ಬೆಂಗಳೂರು: ಡಿ.ಜೆ ಹಳ್ಳಿ ಗಲಭೆ ಪ್ರಕರಣ ಸೇರಿದಂತೆ ಕಾನೂನು ಕೈಗೆತ್ತಿಕೊಳ್ಳುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಸಿ.ಟಿ ರವಿ ಆಗ್ರಹಿಸಿದ್ದಾರೆ.
ಕೆಲವರಿಗೆ ತಾವು ಕಾನೂನನ್ನು ಮೀರಿದವರು ಎಂಬ ಭಾವನೆಯಿದೆ. ಡಿ.ಜೆ ಹಳ್ಳಿ ಗಲಭೆ ಪ್ರಕರಣವನ್ನು ಖಂಡಿಸುತ್ತೇನೆ. ಪತ್ರಕರ್ತರು, ಪೊಲೀಸರು, ಅಮಾಯಕ ಸಾರ್ವಜನಿಕರ ಮೇಲೆ ಹಲ್ಲೆ ಮಾಡಿರುವುದು ಪೂರ್ವಯೋಜಿತ ಎಂಬಂತೆ ಕಾಣಿಸುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಕಲ್ಲು, ದೊಣ್ಣೆ, ಪೆಟ್ರೋಲ್, ಬಾಂಬ್ ಗಲಭೆಕೋರರಿಗೆ ಬಂದಿದ್ದೆಲ್ಲಿಂದ? ಗಲಭೆ ಪೂರ್ವಯೋಜಿತ, ಗಲಭೆ ನಡೆಸುವವರಿಗೆ ಒಂದು ನೆಪ ಬೇಕಿತ್ತು. ಇವರುಗಳನ್ನು ಬೇರು ಸಹಿತ ಮಟ್ಟ ಹಾಕಲೇಬೇಕು ಎಂದು ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.
ಡಿ.ಜೆ ಹಳ್ಳಿ ಪ್ರದೇಶದಲ್ಲಿ ದುಷ್ಕರ್ಮಿಗಳು ಶಾಸಕ ಅಖಂಡ ಶ್ರೀನಿವಾಸ್ ರವರ ಮನೆ, ಪೊಲೀಸ್ ಠಾಣೆ, ಸಾರ್ವಜನಿಕ ಆಸ್ತಿಗಳ ಮೇಲೆ ದಾಳಿ ಮಾಡಿರುವುದು ಅತ್ಯಂತ ಖಂಡನೀಯ. ಮಾಧ್ಯಮ ವರದಿಗಾರರು, ಪೊಲೀಸರ ಮೇಲೆ ಹಲ್ಲೆ ಮಾಡಿ ಕಾನೂನು ಸುವ್ಯವಸ್ಥೆಗೆ ಭಂಗ ತಂದಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ತೆಗೆದಕೊಳ್ಳಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಒತ್ತಾಯಿಸಿ ಟ್ವೀಟ್ ಮಾಡಿದ್ದಾರೆ.