ಕರ್ನಾಟಕ

karnataka

ಡಿ.ಜೆ ಹಳ್ಳಿಯಲ್ಲಿ ಕರ್ಫ್ಯೂ ಜಾರಿ : ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ, ಪರಿಶೀಲನೆ

By

Published : Aug 12, 2020, 11:48 AM IST

ಗಲಭೆ ನಡೆದ ಡಿ.ಜೆ ಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಕರ್ಪ್ಯೂ ಜಾರಿಗೊಳಿಸಲಾಗಿದ್ದು, ಯಾವುದೇ ಅಂಗಡಿ ಮುಂಗಟ್ಟುಗಳನ್ನು ತೆರೆಯುವಂತಿಲ್ಲ, ಸುಖಾ ಸುಮ್ಮನೆ ರಸ್ತೆಯಲ್ಲಿ ಓಡಾಡುವಂತಿಲ್ಲ. ಅನಗತ್ಯ ಓಡಾಟ ನಡೆಸುವವರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

Curfew in DJ Halli of Bengaluru
ಡಿ.ಜೆ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿ

ಬೆಂಗಳೂರು :ಗಲಭೆ ನಡೆದ ಬಳಿಕ ನಗರದ ಡಿ.ಜೆ ಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿದೆ. ಸ್ಥಳದಲ್ಲಿ ತೀವ್ರ ಕಟ್ಟೆಚರ ವಹಿಸಲಾಗಿದೆ.

ಸದ್ಯ, ಕರ್ಪ್ಯೂ ಜಾರಿಗೊಳಿಸಲಾಗಿದ್ದು, ಯಾವುದೇ ಅಂಗಡಿ ಮುಂಗಟ್ಟುಗಳು ತೆರೆಯುವಂತಿಲ್ಲ, ಸುಖಾ ಸುಮ್ಮನೆ ರಸ್ತೆಯಲ್ಲಿ ಓಡಾಡುವಂತಿಲ್ಲ. ಅನಗತ್ಯ ಓಡಾಟ ನಡೆಸುವವರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ. ಡಿ.ಜೆ. ಹಳ್ಳಿ ಪೊಲೀಸ್​ ಠಾಣೆಗೆ ನಗರ ಜಿಲ್ಲಾಧಿಕಾರಿ ಶಿವಮೂರ್ತಿ ಹಾಗೂ ಡಿಸಿಪಿಗಳು ಭೇಟಿ ನೀಡಿ ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದಾರೆ.

ಗಲಭೆ ವೇಳೆ ಗಾಯಗೊಂಡವರಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನೀಡಲಾಗ್ತಿದೆ. ಸುಮಾರು 20 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಣ್ಣ ಪುಟ್ಟ ಗಾಯಗಳಾದವರಿಗೆ ನಿನ್ನೆಯೇ ಚಿಕಿತ್ಸೆ ಕೊಡಿಸಿ ವಶಕ್ಕೆ ಪಡೆಯಲಾಗಿದೆ. ಒಬ್ಬ ವ್ಯಕ್ತಿಗೆ ರಕ್ತಸ್ರಾವ ಆಗಿದ್ದು, ಆತನನ್ನು ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಬ್ಬನ ಭುಜಕ್ಕೆ ಗುಂಡು ತಾಗಿ ಗಂಭೀರವಾಗಿ ಗಾಯವಾಗಿದೆ. ಮತ್ತೊಬ್ಬನ ಕಾಲಿಗೆ ಕಲ್ಲೇಟು ಬಿದ್ದು ಮೂಳೆ ಮುರಿತವಾಗಿದೆ.

ಪೊಲೀಸರ ಗುಂಡಿಗೆ ವಾಜಿದ್ ಖಾನ್ (20), ಯಾಸೀಮ್ ಪಾಷಾ (22), ವಾಸಿಂ (40) ಮೃತಪಟ್ಟಿದ್ದಾರೆ.‌ ಬೌರಿಂಗ್ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಯಲಿದೆ. ಪೊಲೀಸ್​ ಗುಂಡಿಗೆ ಬಲಿಯಾದವರ ವಿಧಿ ವಿಜ್ಞಾನ ತಜ್ಞರು ಮರಣೋತ್ತರ ಪರೀಕ್ಷೆ ನಡೆಸುವುದು ಕಡ್ಡಾಯ. ಹೀಗಾಗಿ ಆಸ್ಪತ್ರೆಯ ಡೀನ್ ಡಾ. ಮನೋಜ್ ರಾತ್ರಿಯೇ ಹೆಚ್ಚುವರಿ ವೈದ್ಯರು ಮತ್ತು ನರ್ಸ್​ಗಳ ನಿಯೋಜನೆ ಹಾಗೂ ವೆಂಟಿಲೇಟರ್​ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಆಸ್ಪತ್ರೆಯ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಘಟನೆಯಲ್ಲಿ ಸುಮಾರು 100 ಕ್ಕೂ ಅಧಿಕ ಪೊಲೀಸ್​ ಸಿಬ್ಬಂದಿಗೆ ಗಾಯವಾಗಿದ್ದು, ಓರ್ವ ಕಾನ್​ಸ್ಟೇಬಲ್​ ತಲೆಗೆ ಗಂಭೀರ ಗಾಯವಾಗಿದೆ, ಚಿಕಿತ್ಸೆ ನೀಡಲಾಗ್ತಿದೆ. ಎಲ್ಲ ಆಸ್ಪತ್ರೆಗಳಲ್ಲೂ ವಿಶೇಷ ವಾರ್ಡ್​ಗಳ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಇಂದೂ ಕೂಡ ಮತ್ತಷ್ಟು ಗಾಯಾಳುಗಳು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಇದೆ. ಮತ್ತೊಂದೆಡೆ ಪೊಲೀಸರಿಗೆ ಭಯಬಿದ್ದು ಅನೇಕರು ಮನೆ ಸೇರಿದ್ದಾರೆ.

ABOUT THE AUTHOR

...view details