಮಾಡಿ, ನಂತರ ತೀರ್ಮಾನಿಸಿ ಎಂದು. ದರ್ಶನ್ ಗೌಡಗೆ ನೊಟೀಸ್ ಜಾರಿ ಮಾಡಿದ್ದೀರಿ. ಅವನ ವಿಚಾರಣೆ ಮಾಡಿದ ವರದಿ ಬಂದಿಲ್ಲ. ಆತ ಏಕಾಏಕಿ ಬಿಡುಗಡೆಯಾದ ಎಂದರೆ ಆತ ನಿರ್ದೋಷಿ ಎಂದು ಸಾಬೀತಾಯ್ತಾ? ಅವನ ವಿರುದ್ಧ ಯಾವ ರೀತಿ ತನಿಖೆ ನಡೆದಿದೆ? ಆತ ವಿಚಾರಣೆ ಮುಕ್ತನಾಗಲು ಯಾರು ಕಾರಣ? ಇದರ ಹಿನ್ನೆಲೆ ಏನು?ಯಾರು? ಮಾಧ್ಯಮಗಳು ನಿಮಗೆ ಬರುವ ಮಾಹಿತಿ ಎಲ್ಲಿಂದ ಬಂದಿದೆ ಎಂದು ಮೂಲದ ಬಗ್ಗೆ ಹೇಳುತ್ತೀರಾ? ನಾವು ನಮಗೆ ಯಾರು ಕರೆ ಮಾಡಿ ಹೇಳಿದ್ದಾರೆ ಎಂದು ಹೇಳಲು ಸಾಧ್ಯವೇ? ಸಮಯ ಬಂದಾಗ ಅದನ್ನೂ ಮಾಡುತ್ತೇವೆ’ ಎಂದರು.

ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳುವ ಭರವಸೆ ಕೊಟ್ಟರೆ ನೀವು ಆ ಸಚಿವರ ಹೆಸರು ಹೇಳುತ್ತೀರಾ ಎಂಬ ಪ್ರಶ್ನೆಗೆ, ‘ಇಲ್ಲಿ ಮುಚ್ಚುಮರೆ ಇಲ್ಲ. ಭ್ರಷ್ಟಾಚಾರ, ಸುಳ್ಳು, ಕೆಮ್ಮು ಹಾಗೂ ಇತರೆ ವಿಚಾರವನ್ನು ಬಚ್ಚಿಡಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಲಂಚ ನೀಡುವಾಗ ಆಸ್ತಿ ಮಾರಬೇಕು, ಇಲ್ಲವೇ ಸಾಲ ಮಾಡಬೇಕು. ಇದೆಲ್ಲವೂ ಆಚೆಗೆ ಬರುತ್ತದೆಯಲ್ಲವೇ?. 40% ಕಮಿಷನ್ ವಿಚಾರದಲ್ಲಿ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ನಂತರ ಅನೇಕರು ನಾವು ಆತನಿಗೆ ಇಷ್ಟಿಷ್ಟು ಹಣ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ. ಹೀಗೆ ಹಲವು ಪ್ರಕ್ರಿಯೆಗಳಿರುತ್ತವೆ. ತನಿಖೆಯಲ್ಲಿ ಬಯಲಾಗುವುದಂತು ಖಂಡಿತ ಎಂದು ಡಿಕೆಶಿ ಹೇಳಿದರು.

ಇದನ್ನೂ ಓದಿ:ಹಗರಣ ಮಾಡುವ, ಶಾಂತಿ ಕದಡುವ RSS, ಭಜರಂಗ ದಳದ ಮೇಲೆ ನಿಮ್ಮ ಹಾರ್ಡ್‌ ಅಸ್ತ್ರ ಬಳಸಿ.. ಸಿಎಂಗೆ ತಿವಿದ ಹೆಚ್.ವಿಶ್ವನಾಥ್

Last Updated : May 2, 2022, 7:05 PM IST

ABOUT THE AUTHOR

...view details