ಬೆಂಗಳೂರು:ಕೊಲೆ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳಿಗೆ ವಿಧ್ವಂಸಕ ಕೃತ್ಯವೆಸಗಲು ಉಗ್ರ ಟಿ ನಜೀರ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ತರಬೇತಿ ನೀಡುತ್ತಿದ್ದ ಎಂಬ ಆತಂಕಕಾರಿ ವಿಷಯ ಸಿಸಿಬಿ ತನಿಖೆಯಲ್ಲಿ ಬಯಲಾದ ಬೆನ್ನಲ್ಲೇ ಒಳ ಉಡುಪಿನಲ್ಲಿ ಜೈಲಿನೊಳಗೆ ಮೊಬೈಲ್ ಸಾಗಿಸುತ್ತಿದ್ದ ಡಿ ದರ್ಜೆ ನೌಕರ ಸಿಬ್ಬಂದಿ ಸಿಕ್ಕಿ ಬಿದ್ದಿದ್ದಾನೆ.
ಪೊಲೀಸ್ ತಪಾಸಣೆ ವೇಳೆ ಒಳಉಡುಪಿನಲ್ಲಿ ಜೈಲಿನೊಳಗೆ ಸಾಗಿಸುತ್ತಿದ್ದ 52 ವರ್ಷದ ಭಾನುಪ್ರಕಾಶ್ ಸಿಕ್ಕಿಬಿದ್ದಿದ್ದು, ಜೈಲಿನ ಅಧೀಕಕ್ಷ ಮಲ್ಲಿಕಾರ್ಜುನ ಎಂಬುವರು ನೀಡಿದ ದೂರಿನ ಮೇರೆಗೆ ಬಂಧಿಸಲಾಗಿದೆ. ಡಿ ದರ್ಜೆ ನೌಕರನಾಗಿರುವ ಭಾನುಪ್ರಕಾಶ್ ನಿತ್ಯ ಪೊಲೀಸ್ ವಾಹನಗಳನ್ನ ಸ್ವಚ್ಛತೆ ಮಾಡುತ್ತಿದ್ದ. ಇದೇ ತಿಂಗಳು 25ರಂದು ಜೈಲಿನೊಳಗೆ ಪ್ರವೇಶಿಸುವಾಗ ಭದ್ರತಾ ತಪಾಸಣಾ ವೇಳೆ ಒಳ ಉಡುಪಿನಲ್ಲಿ ಮೊಬೈಲ್ ಇಟ್ಟುಕೊಂಡಿರುವುದು ಗೊತ್ತಾಗಿದೆ.
ಆರೋಪಿ ಹೇಳಿಕೆಯ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ: ಈ ಬಗ್ಗೆ ಪ್ರಶ್ನಿಸಿದಾಗ ಅನುಮಾನಸ್ಪಾದವಾಗಿ ಹೇಳಿಕೆ ನೀಡಿದ್ದರು. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಕಡಿಮೆ ಬೆಲೆಯ ಬೇಸಿಕ್ ಸೆಟ್ ಮೊಬೈಲ್ ಖರೀದಿಸಿದ್ದು, ಮರೆತು ಒಳ ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡಿದ್ದೆ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ. ಆರೋಪಿ ಹೇಳಿಕೆ ಸತ್ಯಾಸತ್ಯತೆ ಬಗ್ಗೆ ಪರಿಶೀಲಿಸಲಾಗುತ್ತಿದ್ದು, ಸಿಬ್ಬಂದಿಯು ಕೈದಿಗಳೊಂದಿಗೆ ಸಂಪರ್ಕ ಹೊಂದಿದ್ದನಾ? ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.