ಬೆಂಗಳೂರು:''ಸುಳ್ಳು ನಮ್ಮಲ್ಲಿಲ್ಲವಯ್ಯ, ಸುಳ್ಳೇ ನಮ್ಮನೆ ದೇವರು ಎಂಬ ವಾಕ್ಯ ಸಿಎಂ ಸಿದ್ದರಾಮಯ್ಯ ಮುಖಕ್ಕೆ ಹಿಡಿದ ಕನ್ನಡಿಯಂತಿದೆ'' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತೀವ್ರ ವಾಗ್ದಾಳಿ ನಡೆಸಿದರು. ಈ ಸಂಬಂಧ ಟ್ವೀಟಾಸ್ತ್ರ ಪ್ರಯೋಗಿಸಿರುವ ಅವರು, ''ಪ್ರಧಾನಿ ಮೋದಿಯವರ ಸರಕಾರದ ಗರೀಬ್ ಕಲ್ಯಾಣ್ ಯೋಜನೆಯ ಮೂಲಕ ದೇಶದ ಎಲ್ಲ ಬಿಪಿಎಲ್ ಕುಟುಂಬಗಳಿಗೆ ನೀಡುವ ಐದು ಕೆಜಿ ಅಕ್ಕಿ ತಮ್ಮದೆಂದು ಯಾವುದೇ ಮುಜುಗರವಿಲ್ಲದೇ ಸುಳ್ಳು ಹೇಳುವುದು. "ಸುಳ್ಳೇ ನಿಮ್ಮನೆ ದೇವರು ಎಂಬುದಕ್ಕೆ ಸಾಕ್ಷಿಯಾಗಿದೆ'' ಎಂದು ಕಿಡಿ ಕಾರಿದ್ದಾರೆ.
''ಸಿದ್ದರಾಮಯ್ಯನವರೇ ರಾಜ್ಯದ ಜನತೆಗೆ ನೀವು ಕೊಡಬೇಕಾಗಿರುವುದು ಕೇಂದ್ರ ಸರಕಾರ ನೀಡುತ್ತಿರುವ ಐದು ಕೆಜಿ ಅಕ್ಕಿಯನ್ನು ಹೊರತುಪಡಿಸಿ ನೀವು ನೀಡಿದ ಗ್ಯಾರಂಟಿಯ 10 ಕೆಜಿ ಅಕ್ಕಿ. ಹಿಂದಿನ ಬಾರಿಯಂತೆ ಅಕ್ಕಿ ನಿಂದು ಚೀಲ ನಂದು ಎಂದು ಜನರನ್ನು ಮೋಸ ಮಾಡಲು ಸಾಧ್ಯವಿಲ್ಲ'' ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:ಗ್ರಾಮೀಣ ಪ್ರದೇಶದ ನಿವಾಸಿಗಳಿಗೆ ಕುಡಿಯುವ ನೀರು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಿ: ಸಚಿವ ಮಧು ಬಂಗಾರಪ್ಪ
ಸಿದ್ದರಾಮಯ್ಯ ವಿರುದ್ಧ ಬಿ.ವೈ. ವಿಜಯೇಂದ್ರ ಕಿಡಿ:''ಸಿಎಂ ಸಿದ್ದರಾಮಯ್ಯ ಅಪಪ್ರಚಾರವನ್ನೇ ಬಲವಾಗಿ ನಂಬಿರುವಂತೆ ಕಾಣುತ್ತಿದೆ. ಸುಳ್ಳನ್ನು ಸಾವಿರ ಬಾರಿ ಹೇಳಿ ಸತ್ಯವಾಗಿಸುವುದರಲ್ಲಿ ನಂಬಿಕೆ ಇಟ್ಟಂತಿದೆ'' ಎಂದು ಬಿ.ವೈ.ವಿಜಯೇಂದ್ರ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.
''ಸಿದ್ದರಾಮಯ್ಯನವರೇ ಅಂತ ತಪ್ಪು ಕಲ್ಪನೆಯಲ್ಲಿರಬೇಡಿ. ನಿಮ್ಮ ನಿರಂತರ ಸುಳ್ಳುಗಳನ್ನು ನಂಬಲು ರಾಜ್ಯದ ಜನರು ಮೂರ್ಖರಲ್ಲ. ನೀವು ಮೋದಿ ಸರ್ಕಾರ ನೀಡುತ್ತಿರುವ ಉಚಿತ 5 ಕೆಜಿ ಅಕ್ಕಿ ಹೊರತಾಗಿ 10 ಕೆಜಿ ಅಕ್ಕಿ ನೀಡುವುದಾಗಿ ನೀವು ಘೋಷಿಸಿದ್ದೀರಿ. ಆ ಭರವಸೆಯನ್ನು ಈಡೇರಿಸಿ, ಅದನ್ನು ಯಾವಾಗ ಕೊಡುತ್ತೀರಿ ಅನ್ನೋದನ್ನು ತಿಳಿಸಿ. ಗ್ಯಾರಂಟಿಗಳ ಜಾರಿಯಲ್ಲಿ ಆಗುತ್ತಿರುವ ವಿಳಂಬದಿಂದ ರಾಜ್ಯದ ಜನರು ರೋಸಿಹೋಗಿದ್ದಾರೆ'' ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ:ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ಧ ಎಫ್ಐಆರ್ ದಾಖಲು
ಸಿಎಂ ಸಿದ್ದರಾಮಯ್ಯ ತಿರುಗೇಟು:ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ''ಅನ್ನಭಾಗ್ಯ ಕಾರ್ಯಕ್ರಮಕ್ಕೆ 5 ಕೆಜಿ ಅಕ್ಕಿ ನೀಡುತ್ತಿದ್ದೇವೆ. ಒಟ್ಟು 10 ಕೆಜಿ ಅಕ್ಕಿ ನೀಡುವುದಾಗಿ ಹೇಳಿದ್ದೆವು. 2.29 ಲಕ್ಷ ಮೆ. ಟನ್ ಅಕ್ಕಿ ಅಗತ್ಯವಿದೆ. ಅಷ್ಟು ಅಕ್ಕಿ ನಮಗೆ ದೊರೆಯುತ್ತಿಲ್ಲ. ಕೇಂದ್ರ ಸರ್ಕಾರದ ಅಧೀನದ ಎಫ್ಸಿಐ ಅಧಿಕಾರಿಗಳು ಮೊದಲಿಗೆ ಅಕ್ಕಿ ನೀಡುವುದಾಗಿ ಒಪ್ಪಿ ನಂತರ ಕೊಡಲಾಗುವುದಿಲ್ಲ ಎಂದು ಪತ್ರ ಬರೆದಿದ್ದಾರೆ. ಅಕ್ಕಿಯ ದಾಸ್ತಾನು ಇದ್ದರೂ ಕೊಡುತ್ತಿಲ್ಲ. ಈ ಬಗ್ಗೆ ಆಹಾರ ಇಲಾಖೆ ಮೂಲಕ ಹೇಳಿ ಬರೆಸಿದ್ದಾರೆ. ಇದು ಕೇಂದ್ರ ಬಿಜೆಪಿ ಸರ್ಕಾರದ ಷಡ್ಯಂತ್ರ ಎಂದು ಕಟುವಾಗಿ ಟೀಕಿಸಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ʼಕಾಸಿಗಾಗಿ ಪೋಸ್ಟಿಂಗ್' ಎಂದು ಹೆಚ್ಡಿಕೆ ಟೀಕೆ.. ರಾಮಲಿಂಗಾರೆಡ್ಡಿ ತಿರುಗೇಟು!